ಪಾಟ್ನಾ:ಬಿಹಾರದ ರಾಜಗೀರ್ನಲ್ಲಿ ಸ್ಥಾಪಿಸಲಾದ ನಳಂದ ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್ ಅನ್ನು ನರೇಂದ್ರ ಮೋದಿ ಅವರು ಬುಧವಾರ ಉದ್ಘಾಟಿಸಿದರು. ಬಿಹಾರದ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್, ಮುಖ್ಯಮಂತ್ರಿ ನಿತೀಶ್ ಕುಮಾರ್, ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಹಾಗೂ ವಿಜಯ ಕುಮಾರ್ ಸಿನ್ಹಾ ಹಾಗೂ ವಿದೇಶಾಂಗ ಸಚಿವ ಎಸ್.ಜೈಶಂಕರ್ ಭಾಗವಹಿಸಿದ್ದರು. ಆಧುನಿಕ ಹಾಗೂ
ಸಂಶೋಧನಾಧಾರಿತ ಉನ್ನತ ಶಿಕ್ಷಣ ವ್ಯವಸ್ಥೆ ಜಾರಿ ಮೂಲಕ ಭಾರತವು ಜಗತ್ತಿನ ಅತ್ಯಂತ ಪ್ರಮುಖ ಜ್ಞಾನ ಕೇಂದ್ರವನ್ನಾಗಿ ರೂಪಿಸುವ ಯೋಜನೆಯನ್ನು ಸರ್ಕಾರ ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಈ ಸಂದರ್ಭದಲ್ಲಿ ಹೇಳಿದರು.
‘ಉನ್ನತ ಶಿಕ್ಷಣದಲ್ಲಿ ಇಡೀ ಜಗತ್ತಿಗೇ ಈ ವಿಶ್ವವಿದ್ಯಾಲಯವು ಜ್ಞಾನದ ಕೇಂದ್ರವಾಗಿತ್ತು. ಆದರೆ 12ನೇ ಶತಮಾನದಲ್ಲಿ ದಾಳಿಕೋರರಿಂದ ಹಾಳಾಯಿತು. ಆದರೆ ಬೆಂಕಿಯಿಂದ ಜ್ಞಾನವನ್ನು ನಾಶಪಡಿಸಲು ಎಂದಿಗೂ ಸಾಧ್ಯವಾಗದು. ಹೀಗಾಗಿ 21ನೇ ಶತಮಾನದಲ್ಲಿ ಭಾರತ ತನ್ನ ಜ್ಞಾನವನ್ನು ಜಗತ್ತಿಗೆ ಹಂಚಬೇಕಿದೆ. 21ನೇ ಶತಮಾನ ಏಷ್ಯಾದ್ದಾಗಿದೆ. 2047ರ ಹೊತ್ತಿಗೆ ದೇಶ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪ್ರಾಚೀನ ಕಾಲದಲ್ಲಿಯೇ ಭಾರತದಲ್ಲಿ ನಳಂದದಂತಹಾ ಉನ್ನತ ಶಿಕ್ಷಣ ಸಂಸ್ಥೆಗಳಿದ್ದವು ಎಂಬುದೇ ನಮ್ಮ ಹೆಮ್ಮೆ. ಹತ್ತು ವರ್ಷಗಳ ಹಿಂದೆ ಕೇವಲ 100 ಸ್ಟಾರ್ಟ್ಅಪ್ಗಳು ಭಾರತದಲ್ಲಿ ಇದ್ದವು.ಈ ಸಂಖ್ಯೆ ಈಗ 1.3 ಲಕ್ಷಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಪೇಟೆಂಟ್ ಹಕ್ಕು ಪಡೆಯುತ್ತಿರುವ ಮತ್ತು ಸಂಶೋಧನಾ ಲೇಖನಗಳನ್ನು ಪ್ರಕಟಿಸುತ್ತಿರುವ ಭಾರತೀಯರ ಸಂಖ್ಯೆ ವೃದ್ಧಿಸಿದೆ. ಸಂಶೋಧನೆ ಮತ್ತು ನಾವೀನ್ಯತೆಗೆ ಕೇಂದ್ರ ಸರ್ಕಾರವು 1ಲಕ್ಷ ಕೋಟಿ ಅನುದಾನವನ್ನು ಮೀಸಲಿಟ್ಟಿದೆ’ ಎಂದು ಈ ಸಂದರ್ಭದಲ್ಲಿ ಪ್ರಧಾನಿ ಹೇಳಿದರು.
‘ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ಆಗಿದೆ. ಆ ಮೂಲಕ ಯುವ ಸಮುದಾಯದ ಕನಸುಗಳಿಗೆ ರೆಕ್ಕೆ ನೀಡಲಾಗಿದೆ. ನಮ್ಮ ವಿಶ್ವವಿದ್ಯಾಲಯಗಳು ಜಗತ್ತಿನ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿವೆ. ದೇಶದ ಪ್ರಮುಖ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್ಗಳಲ್ಲಿ ಅಂತರರಾಷ್ಟ್ರೀಯ ಮಟ್ಟದ ಸಂಸ್ಥೆಗಳು ತಮ್ಮ ಕೇಂದ್ರಗಳನ್ನು ತೆರೆಯುವ ಮಟ್ಟಿಗೆ ಭಾರತದ ಶಿಕ್ಷಣ ವ್ಯವಸ್ಥೆ ಬೆಳೆದಿದೆ’ ಎಂದರು.ಇದೇ ಸಂದರ್ಭದಲ್ಲಿ ನಳಂದ ಮಹಾವಿಹಾರದಲ್ಲಿ ಮೋದಿ ಕೆಲ ಸಮಯ ಕಳೆದರು.