ಸುಳ್ಯ:ಸುಳ್ಯ ಶ್ರೀ ಶಾರದಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿ ಸ್ವರ್ಣಕಲಾ ಎ.ಎಸ್.ಅಧಿಕಾರ ವಹಿಸಿಕೊಂಡಿದ್ದಾರೆ. ಕಾಲೇಜಿನ ಪ್ರಾಂಶುಪಾಲರಾಗಿದ್ದ ದಯಾಮಣಿ.ಕೆ. ಅವರು ಎ.30ರಂದು ಸೇವೆಯಿಂದ ನಿವೃತ್ತರಾದ ಹಿನ್ನಲೆಯಲ್ಲಿ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕರಾದ ಸ್ವರ್ಣಕಲಾ ಅವರು ಪ್ರಾಂಶುಪಾಲರಾಗಿ ಅಧಿಕಾರ ವಹಿಸಿಕೊಂಡರು. ಅರ್ಥಶಾಸ್ತ್ರ ಸ್ನಾತಕೋತ್ತರ ಪದವೀಧರರಾದ ಸ್ವರ್ಣಕಲಾ ಅವರು 1991ರಲ್ಲಿ
ಶ್ರೀ ಶಾರದ ಪದವಿ ಪೂರ್ವ ಕಾಲೇಜು ಆರಂಭವಾದ ಸಂದರ್ಭದಿಂದಲೇ ಉಪನ್ಯಾಸಕಾರಾಗಿದ್ದಾರೆ. ಸುದೀರ್ಘ 35 ವರ್ಷಗಳ ಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಅವರು ಇದೀಗ ಪ್ರಾಂಶುಪಾಲರಾಗಿ ಅಧಿಕಾರ ವಹಿಸಿಕೊಂಡರು.
ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಪೆರಾಜೆ ಗ್ರಾಮದ ಅಮಚೂರು ದಿವಂಗತ ಸುಬ್ಬಯ್ಯ. ಎ.ಎಂ ಮತ್ತು ದೇವಕಿಯವರ ಪುತ್ರಿಯಾದ ಅವರು ಪ್ರಾಥಮಿಕ ವಿದ್ಯಾಭ್ಯಾಸವನ್ನು

ಕಿರಿಯ ಪ್ರಾಥಮಿಕ ಶಾಲೆ ಅಮಚೂರು,ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಂದ್ರಪ್ಪಾಡಿ, ಹೈಸ್ಕೂಲ್ ವಿದ್ಯಾಭ್ಯಾಸ ಸರಕಾರಿ ಜೂನಿಯರ್ ಕಾಲೇಜ್ ಸುಳ್ಯ ಮತ್ತು ಸರಕಾರಿ ಪ್ರೌಢ ಶಾಲೆ ಗುತ್ತಿಗಾರು,ಕಾಲೇಜು ವಿದ್ಯಾಭ್ಯಾಸವನ್ನು ನೆಹರು ಮೆಮೋರಿಯಲ್ ಕಾಲೇಜು ಸುಳ್ಯ,ಸ್ನಾತಕೋತ್ತರ ಪದವಿಯನ್ನು ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳಗಂಗೋತ್ರಿಯಲ್ಲಿ ಪಡೆದ ಬಳಿಕ ಶ್ರೀ ಶಾರದಾ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಅರ್ಥಶಾಸ್ತ್ರ ಉಪನ್ಯಾಸಕಿಯಾಗಿ ವೃತ್ತಿ ಆರಂಭಿಸಿದರು.
ಕೊಡಗು ಗೌಡ ಶತಮಾನೋತ್ಸವ ಸಹಿತ ಕನ್ನಡ ಸಾಹಿತ್ಯ ಸಮ್ಮೇಳನ, ಅರೆಭಾಷೆ ಸಮ್ಮೇಳನ ಗಳಲ್ಲಿ ವಿಷಯ ಮಂಡಿಸಿದ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಹಲವಾರು ಸಭೆ ಸಮಾರಂಭಗಳಲ್ಲಿ ಭಾಗವಹಿಸಿದ ಅನುಭವ ಹೊಂದಿದ್ದಾರೆ.
ಸ್ವರ್ಣಕಲಾ ಅವರು ಮಡಿಕೇರಿ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರು ಹಾಗೂ ಕೇಂದ್ರ ಸರಕಾರದ ಕಾಫಿ ಮಂಡಳಿಯ ಸದಸ್ಯರಾದ ಬೆಟ್ಟಗೇರಿಯ ತಳೂರು ಎ.ಕಿಶೋರ್ ಕುಮಾರ್ ಅವರ ಪತ್ನಿ. ಪುತ್ರ ಸೋಹನ್ ಟಿ. ಕೆ. ಮೈಸೂರು ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ.













