*ಗಣೇಶ್ ಮಾವಂಜಿ.
ಅಂದ ಹಾಗೆ ಮೊನ್ನೆ ಮೊನ್ನೆಯವರೆಗೆ ಕಣ್ಣಾಮುಚ್ಚಾಲೆಯಾಡುತ್ತಿದ್ದ ಮಳೆ ಈಗ ನಾನಿನ್ನು ಬರಲಾರೆ ಎಂದು ಟಾಟಾ ಹೇಳಿ ಹೋದಂತಿದೆ. ಏಕೆಂದರೆ ಮಳೆಯ ಆಗಮನವಾಗದೆ ದಿನಗಳು ತುಂಬಾ ಕಳೆದು ಹೋಗಿವೆ. ಪ್ರತೀ ಬಾರಿ ದೀಪಾವಳಿಯ ಪಟಾಕಿ ಹೊಡಿಸುವ ಸಂದರ್ಭದಲ್ಲಾದರೂ ರಚ್ಚೆ ಹಿಡಿದು ಬರುತ್ತಿದ್ದ ಮಳೆರಾಯ ಈ ಬಾರಿ ದೀಪಾವಳಿಗೂ ಬಾರದೆ ಮುನಿಸುಕೊಂಡು ದೂರ ಸರಿದಿದ್ದಾನೆ ಎಂದೆನಿಸುತ್ತಿದೆ. ಕೆಲ ದಿನಗಳಿಂದ
ಚಳಿಯ ಆಗಮನವಾಗಿ ಕಪಾಟಿನಲ್ಲಿರಿಸಿದ್ದ ದಪ್ಪದ ಕಂಬಳಿ ಅಡಿಗೊಂದು, ಮೇಲೊಂದು ಎಂಬಂತೆ ಮಲಗುವ ಮಂಚವೇರಿದೆ.
ಈಗ ಯಾರೇ ಎದುರಾದರೂ ‘ಎಂತ ಚಳಿ ಅಲ್ವಾ? ಬೆಳಿಗ್ಗೆ ಏಳಲಿಕ್ಕೇ ಮನಸ್ಸು ಬರ್ತಿಲ್ಲ’ ಎಂಬಲ್ಲಿಂದ ಮಾತು ಆರಂಭವಾಗುತ್ತದೆ. ಅದಕ್ಕೆ ಪ್ರತಿಯಾಗಿ ‘ಹೌದಪ್ಪಾ….ಈ ದರಿದ್ರ ಚಳಿಯಿಂದಾಗಿ ಬೇಗ ಏಳಲು ಮನಸ್ಸು ಬಾರದೆ ಹೊದ್ದು ಮಲಗುವಂತಾಗುತ್ತದೆ. ಮತ್ತೆ ಎಲ್ಲಾ ಕೆಲಸಗಳೂ ತಡವಾಗಿ ಹೋಗುತ್ತದೆ’ ಎಂದು ಪ್ರಾಕೃತಿಕ ಆಗು ಹೋಗುಗಳಿಗೆ ಜನರ ಬೈಗುಳಗಳ ಮಳೆ ಸುರಿಯತೊಡಗುತ್ತದೆ.
ವರ್ಷವನ್ನು ಮಳೆಗಾಲ, ಚಳಿಗಾಲ, ಬೇಸಿಗೆ ಕಾಲಗಳೆಂದು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಕಾಲಕಾಲಕ್ಕೆ ಬದಲಾಗುವ ಹವಾಮಾನದ ಈ ನೈಸರ್ಗಿಕ ಬದಲಾವಣೆಗಳನ್ನು ಒಪ್ಪಿಕೊಳ್ಳುವ ಜನರು ಕೆಲವೇ ಕೆಲವು ಜನರು ಮಾತ್ರ! ಉಳಿದ ಜನರೆಲ್ಲರೂ ಈ ಬದಲಾವಣೆಯನ್ನು ಹಳಿಯುವವರೇ ಆಗಿದ್ದಾರೆ.

ವಾಡಿಕೆಯಂತೆ ಮುಂಗಾರು ಮಳೆ ಆರಂಭವಾದಾಗ ಮಳೆಗಾಲಕ್ಕೆ ಮುನ್ನ ಆಗಲೇಬೇಕಾದ ಕೆಲವೊಂದು ಕೆಲಸಗಳು ಆಗಿರುವುದಿಲ್ಲ. ಆಗ ಮಳೆ ಒಂದಷ್ಟು ದಿನ ತಡವಾಗಿ ಬರಲಿ ಎಂದು ಬೇಡಿಕೊಳ್ಳುವವರೂ ಇರುತ್ತಾರೆ. ಬೆಳೆದ ಪೈರುಗಳು ನೀರಿಲ್ಲದೆ ಒಣಗತೊಡಗಿದಾಗ, ಕುಡಿಯಲು ಕೂಡಾ ನೀರಿಲ್ಲದೆ ಪರದಾಡುವಂತಾದಾಗ ಒಮ್ಮೆ ಮಳೆ ಬಂದರೆ ಸಾಕಪ್ಪಾ ಎಂದು ಗೋಗರೆಯುವವರೂ ಇರುತ್ತಾರೆ.ನಡು ಮಳೆಗಾಲದಲ್ಲಿ ಮದುವೆ, ನಿಶ್ಚಿತಾರ್ಥ ಅಥವಾ ಇನ್ಯಾವುದೇ ಕಾರ್ಯಕ್ರಮ ಆಯೋಜಿಸಿದವರು ತೆಂಗಿನ ಕಾಯಿ ತೆಗೆದಿರಿಸಿ ಕಾರ್ಯಕ್ರಮದ ದಿನ ಮಳೆ ಬಾರದಿರಲೆಂದು ಊರ ದೇವರಿಗೆ ಹರಕೆ ಹೇಳುವವರೂ ಇರುತ್ತಾರೆ!
ಮಳೆ ಯಾವಾಗ ಬಂದರೂ ಒಂದಷ್ಟು ಜನ ಮಳೆ ಬರಲಿ ಎಂದು ಹಪಹಪಿಸುವ ಜನ, ಮತ್ತೊಂದಷ್ಟು ಜನ ಈ ದಿನ ಮಳೆ ಬಾರದಿದರಲಿ ಎಂದು ಬೇಡಿಕೊಳ್ಳುವವರು ಇದ್ದೇ ಇರುತ್ತಾರೆ. ಒಬ್ಬನ ಮನೆ ಅಂಗಳಕ್ಕೆ ಬಂದು ಪಕ್ಕದಲ್ಲೇ ಇರುವ ಇನ್ನೊಬ್ಬನ ಮನೆಗೆ ಬರಬಾರದೆಂದರೆ ಹೇಗೆ? ಈ ಜನಕ್ಕೆ ಅಷ್ಟಾದರೂ ಬುದ್ಧಿ ಬೇಡವೇ.?
ಕೆಲ ದಶಕಗಳ ಹಿಂದೆ ಪ್ರಾಥಮಿಕ ಶಾಲಾ ಪಠ್ಯ ಪುಸ್ತಕದಲ್ಲಿ ಕವಿ ಕೆ. ಎಸ್ ನರಸಿಂಹ ಸ್ವಾಮಿ ಬರೆದ ಪದ್ಯದ ಸಾಲುಗಳು ನೆನಪಾಗುತ್ತಿದೆ. ಚಳಿಗಾಲ ಬಂದಾಗ ‘ಎಷ್ಟು ಚಳಿ’ ಎಂದರು,ಬಂತಲ್ಲ ಬೇಸಿಗೆ ‘ಕೆಟ್ಟ ಬಿಸಿಲು’ ಎಂದರು, ಮಳೆ ಬಿತ್ತೊ ‘ಬಿಡದಲ್ಲ ಶನಿ!’ ಎಂಬ ಟೀಕೆ, ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!..
ಬಿಸಿಲೇರಿ ಬೆವರು ಹರಿಯುವಂತಾದಾಗ ಈ ಕೆಟ್ಟ ಬಿಸಿಲು ಸರಿದು ಯಾವಾಗೊಮ್ಮೆ ಮಳೆಯ ಆಗಮನ ಆಗುತ್ತದೋ ಎಂಬ ನಿರೀಕ್ಷೆ ಹೆಚ್ಚುತ್ತದೆ. ಅದೇ ಮಳೆ ಬಂದಾಗ ಈ ಶನಿ ಮಳೆ ಒಮ್ಮೆ ಬಿಟ್ಟಿದ್ದರೆ ಸಾಕಿತಪ್ಪಾ ಎಂದು ಬೇಡುವವರೂ ಇರುತ್ತಾರೆ.

ಹೌದು… ಹೊರಗೆಲ್ಲೋ ಹೋಗಿದ್ದಾಗ ಮಳೆ ಬಂದು ಒದ್ದೆ ಆಗುವಂತಾದಾಗ ‘ಈ ಸುಡುಗಾಡಿನ ಮಳೆ ಇವತ್ತೇ ಬರಬೇಕೋ’ ಎನ್ನುತ್ತಾರೆ. ಮಳೆ ಬರದಿದ್ದರೆ ‘ಛೇ.., ಈ ಮಳೆಗೆ ಬರಲಿಕ್ಕೇನು ರೋಗ?’ ಎಂದು ಜರೆಯುವವರೂ ಇರುತ್ತಾರೆ.
ಈಗ ಚಳಿಗಾಲದ ಸರದಿ. ಸೂರ್ಯ ಮುಳುಗಿ ಕತ್ತಲಾವರಿಸಿದಂತೆಲ್ಲಾ ಚಳಿಯ ತೀವ್ರತೆ ಹೆಚ್ಚುತ್ತದೆ. ಕೆಲಸವೇನೂ ಇರದಿದ್ದರೆ ಹೊದ್ದು ಮಲಗಿಬಿಡಬಹುದು.ಆದರೆ ಹೊರಗೆಲ್ಲಾದರೂ ಹೋಗುವಾಗ, ಹೋಗಿ ಹಿಂತಿರುಗುವಾಗ ಕೊರೆಯುವ ಚಳಿ ಮೈ ಸೋಕಿದಾಗ ಚಳಿಗೆ ಹಿಡಿಶಾಪ ಹಾಕದಿರುವವರು ಇಲ್ಲವೇ ಇಲ್ಲ ಎನ್ನಬಹುದು.
ಮೈ ಕೊರೆಯುವ ಚಳಿಯನ್ನು ಒದ್ದೋಡಿಸಲು ಅಂದು ಹಾಗೂ ಇಂದಿನ ವ್ಯವಸ್ಥೆಗಳಲ್ಲಿ ಅಜಗಜಾಂತರ ವ್ಯತ್ಯಾಸ ಇದೆ.ಅಂದು ಹೆಚ್ಚಿನ ಎಲ್ಲಾ ಮನೆಗಳ ಆರ್ಥಿಕ ಪರಿಸ್ಥಿತಿ ಒಂದೇ ರೀತಿಯಾಗಿದ್ದುದರಿಂದ ಈಗಿನಂತೆ ಜರ್ಕಿನ್ ಆಗಲಿ, ನುಣುಪಾದ ದಪ್ಪದ ಕಂಬಳಿ ಹೊದ್ದು ಗೊರಕೆ ಹೊಡಿಯುವವರ ಸಂಖ್ಯೆ ತೀರಾ ಕಡಿಮೆಯಾಗಿತ್ತು. ಹಾಗಾಗಿ ಹೆಚ್ಚಿನ ಎಲ್ಲರೂ ಹರಿದ ಹಳೆಯ ಅಪ್ಪನ ಅಂಗಿಯನ್ನೋ, ಅಮ್ಮನ ಸೀರೆಯನ್ನೋ ಹೊದ್ದುಕೊಂಡು ಚಳಿಗೆ ಮದ್ದರೆಯುವ ಪ್ರಯತ್ನ ಮಾಡುತ್ತಿದ್ದರು. ಕತ್ತಲು ಕಳೆದು ಬೆಳಗಾದಾಗ ಒಲೆಯ ಮುಂಭಾಗ ಮಣೆಯಲ್ಲಿ ಕುಳಿತು ಅಂಗಾಂಗಗಳನ್ನು ಬೆಂಕಿಯ ಶಾಖಕ್ಕೆ ಒಡ್ಡಲಾಗುತ್ತಿತ್ತು. ಇಲ್ಲವೇ ಅಂಗಳದಾಚೆ ಒಂದಷ್ಟು ಕಟ್ಟಿಗೆ ಸೇರಿಸಿ ಅದಕ್ಕೆ ಬೆಂಕಿ ಸೋಕಿಸಿ ಮೈ ಕಾಯಿಸಿ ಚಳಿ ಓಡಿಸಲು ಕಸರತ್ತು ಮಾಡಲಾಗುತ್ತಿತ್ತು.

ಈಗ ಹಾಗಿಲ್ಲ. ಕಟ್ಟಿಗೆಯ ಒಲೆಯ ಬದಲಾಗಿ ಗ್ಯಾಸ್ ಸ್ಟೌ ಎಂಟ್ರಿ ಕೊಟ್ಟಿದೆ. ಅದರಲ್ಲಿ ಮೈ ಕಾಯಿಸಿಕೊಳ್ಳುವುದು ಅಷ್ಟರಲ್ಲೇ ಇದೆ. ಇನ್ನು ಕೆಲ ಮನೆಗಳಲ್ಲಿ ಒಲೆ ಇದ್ದರೂ ಅವುಗಳು ನೆಲದಲ್ಲಿಲ್ಲದೆ ಸೊಂಟದಷ್ಟೆತ್ತರಕ್ಕೆ ಏರಿ ಅಂದಿನ ಹಾಗೆ ಮೈ ಕಾಯಿಸಲು ಸೂಕ್ತ ಅನಿಸುವುದೇ ಇಲ್ಲ. ಹಾಗಾಗಿ ಹೆಚ್ಚಿನ ಎಲ್ಲರೂ ಸೂರ್ಯ ಪುತ್ರರಾಗಿ ಹೊತ್ತೇರಿದ ಮೇಲಷ್ಟೇ ಎದ್ದು ಗಡಿಬಿಡಿಯಲ್ಲೇ ಕೆಲಸದಲ್ಲಿ ತೊಡಗಿಕೊಳ್ಳುವಂತಾಗಿದೆ.
ಅಂದಾಗಲಿ, ಇಂದಾಗಲಿ ಹೊದ್ದು ಮಲಗುವವರಿಗೆ ಚಳಿ ಎಂಬುದು ಸುಖ ನಿದ್ರೆಯನ್ನೂ ತರಬಲ್ಲದು. ಆದರೆ ಚಳಿಯಲ್ಲೇ ಹೊಟ್ಟೆಹೊರೆಯುವ ಕಾಯಕದಲ್ಲಿ ತೊಡಗುವವರಿಗೆ ಚಳಿ ಎಂದು ಮುದುಡಿ ಮಲಗಲಾಗುತ್ತದೆಯೇ? ಖಂಡಿತಾ ಇಲ್ಲ. ಬೆಳೆ ಬೆಳೆಯುವ ರೈತನಿಗೆ, ಮನೆಮನೆಗೆ ತೆರಳಿ ಪೇಪರ್ ಹಾಕುವವರಿಗೆ, ಹಾಲು ಹಾಕುವವರಿಗೆ, ಬೆಳಗ್ಗಿನ ಪಾಳಿಯ ಕರ್ತವ್ಯದಲ್ಲಿ ತೊಡಗುವವರಿಗೆ…, ಹೀಗೆ ಕೊರೆಯುವ ಚಳಿ ಇದ್ದರೂ ಮೈ ಚಳಿ ಬಿಟ್ಟು ಕೆಲಸದಲ್ಲಿ ನಿರತರಾಗುವವರಿಗೆ ಚಳಿಯೊಂದಿಗೆ ಹೋರಾಟ ನಡೆಸದೆ ಬೇರೆ ವಿಧಿ ಇರುವುದಿಲ್ಲ. ಈಗಾದರೆ ಜರ್ಕಿನ್, ಸ್ವೆಟರ್, ಕೈಗೆ ಗ್ಲೌಸ್, ಕಾಲಿಗೆ ಕಾಲ್ಚೀಲ…, ಹೀಗೆ ಚಳಿಯನ್ನು ಓಡಿಸಲು ನಾನಾ ಸೌಲಭ್ಯಗಳು ಲಭ್ಯವಿವೆ. ಆದರೆ ಹಿಂದಿನ ಕಾಲದಲ್ಲಿ ಇದ್ಯಾವುದರ ಮೊರೆ ಹೋಗದೆ ಇದ್ದ ವ್ಯವಸ್ಥೆಯಲ್ಲೇ ಒಗ್ಗಿಕೊಂಡು ಹೋಗಿ ಜೀವನ ನಡೆಸುವುದು ಅನಿವಾರ್ಯ ಆಗಿತ್ತು.

ಇರಲಿ. ಚಳಿ, ಮಳೆ, ಬಿಸಿಲು ಇವೆಲ್ಲವೂ ಪ್ರಕೃತಿಯ ಸಹಜ ಕೊಡುಗೆಗಳು. ಅವುಗಳಿಲ್ಲದೆ ಬದುಕಿನ ಚಕ್ರ ಸಾಗುತ್ತದೆ ಎಂದರೆ ಅದಕ್ಕಿಂತ ಮೂರ್ಖತನ ಮತ್ತೊಂದಿರಲಾರದು. ಒಂದೊಂದು ಋತುವಿಗೂ ಅದರದ್ದೇ ಆದ ಮಹತ್ವವಿದೆ. ಮಳೆ ಬಂದಾಗ ಮಳೆ ರಗಳೆ ಎನ್ನುವ ನಾವು, ಬಿಸಿಲು ಬಂದಾಗ ಬೆವರಲು ಸಿದ್ಧವಿರದ ನಾವು, ಚಳಿ ಬಂದಾಗ ಚಳಿಯನ್ನೂ ಸಹಿಸಲು ನಾವು ತಯಾರಿಲ್ಲ. ಹಾಗಾದರೆ ನಮಗೆ ಬೇಕಾದ ಹವಾಮಾನ ಯಾವುದು ಎಂಬ ಪ್ರಶ್ನೆಗೆ ಮಾತ್ರ ನಮ್ಮಲ್ಲೇ ಉತ್ತರವಿಲ್ಲ!
ಏನೇ ಇರಲಿ, ಚಳಿಗಾಲವೆಂದರೆ ಕೆಲವರಿಗೆ ಕಂಬಳಿಯೊಳಗಿನ ಸುಖವಾದ ನಿದ್ದೆ. ಮತ್ತೆ ಕೆಲವರಿಗೆ ಮುಂಜಾನೆಯ ಮಂಜಿನ ನಡುವೆ ಕೆಲಸಕ್ಕೆ ಹೊರಡುವ ಅನಿವಾರ್ಯತೆ. ಹೀಗೆ ಚಳಿಯ ಅನುಭವ ಒಬ್ಬೊಬ್ಬರಿಗೆ ಒಂದೊಂದು ರೀತಿಯದ್ದು. ಪ್ರಕೃತಿಯ ಯಾವ ಋತುವನ್ನೂ ದೂರುವ ಬದಲು ಅದರ ಸೊಬಗನ್ನು ಆಸ್ವಾದಿಸುವ ಮನೋಭಾವ ನಮ್ಮದಾಗಬೇಕಾಗಿದೆ.
ಇಲ್ಲದಿದ್ದರೆ ಚಳಿಗಾಲ ಕಳೆದು ಬೇಸಿಗೆ ಕಾಲಿಟ್ಟಾಗ ಮತ್ತೆ ಅದೇ ಬಿಸಿಲಿಗೆ ಬೈಯುವ ನಮ್ಮ ಸಹಜ ಪರಿಪಾಠ ಮತ್ತೆ ಮುಂದುವರಿಯುತ್ತದೆ ಎಂಬುದರಲ್ಲಿ ಸಂದೇಹವೇ ಇಲ್ಲ.
(ಗಣೇಶ್ ಮಾವಂಜಿ ಹಿರಿಯ ಪತ್ರಕರ್ತರು ಅಂಕಣಕಾರರು)

















