ನವದೆಹಲಿ: ‘ಮನ್ ಕೀ ಬಾತ್’ ರೇಡಿಯೊ ಕಾರ್ಯಕ್ರಮದ 123ನೇ ಸಂಚಿಕೆಯಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ‘ಪ್ರತಿ ವರ್ಷ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಂದು ವಿವಿಧ ಕ್ಷೇತ್ರಗಳಿಂದ ಲಕ್ಷಾಂತರ ಜನರು ಭಾಗವಹಿಸುವಿಕೆಯಿಂದ ಎಂದಿಗಿಂತಲೂ ಹೆಚ್ಚು ಸುಂದರವಾಗುತಿದೆ.‘ಪ್ರತಿಯೊಬ್ಬರು ಯೋಗದ ಶಕ್ತಿಯನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.
ಈ ವರ್ಷವೂ ಜೂನ್ 21ರಂದು ಕೋಟ್ಯಂತರ ಜನರು ಅಂತರರಾಷ್ಟ್ರೀಯ
ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ್ದರು. ಯೋಗ ದಿನ ಆಚರಿಸುವುದನ್ನು 10 ವರ್ಷಗಳ ಹಿಂದೆ ಆರಂಭಿಸಲಾಯಿತು. ಪ್ರತಿ ವರ್ಷವು ಯೋಗ ದಿನಾಚರಣೆಯು ಎಂದಿಗಿಂತಲೂ ಹೆಚ್ಚು ಭವ್ಯವಾಗುತ್ತಿದೆ. ಇದು ಹೆಚ್ಚಿನ ಜನರು ತಮ್ಮ ದೈನಂದಿನ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳುತ್ತಿರುವುದನ್ನು ಸೂಚಿಸುತ್ತದೆ’ ಎಂದು ಅವರು ತಿಳಿಸಿದ್ದಾರೆ.ದೇಶದಾದ್ಯಂತ ನಡೆದ ಯೋಗ ದಿನಾಚರಣೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಅವರು ಜನರು ಹೆಚ್ಚು ಉತ್ಸಾಹದಿಂದ ಭಾಗವಹಿಸಿದ್ದು ಸಂತಸ ಮೂಡಿಸಿದೆ’ ಎಂದು ಉಲ್ಲೇಖಿಸಿದರು.
ಉತ್ತರ ಕರ್ನಾಟಕದ ಪ್ರಸಿದ್ಧ ಖಾದ್ಯವಾದ ‘ಬಿಳಿಜೋಳದ ರೊಟ್ಟಿ’ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಮಹಿಳಾ ಸ್ವಾವಲಂಬನೆ ಭಾರತದ ಅಭಿವೃದ್ಧಿಯ ಹೊಸ ಮಂತ್ರವಾಗಿದ್ದು, ಮಹಿಳೆ ನಮ್ಮ ತಾಯಿ, ಸಹೋದರಿ, ಮಗಳಾಗಿ ಇಡೀ ಸಮಾಜಕ್ಕೆ ಹೊಸ ದಿಕ್ಕು ತೋರಿಸುತ್ತಿದ್ದಾಳೆ. ಈ ನಿಟ್ಟಿನಲ್ಲಿ ನೀವು ಕಲಬುರಗಿ ಮಹಿಳೆಯರ ಸಾಧನೆಯನ್ನು ತಿಳಿಯಲೇಬೇಕು. ಕಲಬುರಗಿ ಮಹಿಳೆಯರು ಆತ್ಮನಿರ್ಭರ ಅಭಿಯಾನದಡಿ ಜೋಳದ ರೊಟ್ಟಿಯನ್ನು ಒಂದು ಬ್ರ್ಯಾಂಡ್ ಆಗಿ ರೂಪಿಸಿದ್ದಾರೆ. ಇವರು ಸ್ವ ಸಹಾಯ ಸಂಘದ ಮೂಲಕ ನಿತ್ಯ 3 ಸಾವಿರ ರೊಟ್ಟಿ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ವಿಶೇಷ ಮಳಿಗೆ ತೆರೆಯಲಾಗಿದೆ. ಆನ್ಲೈನ್ ಮೂಲಕ ಆರ್ಡರ್ ಬರುತ್ತಿವೆ. ಕಲಬುರಗಿಯ ರೊಟ್ಟಿ ದೊಡ್ಡ ನಗರಗಳ ಅಡುಗೆ ಮನೆಯನ್ನೂ ತಲುಪಿದೆ. ಇದು ಮಹಿಳೆಯರ ಸಾಧನೆಯಾಗಿದೆ ಎಂದರು.