ಸುಳ್ಯ: 35 ವರ್ಷಗಳ ಸುದೀರ್ಘ ಸೇವೆಯ ಬಳಿಕ
ಸುಳ್ಯ ಶ್ರೀ ಶಾರದಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ದಯಾಮಣಿ.ಕೆ. ಅವರು ಎ.30ರಂದು ಸೇವೆಯಿಂದ ನಿವೃತ್ತರಾದರು. ಪಂಜ ಕಂಬಳ ಪುಟ್ಟಣ್ಣ ಗೌಡ ಹಾಗೂ ಸುಶೀಲ.ಕೆ. ದಂಪತಿಯ ಪುತ್ರಿಯಾಗಿರುವ ದಯಾಮಣಿಯವರು ಪ್ರಾಥಮಿಕ, ಪ್ರೌಢ ಮತ್ತು ಪಿ.ಯು. ವಿದ್ಯಾಭ್ಯಾಸವನ್ನು
ಪಂಜದಲ್ಲಿ ಪೂರೈಸಿ, ಸುಳ್ಯ ಎನ್.ಎಂ.ಸಿ.ಯಲ್ಲಿ ಪದವಿ ಹಾಗೂ ಮಂಗಳೂರು ಯುನಿವರ್ಸಿಟಿಯಲ್ಲಿ ಸ್ನಾತಕೋತ್ತರ ಪದವಿ ಪಡೆದರು. ವಿದ್ಯಾಭ್ಯಾಸದ ಬಳಿಕ 1990ರಲ್ಲಿ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢ ಶಾಲೆ ಶಿಕ್ಷಕಿ ಯಾಗಿ ಸೇವೆ ಆರಂಭಿಸಿದರು. ಅಲ್ಲಿ ಕೆಲ ತಿಂಗಳು ಸೇವೆ ಸಲ್ಲಿಸಿ, ಅದೇ ವರ್ಷ ಶ್ರೀ ಸುಬ್ರಹ್ಮಣೇಶ್ವರ ಪದವಿ ಪೂರ್ವ ಕಾಲೇಜು. (ಜೆ ಒ ಸಿ ವಿಭಾಗ) ಕನ್ನಡ ಉಪನ್ಯಾಸಕಿಯಾಗಿ ಸೇವೆಗೆ ಸೇರಿದರು. ನಂತರ 9-7-1991ರಂದು ಸುಳ್ಯ ಶ್ರೀ ಶಾರದಾ ಪದವಿ ಪೂರ್ವ ಮಹಿಳಾ ಕಾಲೇಜು ಆರಂಭವಾದ ಸಂದರ್ಭ ಕನ್ನಡ ಉಪನ್ಯಾಸಕರಾಗಿ ಕರ್ತವ್ಯಕ್ಕೆ ಹಾಜರಾದರು.2009ರಲ್ಲಿ ಸಂಸ್ಥೆಯ ಪ್ರಾಂಶುಪಾಲರಾಗಿ ಅಧಿಕಾರ ವಹಿಸಿ ಕೊಂಡರು.ಸುಮಾರು 35 ವರ್ಷಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ.

ಶ್ರೀ ಶಾರದಾ ಪದವಿ ಪೂರ್ವ ಕಾಲೇಜಿನ ಕಲಾ, ವಿಜ್ಞಾನ, ವಾಣೀಜ್ಯ ವಿಭಾಗಗಳಲ್ಲಿ ನಿರಂತರ ಶೇಕಡಾ 100 ಫಲಿತಾಂಶ ದಾಖಲಾಗಿ ಜಿಲ್ಲೆ, ರಾಜ್ಯ ಮಟ್ಟದಲ್ಲಿ ಗುರುತಿಸಿಕೊಳ್ಳುವಲ್ಲಿ ಇವರ ಪ್ರಯತ್ನ ಅನನ್ಯ. 2020-21ರ ಶೈಕ್ಷಣಿಕ ವರ್ಷದಲ್ಲಿ ಲಿಪಿ ಶ್ರೀ ಕೆ . ದ್ವಿತೀಯ ಪಿಯುಸಿ ಕಲಾ ವಿಭಾಗದ ಒಂಭತ್ತನೇ ರ್ಯಾಂಕ್, 2023-24 ನೇ ಸಾಲಿನಲ್ಲಿ ಅನುಷ್ಯ ದ್ವಿತೀಯ ಪಿಯುಸಿ ಕಲಾ ವಿಭಾಗದ ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ಹತ್ತನೇ ರ್ಯಾಂಕ್,
2024-25 ನೇ ಸಾಲಿನಲ್ಲಿ ಹರ್ಷಿತ ದ್ವಿತೀಯ ಪಿಯುಸಿ ಕಲಾ ವಿಭಾಗದ ವಾರ್ಷಿಕ ಪರೀಕ್ಷೆಯಲ್ಲಿ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ, 2025-26ನೇ ಸಾಲಿನಲ್ಲಿ ಫಾತಿಮತ್ ಶಹ್ಲಾ ದ್ವಿತೀಯ ಪಿಯುಸಿ ಕಲಾ ವಿಭಾಗದ ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ದ್ವಿತೀಯ ರ್ಯಾಂಕ್, ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದುಕೊಳ್ಳುವಲ್ಲಿಯೂ ದಯಾಮಣಿಯವರು ಶ್ರಮ ವಹಿಸಿದ್ದಾರೆ.ಮಹಿಳಾ ಕಾಲೇಜು ಅಗಿದ್ದ ಶ್ರೀ ಶಾರದಾ ಪದವಿ ಪೂರ್ವ ಕಾಲೇಜು ಇವರ ಅವಧಿಯಲ್ಲಿ ಕೋಎಜ್ಯುಕೇಷನ್ ನೀಡುವ ಮಿಕ್ಸಡ್ ಕಾಲೇಜು ಆಯಿತು. 2026ರಲ್ಲಿ ರಾಜ್ಯ ಶಾಲಾ ಶಿಕ್ಷಣ ಇಲಾಖೆಯ ನೌಕರರ ಸಂಘ ಕೊಡ ಮಾಡಿದ ರಾಜ್ಯ ಮಟ್ಟದ ಅತ್ಯುತ್ತಮ ವಿದ್ಯಾರತ್ನ ಪ್ರಶಸ್ತಿಗೆ ಇವರು ಭಾಜನರಾಗಿದ್ದಾರೆ.
ಪ್ರಸ್ತುತ ಪುತ್ತೂರಿನ ಬೊಳುವಾರಿನಲ್ಲಿ ವಾಸವಾಗಿರುವ ದಯಾಮಣಿಯವರ ಪತಿ ಉಮೇಶ ಮಳುವೇಲು ಅವರು ಪುತ್ತೂರು ಶ್ರೀ ಮಹಾಲಿಂಗೇಶ್ವರ ಐಟಿಐ ಯಲ್ಲಿ ಕಚೇರಿ ಅಧೀಕ್ಷಕರಾಗಿ ಕಾರ್ಯನಿರ್ವಹಿಸಿ 2022ರಲ್ಲಿ ನಿವೃತ್ತರಾಗಿದ್ದಾರೆ.ಪ್ರಸ್ತುತ ದ.ಕ. ಗೌಡ ವಿದ್ಯಾಸಂಘದ ನಿರ್ದೇಶಕರಾಗಿ, ಪುತ್ತೂರಿನ ಎ ವಿ ಜಿ ಇಂಗ್ಲೀಷ್ ಮೀಡಿಯಂ ಶಾಲೆ ಹಾಗೂ ಎ ವಿ ಜಿ ಸೊಸೈಟಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಮಗಳು ಸಹನಾ ಮೆಕ್ಯಾನಿಕಲ್ ಇಂಜಿನಿಯರ್ ಆಗಿದ್ದು, ಅಳಿಯ ದುಷ್ಯಂತ ಮುರುಳ್ಯ ಹೆಚ್.ಆರ್. ಮ್ಯಾನೇಜರ್ ಹಾಗೂ ಮೊಮ್ಮಕ್ಕಳಾದ ಜ್ಯೋತಿರಾದಿತ್ಯ ಹಾಗೂ ಆರಾಧ್ಯಲಕ್ಷ್ಮಿ ಯೊಂದಿಗೆ ದುಬೈಯಲ್ಲಿ ನೆಲೆಸಿದ್ದಾರೆ.













