ಸುಳ್ಯ:ಕಾಂಗ್ರೆಸ್ ಮಹಿಳಾ ಮೀಸಲಾತಿ ಮಸೂದೆಗೆ ವಿರೋಧ ಅಲ್ಲ, 2023ರಲ್ಲಿ ಉಭಯ ಸದನಗಳಲ್ಲಿ ಅಂಗೀಕಾರಗೊಂಡ ಮಹಿಳಾ ಮೀಸಲಾತಿ ಮಸೂದೆಯನ್ನು ಕೇಂದ್ರ ಸರಕಾರ ಜಾರಿ ಮಾಡಲಿ ಎಂದು ಸುಳ್ಯ ಬ್ಲಾಕ್ ಮಹಿಳಾ ಕಾಂಗ್ರೆಸ್ ಒತ್ತಾಯಿಸಿದೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಸದಸ್ಯೆ ಹಾಗೂ ಸುಳ್ಯ ಬ್ಲಾಕ್ ಉಸ್ತುವಾರಿ ಸರಸ್ವತಿ ಕಾಮತ್ ‘ಮಹಿಳಾ ಮೀಸಲಾತಿ ಮಸೂದೆಗೆ
ಕಾಂಗ್ರೆಸ್ ವಿರೋಧ ಎಂದು ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆ ನಡೆಸಿ ಸುಳ್ಯ ಶಾಸಕರು ಸೇರಿ ಕಾಂಗ್ರೆಸ್ ಪಕ್ಷವನ್ನು ಟೀಕಿಸಿದೆ. ಆದರೆ ಸತ್ಯವನ್ನು ಮರೆಮಾಚಿ ಬಿಜೆಪಿ ಮಾತನಾಡುತಿದೆ.2023ರಲ್ಲಿ ಉಭಯ ಸದನಗಳಲ್ಲಿ ಬಹುಮತದಿಂದ ಪಾಸಾದ ಬಿಲ್ಲನ್ನು ಜಾರಿ ಮಾಡದೆ, ಕ್ಷೇತ್ರ ಪುನರ್ವಿಂಗಡನೆ ಬಿಲ್ ಜೊತೆ ಪುನಾಃ ಮಹಿಳಾ ಮೀಸಲಾತಿ ಮಸೂದೆ ಮಂಡಿಸುವ ಅಗತ್ಯ ಏನಿತ್ತು ಎಂದು ಅವರು ಪ್ರಶ್ನಿಸಿದರು. ದಕ್ಷಿಣ ಭಾರತದ ರಾಜ್ಯಗಳ ರಾಜಕೀಯ ಅಸ್ಮಿತೆಯನ್ನು ನಾಶ ಮಾಡಿ ಇಲ್ಲಿ
ತಮಗಿರುವ ಹಿನ್ನಡೆಯನ್ನು ಸರಿದೂಗಿಸಲು ಬಿಜೆಪಿ ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಜಾರಿಗೆ ಪ್ರಯತ್ನಿಸಿದೆ, ಇದಕ್ಕೆ ಮಹಿಳಾ ಮೀಸಲಾತಿ ಮಸೂದೆಯನ್ನು ಬಳಸಿಕೊಂಡಿದೆ ಇದು ಸುಳ್ಯದ ಬಿಜೆಪಿಯವರಿಗೆ ಅರ್ಥ ಆಗದೇ ಇದ್ದರೂ ಜನ ಸಾಮಾನ್ಯರಿಗೆ ಅರ್ಥ ಆಗಿದೆ ಎಂದು ಸರಸ್ವತಿ ಕಾಮತ್ ಹೇಳಿದರು. ಮಹಿಳಾ ಸಬಲೀಕರಣಕ್ಕೆ ಕಾಂಗ್ರೆಸ್ ಏನು ನೀಡಿದೆ ಎಂಬುದನ್ನು ತಿಳಿಯಲು ಇತಿಹಾಸವನ್ನು ಒಮ್ಮೆ ಹಿಂತಿರುಗಿ ನೋಡಬೇಕು, ಈ ಬಗ್ಗೆ ಮುಕ್ತ ಚರ್ಚೆಗೆ ಸಿದ್ಧ ಎಂದ ಅವರು ಕಾಂಗ್ರೆಸ್ನ ಮಹಿಳಾ ಪರ ಕಾಳಜಿಗೆ ಪಂಚ ಗ್ಯಾರಂಟಿ ಯೋಜನೆಗಳೇ ಸಾಕ್ಷಿ ಎಂದರು.

ಶಾಸಕರು ಸುಳ್ಯದ ಸಮಸ್ಯೆಗಳ ಬಗ್ಗೆ ಸದನದಲ್ಲಿ ಮಾತನಾಡಲಿ:
ಸುಳ್ಯ ಕ್ಷೇತ್ರದಲ್ಲಿ ರಸ್ತೆ, ಸೇತುವೆ, ವಿದ್ಯುತ್, ಕುಡಿಯುವ ನೀರು, ಅಡಿಕೆ ಹಳದಿ ಎಲೆ,ಎಲೆಚುಕ್ಕಿ ರೋಗ ಹೀಗೆ ಹಲವು ಸಮಸ್ಯೆಗಳಿವೆ. ಶಾಸಕರು ಕ್ಷುಲ್ಲಕ ರಾಜಕೀಯ ವಿಷಯ ಮಾತನಾಡುವುದು ಬಿಟ್ಟು ಈ ಸಮಸ್ಯೆಗಳ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡಿ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಸರಸ್ವತಿ ಕಾಮತ್ ಸಲಹೆ ನೀಡಿದರು.
ಮಹಿಳಾ ಮೋರ್ಚಾ ವಿಚಾರ ತಿಳಿದು ಪ್ರತಿಭಟನೆ ಮಾಡಲಿ:
ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಚಾರ್ ಮಾತನಾಡಿ ಮಹಿಳಾ ಮೀಸಲಾತಿ ಮಸೂದೆಗೆ ಕಾಂಗ್ರೆಸ್ ಯಾವತ್ತೂ ವಿರೋಧ ಮಾಡಿಲ್ಲ, ಬಿಜೆಪಿ ಮಹಿಳಾ ಮೋರ್ಚಾ ಸ್ವಲ್ಪ ತಿಳಿದುಕೊಂಡು ಪ್ರತಿಭಟನೆ ನಡೆಸಲಿ ಎಂದರು. ಕಾಂಗ್ರೆಸ್ನ ಹಲವು ಯೋಜನೆಗಳನ್ನು ತಮಗೆ ಇಷ್ಟ ಬಂದಂತೆ ಬದಲಿಸಿರುವ ಬಿಜೆಪಿ ಸರಕಾರ ಜನರಿಗೆ ಬಲು ಉಪಯೋಗಿಯಾಗಿದ್ದ ನರೇಗಾ ಯೋಜನೆಯ ಕಾನೂನು ಬದಲಿಸಿ ಪರೋಕ್ಷವಾಗಿ ಯೋಜನೆಯನ್ನೇ ನಿಲ್ಲಿಸುವ ಪ್ರಯತ್ನ ನಡೆಸುತಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಹಿಳಾ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನುಸೂಯ ಪೆರುವಾಜೆ, ಕಾರ್ಯದರ್ಶಿ ಶಹನಾಝ್, ಬ್ಲಾಕ್ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಪವಿತ್ರ ಮಲ್ಲೆಟ್ಟಿ ಉಪಸ್ಥಿತರಿದ್ದರು.













