ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಇಂದಿನಿಂದ ಆರಂಭವಾಗಲಿದೆ. ಅಧಿವೇಶನದಲ್ಲಿ ಕಾವೇರಿದ ಚರ್ಚೆ, ಕೋಲಾಹಲ ನಡೆಯುವ ಸಾಧ್ಯತೆಗಳಿವೆ.ಸಂಸತ್ತಿನ ಕಲಾಪ ಸುಗಮವಾಗಿ ನಡೆಯಲು ಸರ್ಕಾರವು ವಿರೋಧ ಪಕ್ಷಗಳ ಸಹಕಾರ ಕೋರಿದೆ. ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ನೇತೃತ್ವದಲ್ಲಿ ಭಾನುವಾರ ನಡೆದ ಸರ್ವಪಕ್ಷಗಳ ಸಭೆಯಲ್ಲಿ
ವಿರೋಧ ಪಕ್ಷಗಳು ಹಲವು ವಿಷಯಗಳನ್ನು ಪ್ರಸ್ತಾಪಿಸಿ, ಚರ್ಚೆಗೆ ಅವಕಾಶ ನೀಡಬೇಕೆಂದು ಕೋರಿವೆ.
ಸರ್ವ ಪಕ್ಷಗಳ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ‘ಸಭೆ ಅತ್ಯಂತ ರಚನಾತ್ಮಕವಾಗಿ ನಡೆಯಿತು. ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳು ಸಮನ್ವಯದೊಂದಿಗೆ ಒಟ್ಟಾಗಿ ಕೆಲಸ ಮಾಡಬೇಕಿದೆ’ ಎಂದು ಹೇಳಿದರು.
‘ವಿವಿಧ ಪಕ್ಷಗಳು ಸಭೆಯಲ್ಲಿ ಹಲವು ವಿಷಯಗಳನ್ನು ಎತ್ತಿವೆ. ಆಪರೇಷನ್ ಸಿಂಧೂರದಂತಹ ವಿಷಯಗಳ ಕುರಿತು ಸರ್ಕಾರ ಮುಕ್ತ ಮನಸ್ಸಿನೊಂದಿಗೆ ಚರ್ಚೆಗೆ ಸಿದ್ದವಾಗಿದೆ’ ಎಂದು ತಿಳಿಸಿದರು.
ಸರ್ವಪಕ್ಷಗಳ ಸಭೆಯಲ್ಲಿ 51 ಪಕ್ಷಗಳ 54 ಪ್ರತಿನಿಧಿಗಳು ಭಾಗವಹಿಸಿದ್ದು, ಅವರಲ್ಲಿ 40 ಮಂದಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು.ವಿರೋಧ ಪಕ್ಷಗಳ ನಾಯಕರಾದ ಕಾಂಗ್ರೆಸ್ನ ಗೌರವ್ ಗೊಗೊಯ್, ಸಮಾಜವಾದಿ ಪಕ್ಷದ ರಾಮಗೋಪಾಲ್ ಯಾದವ್, ಸಿಪಿಎಂನ ಜಾನ್ ಬ್ರಿಟ್ಟಾಸ್ ಮತ್ತು ಸಿಪಿಐನ ಪಿ.ಸಂತೋಷ್ ಕುಮಾರ್ ಅವರು ಪಹಲ್ಗಾಮ್ ಭಯೋತ್ಪಾದಕ ದಾಳಿ, ಟ್ರಂಪ್ ಹೇಳಿಕೆ ಮತ್ತಿತರ ವಿಷಯಗಳ ಕುರಿತು ಸಂಸತ್ತಿನಲ್ಲಿ ನಡೆಯುವ ಚರ್ಚೆಗಳಿಗೆ ಪ್ರಧಾನಿ ಮೋದಿ ಅವರು ಪ್ರತಿಕ್ರಿಯಿಸಬೇಕು ಎಂದು ಒತ್ತಾಯಿಸಿದ್ದಾರೆ.














