*ಗಂಗಾಧರ ಕಲ್ಲಪಳ್ಳಿ.
ಸುಳ್ಯ:ನಮ್ಮ ದೇಶಿಯ ಗೋ ಸಂಪತ್ತಾದ ಮಲೆನಾಡು ಗಿಡ್ಡ ತಳಿಗಳ ಸಂರಕ್ಷಣೆ ಮತ್ತು ಸಂವರ್ಧನೆಯ ಅಭಿಯಾನವೊಂದು ರಾಜ್ಯದ ಸಾವಯವ ಕೃಷಿ ಕ್ಷೇತ್ರದಲ್ಲಿ ಮೌನ ಕ್ರಾಂತಿ ಮಾಡುತಿದೆ.ಸುಳ್ಯ ತಾಲೂಕಿನ ಮುರುಳ್ಯ ಗ್ರಾಮದ ಅಲೆಕ್ಕಾಡಿ ನೀರುಡೇಲುವಿನ ಕೃಷಿಕ, ಗೋಪ್ರೇಮಿ ಅಕ್ಷಯ್ ಆಳ್ವ ನೇತೃತ್ವದಲ್ಲಿ ಕಳೆದ ಐದು ವರ್ಷಗಳಿಂದ ನಡೆಯುತ್ತಿರುವ’ಮಲೆನಾಡು ಗಿಡ್ಡ ತಳಿಯ ಸಂರಕ್ಷಣೆ ಮತ್ತು ಸಂವರ್ಧನಾ ಅಭಿಯಾನ’ದ ಮೂಲಕ ರಾಜ್ಯದಾದ್ಯಂತ ಸುಮಾರು
5 ಸಾವಿರಕ್ಕೂ ಅಧಿಕ ಜೋಡಿ ಮಲೆನಾಡು ಗಿಡ್ಡ ತಳಿ ಅಂದರೆ 10 ಸಾವಿರಕ್ಕೂ ಅಧಿಕ ಗೋವುಗಳನ್ನು ಉಚಿತವಾಗಿ ವಿತರಿಸಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮತ್ತು ಹೊರ ರಾಜ್ಯಗಳ ಮನೆ ಮನೆಗಳಲ್ಲಿ ಮಲೆನಾಡ ಗಿಡ್ಡ ಗೋವುಗಳ ಅಂಬಾ ಕರೆ ಅನುರಣಿಸಿದೆ.. ಶುದ್ಧ ಹಾಲು,ಮೊಸರು, ಬೆಣ್ಣೆ, ತುಪ್ಪದ ರುಚಿ ಹರಡುತಿದೆ.. ಸಾವಯವ ಕೃಷಿಗೆ ಬೇಕಾದ ಸೆಗಣಿ, ಗೋಮೂತ್ರ, ಗೊಬ್ಬರವನ್ನು ನೀಡುತಿದೆ.ಹಿಂದೆ ಅಕ್ಷಯ್ ಆಳ್ವ ಅವರ ಮನೆಯಲ್ಲಿ ಜರ್ಸಿ,ಹೆಎಫ್ ದನಗಳು ಇದ್ದವು. ಮೇವು ಮತ್ತಿತರ ನಿರ್ವಹಣೆ ಕಷ್ಟವಾದಾಗ ಅದನ್ನು ಸಾಕುವುದು ಕಷ್ಟವೆನಿಸಿತು. ಆ ಸಂದರ್ಭದಲ್ಲಿ

ಪ್ರಸನ್ನ ಭಟ್ ಗುಂಡಿಮಜಲು ಅವರು ಮಲೆನಾಡು ಗಿಡ್ಡ ಗೋವುಗಳನ್ನು ಸಾಕುವುದು ನೋಡಿ ಪ್ರೇರೇಪಣೆ ಪಡೆದು ಅಕ್ಷಯ್ ಆಳ್ವ ಕೂಡ ಮಲೆನಾಡು ಗಿಡ್ಡ ಗೋವುಗಳನ್ನು ಸಾಕಲು ಆರಂಭಿಸಿದರು. ಮಾತ್ರವಲ್ಲದೆ ಸಮಾನ ಮನಸ್ಕರಲ್ಲಿ ಈ ತಳಿ ಸಂರಕ್ಷಣೆ ಮತ್ತು ಸಂವರ್ಧನೆಯ ಮಹತ್ವವನ್ನು ಚರ್ಚಿಸಿ ಅಭಿಯಾನವನ್ನು ಆರಂಭಿಸಿದರು. ಅಂದರೆ ವಿವಿಧ ಕೃಷಿಕರಲ್ಲಿ, ಗೋಸಾಕಣೆ ಮಾಡುವವರಲ್ಲಿ ಇರುವ ಹೆಚ್ಚುವರಿ ಮಲೆನಾಡು ಗಿಡ್ಡ ತಳಿಯ ಕರುಗಳನ್ನು ಪಡೆದು ಸಾಕಲು ಆಸಕ್ತಿ ಇರುವ ಕೃಷಿಕರಿಗೆ ಒಂದು ಗಂಡು ಮತ್ತು ಒಂದು ಹೆಣ್ಣು ಕರುವನ್ನು ಉಚಿತವಾಗಿ ನೀಡಲು
ಆರಂಭಿಸಿದರು. ಸಮಾನ ಮನಸ್ಕರು, ಸಾವಯವ ಕೃಷಿಕರು, ಗೋಪ್ರೇಮಿಗಳು ಅಭಿಯಾನಕ್ಕೆ ಕೈ ಜೋಡಿಸಿದರು. ರಾಘವೇಶ್ವರ ಶ್ರೀಗಳು ಸೇರಿದಂತೆ ವಿವಿಧ ಮಠಗಳ ಸ್ವಾಮೀಜಿಗಳು ಪ್ರೋತ್ಸಾಹ ನೀಡಿದರು. ಇದರಿಂದ ಅಭಿಯಾನ ರಾಜ್ಯದಾದ್ಯಂತ ಪ್ರಚಾರ ಪಡೆಯಿತು. ರಾಘವೇಶ್ವರ ಶ್ರೀಗಳ ಭಕ್ತ ವೃಂದ, ಸಂಘ ಪರಿವಾರ ಸಂಘಟನೆಗಳು, ಸಾವಯವ ಕೃಷಿಕರು, ಗೋಶಾಲೆಗಳು, ಸಾಮಾನ್ಯ ರೈತರು ಅಭಿಯಾನ ತಂಡಕ್ಕೆ ಮಲೆನಾಡ ಗಿಡ್ಡ ಕರುಗಳನ್ನು ನೀಡ ತೊಡಗಿದರು.ಹೀಗೆ ಪಡೆಯುವ ಕರುಗಳನ್ನು ಸಾಕಲು ಆಸಕ್ತಿ ಇರುವ ಕೃಷಿಕರಿಗೆ ನೀಡ ತೊಡಗಿದರು. ಜನರಿಂದ ಜನರಿಗೆ, ಕೃಷಿಕರಿಂದ

ಅಕ್ಷಯ್ ಆಳ್ವ ತಮ್ಮ ಹಟ್ಟಿಯಲ್ಲಿರುವ ಮಲೆನಾಡು ಗಿಡ್ಡ ಗೋವುಗಳ ಜೊತೆ
ಕೃಷಿಕರಿಗೆ ಬಾಯಿ ಮಾತಿನ ಮೂಲಕ ಅಭಿಯಾನ ಹರಡಿತು.ನೂರಾರು ಮಂದಿ ಕೃಷಿಕರು,ಗೋಪ್ರೇಮಿಗಳು ಮಲೆನಾಡು ಗಿಡ್ಡ ಸಾಕಲು ಆಸಕ್ತಿ ವಹಿಸಿ ಮುಂದೆ ಬಂದರು.ಮಲೆನಾಡು ಗಿಡ ಕರುಗಳಿಗೆ ಬಾರಿ ಬೇಡಿಕೆ ಉಂಟಾಯಿತು.ಬೇಡಿಕೆ ಇರಿಸಿವರಿಗೆಲ್ಲ ಜೋಡಿ ಕರುಗಳನ್ನು ನೀಡಿದರು. ಮನೆ ಮನೆಗಳಲ್ಲಿ ಆರೋಗ್ಯಕ್ಕೆ ಪೂರಕವಾದ ಹಾಲು, ಹಾಲುತ್ಪನ್ನಗಳ ತಯಾರಿಕೆಗೆ ಸಾವಯವ ಕೃಷಿ ನಡೆಸಲು ಮುನ್ನುಡಿ ಬರೆಯಿತು.
ಮಾರಾಟ ಮಾಡುವಂತಿಲ್ಲ:
ಮಲೆನಾಡು ಗಿಡ್ಡ ಗೋವನ್ನು ಸಾಕಲು ಆಸಕ್ತಿ ಇರುವವರಿಗೆ ಉಚಿತವಾಗಿ ಒಂದು ಹೆಣ್ಣು ಮತ್ತು ಗಂಡು ಗೋವನ್ನು ಉಚಿತವಾಗಿ ಅಭಿಯಾನದ ಮೂಲಕ ನೀಡಲಾಗುತ್ತದೆ. ಅದನ್ನು ಅವರು ಸಾಕಿ ಸಂವರ್ಧನೆ ಮಾಡಿ ಎಷ್ಟು ಗೋವನ್ನು ಬೇಕಾದರೂ ಸಾಕಬಹುದು. ಅಭಿಯಾನ ತಂಡಕ್ಕೆ ಏನೂ ನೀಡಬೇಕಾಗಿಲ್ಲ.ಆದರೆ ಪಡೆದ ಗೋವನ್ನು ಮಾರಾಟ ಮಾಡುವಂತಿಲ್ಲ. ಸಾಕಲು ಕಷ್ಟವಾದರೆ ಅಭಿಯಾನ ತಂಡಕ್ಕೆ ಹಿಂತಿರುಗಿಸಬೇಕು. ಅದನ್ನು ಮತ್ತೆ ಆಸಕ್ತರಿಗೆ ನೀಡಲಾಗುತ್ತದೆ. ಮಂಡ್ಯ, ಮೈಸೂರು, ಉತ್ತರ ಕರ್ನಾಟಕ,ಬಿಜಾಪುರ, ಚಿತ್ರದುರ್ಗ, ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ರೈತರಿಗೆ ಮಲೆನಾಡ ಗಿಡ್ಡ ಗೋವುಗಳನ್ನು ವಿತರಿಸಲಾಗಿದೆ. ಆಂಧ್ರಪ್ರದೇಶದ, ತಮಿಳುನಾಡು, ಮಹಾರಾಷ್ಟ್ರ ಸೇರಿ ವಿವಿಧ ರಾಜ್ಯಗಳಲ್ಲಿಯೂ ಗೋವುಗಳನ್ನು ನೀಡಿದ್ದಾರೆ.

ಜೋಡೆತ್ತು ಅಭಿಯಾನ:
ಇವರಿಗೆ ಅಭಿಯಾನದಲ್ಲಿ ಗಂಡು ಕರುಗಳು ಹೆಚ್ಚು ಬರತೊಡಗಿದಾಗ ಜೋಡೆತ್ತು ಅಭಿಯಾನ ಆರಂಭಿಸಿದರು. ಸಣ್ಣ ಮತ್ತು ಮಧ್ಯಮ ಕೃಷಿಕರಿಗೆ ಉಳುಮೆ ಮಾಡಲು ಸಹಕಾರಿಯಾಗಲು ಜೋಡೆತ್ತು ಆಭಿಯಾನ ನೆರವಾಯಿತು. ವಿವಿಧ ಭಾಗಗಳಲ್ಲಿ 300ಕ್ಕೂ ಅಧಿಕ ಜೋಡಿ ಎತ್ತುಗಳನ್ನು ಉಚಿತವಾಗಿ ವಿತರಿಸಲಾಯಿತು. ನಾಗಮಂಗಲದಲ್ಲಿ ನಂದಿ ಯಾತ್ರೆ ಸಂದರ್ಭದಲ್ಲಿ15 ಜೋಡಿ ವಿತರಿಸಿದರು. ಚೆನ್ನರಾಯಪಟ್ಟಣದ ಸೂರೆಕಾಯಿಪುರದಲ್ಲಿ 50 ಜೋಡಿ, ಮಂಡ್ಯದ ರೈತ ಶಾಲೆಯ ಮುಖಾಂತರ 100 ಜೋಡೆತ್ತುಗಳನ್ನು ವಿತರಿಸಲಾಯಿತು.ಇದರಿಂದ ಉಳುಮೆ ಮಾಡುವ ಕೃಷಿಕರಿಗೆ, ಸಾವಯವ ಕೃಷಿಗೆ ಹೆಚ್ಚು ಸಹಾಯಕವಾಯಿತು.
ಸಮಾನ ಮನಸ್ಕರ ತಂಡ:ಅಕ್ಷಯ್ ಆಳ್ವ ಅಧ್ಯಕ್ಷರಾಗಿರುವ ಮಲೆನಾಡು ಗಿಡ್ಡ ಸಂರಕ್ಷಣೆ ಮತ್ತು ಸಂವರ್ಧನಾ ಅಭಿಯಾನ ತಂಡದಲ್ಲಿ ಹಲವು ಮಂದಿ ಸಮಾನ ಮನಸ್ಕರು ಕೈಜೋಡಿಸುತ್ತಾರೆ. ಕನ್ನೇರಿ ಮಠದ ಕಾಡ ಸಿದ್ದೇಶ್ವರ ಶ್ರೀಗಳ ನೇತೃತ್ವದಲ್ಲಿ ಜರುಗುವ ಕೃಷಿ ಆಶ್ರಮ, ದೇಶದ ಪ್ರಥಮ ರೈತ ಶಾಲೆ ಎನಿಸಿಕೊಂಡಿರುವ ಮಂಡ್ಯದ ರೈತ ಶಾಲೆ, ಮಳಲಿ ಗೌಡರ ನೇತೃತ್ವದಲ್ಲಿ ಜರುಗುವ ಕಾಡು ಕೃಷಿ ರೈತ ಗುರುಕುಲ, ವಿವಿಧ ಮಠಗಳು, ರೈತ ಸಂಘಟನೆಗಳು,ಸಂಘ ಸಂಸ್ಥೆಗಳ ಮೂಲಕ ಬರುವ ರೈತರ ಬೇಡಿಕೆಗಳಿಗೆ ಮತ್ತು ನೇರವಾಗಿ ಬರುವ ಬೇಡಿಕೆಗಳಿಗೆ ಅನುಗುಣವಾಗಿ ಅಭಿಯಾನದ ಮೂಲಕ ನಿರಂತರ ಮಲೆನಾಡು ಗಿಡ್ಡ ಕರುಗಳನ್ನು ನೀಡಲಾಗುತ್ತದೆ.
ಅಕ್ಷಯ ಆಳ್ವರ ಹಟ್ಟಿಯಲ್ಲಿದೆ 35 ಗೋವುಗಳು:
ಅಭಿಯಾನದಲ್ಲಿ ಇರುವವರು ಎಲ್ಲರೂ ಮಲೆನಾಡು ಗಿಡ್ಡ ಕರುಗಳನ್ನು ಸಾಕಿ ಸಲಹುವವರೇ.ಅಕ್ಷಯ್ ಆಳ್ವ ಅವರ ಹಟ್ಟಿಯಲ್ಲಿ 35 ಮಲೆನಾಡು ಗಿಡ್ಡ ತಳಿಯ ಗೋವುಗಳಿವೆ. ಹುಲ್ಲು ಹಾಕಿ ಸಾಕುವುದರ ಜೊತೆಗೆ ಈ ಗೋವುಗಳನ್ನು ಪ್ರತಿ ದಿನ ಎರಡರಿಂದ ಮೂರು ಗಂಟೆಗಳ ಕಾಲ ಕಾಡು ಗುಡ್ಡದಲ್ಲಿ ಬಿಟ್ಟು ಪ್ರಾಕೃತಿಕವಾಗಿ ಮೇಯಿಸಲಾಗುತ್ತದೆ.
ಮಲೆನಾಡು ಗಿಡ್ಡದ ವಿಶೇಷತೆ:
ಮಲೆನಾಡು ಗಿಡ್ಡ ಗೋವುಗಳು ಹಲವು ವೈವಿಧ್ಯತೆ, ವಿಶೇಷತೆಗಳನ್ನು ಹೊಂದಿದೆ. ಬಿಳಿ, ಕಪ್ಪು, ಕೆಂಪು, ಕಂದು ಹೀಗೆ ನಾನಾ ಬಣ್ಣವೇ ಅದರ ವೈವಿಧ್ಯತೆ. ಇದರ ಹಾಲು ಮತ್ತು ಇತರ ಉತ್ಪನ್ನಗಳು ಔಷಧೀಯ ಗುಣಗಳನ್ನು ಹೊಂದಿದೆ. ಹಲವು ಕಾಡು ಗಿಡಗಳನ್ನು ತಿನ್ನುವುದರ ಜೊತೆಗೆ, ಇದರ ಭುಜವು ಸೂರ್ಯಕಿರಣದ ವಿಟಮಿನ್ ಗಳನ್ನು ಹೀರಿ ಔಷಧೀಯ ಗುಣದ ಹಾಲು ಮತ್ತು ಇತರ ಉತ್ಪನ್ನಗಳನ್ನು ಕೊಡುತ್ತದೆ.ಅದ್ಭುತವಾದ ಔಷಧೀಯ ಗುಣ ಇರುವ ಗೋತಳಿ ಮಲೆನಾಡು ಗಿಡ್ಡ.

ಸೇವಾ ಟ್ರಸ್ಟ್ ರಚನೆ:
ಈ ಅಭಿಯಾನ ಶಾಶ್ವತವಾಗಿ ಮುಂದುವರಿಯಬೇಕು ಎಂಬ ನಿಟ್ಟಿನಲ್ಲಿ ಮುಂದೆ ಗೋಪುರ ಸೇವಾ ಟ್ರಸ್ಟ್ ರಚನೆ ಮಾಡುವ ಯೋಜನೆ ಇದೆ ಎಂದು ಅಕ್ಷಯ್ ಆಳ್ವ ಹೇಳುತ್ತಾರೆ. ಟ್ರಸ್ಟ್ ಮೂಲಕ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.
ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ಮತ್ತು ಗೋಪ್ರೇಮಿಗಳಿಗೆ ಮಲೆನಾಡು ಗಿಡ್ಡ ತಳಿಗಳ ಬಗ್ಗೆ ಮಾಹಿತಿ ಕಾರ್ಯಾಗಾರ, ಪ್ರಾತ್ಯಕ್ಷಿಕೆ ನಡೆಸಲಾಗುವುದು. ಗೋ ಉತ್ಪನ್ನಗಳ ಬಗ್ಗೆ, ಮಲೆನಾಡು ಗಿಡ್ಡ ಗೋವಿನ ಉತ್ಪನ್ನಗಳ ಬಗ್ಗೆ ಮಾಹಿತಿ ನೀಡಲಾಗುವುದು. ಮಕ್ಕಳಿಗೆ ಆಸಕ್ತರಿಗೆ ಗೋವುಗಳ ಜೊತೆ ಬೆರೆಯುವ ಅವಕಾಶ ನೀಡಲಾಗುವುದು. ಈಗಾಗಲೇ ಹಲವು ಶಾಲೆ ಕಾಲೇಜುಗಳಲ್ಲಿ ಗೋಧಾರಿತ ಶಿಕ್ಷಣವನ್ನು ನೀಡಲಾಗುತ್ತದೆ. ಇನ್ನಷ್ಟು ಶಾಲಾ ಕಾಲೇಜುಗಳಲ್ಲಿ ದೇಶಿಯ ಗೋತಳಿಗಳ ಕಾರ್ಯಾಗಾರ, ಶಿಕ್ಷಣ ನೀಡುವ ಯೋಜನೆ ಇದೆ ಎಂದು ಅಕ್ಷಯ್ ಆಳ್ವ ಹೇಳುತ್ತಾರೆ.
ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ:
ಮಲೆನಾಡು ಗಿಡ್ಡ ಗೋತಳಿ ಸಂರಕ್ಷಣೆ ಮತ್ತು ಸಂವರ್ಧನಾ ಅಭಿಯಾನದ ರುವಾರಿ ಅಕ್ಷಯ್ ಆಳ್ವ ಅವರಿಗೆ ಈ ವರ್ಷದ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತ್ತು.ಸದ್ದಿಲ್ಲದೆ ನಡೆಸುವ ಅವರ ಯಶೋಗಾಥೆಗೆ ಇದೀಗ ರಾಜ್ಯೋತ್ಸವಸ ಗರಿ ಮೂಡಿದೆ..!
















