ಪಂಜ:ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಆ.15ರಂದು ಭಕ್ತಾದಿಗಳ ಸಭೆ ಕರೆಯಲಾಗಿದೆ. ಸಭೆಯಲ್ಲಿ ಭಕ್ತರು ಮುಂದಿರಿಸಿದ ಎಲ್ಲಾ ಸಂಶಯಗಳ ನಿವಾರಣೆ ಮಾಡಲಾಗುವುದು ಎಂದು ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ
ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ತಿಳಿಸಿದ್ದಾರೆ.ದೇವಸ್ಥಾನದ ಆಡಳಿತ, ಆಚಾರ-ವಿಚಾರ, ಸಾಲ-ಲೆಕ್ಕಪತ್ರ, ನಿರಖು ಠೇವಣಿ, ಸಿಬಂದಿ ವಜಾ, ತೋಟದ ಗುತ್ತಿಗೆ ಸೇರಿದಂತೆ ವಿವಿಧ ವಿಚಾರಗಳ ಕುರಿತು ಭಕ್ತರಲ್ಲಿ ಉಂಟಾಗಿರುವ ಗೊಂದಲ ನಿವಾರಿಸುವ ಉದ್ದೇಶದಿಂದ ಸಾರ್ವಜನಿಕ ಸಭೆ ಕರೆದು ಮಾಹಿತಿ ನೀಡುವಂತೆ ಭಕ್ತರ ನಿಯೋಗವೊಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಮನವಿ ಸಲ್ಲಿಸಿದೆ.
ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವರ ಸಾವಿರ ಸೀಮೆಯ ಭಕ್ತಾದಿಗಳ ಹೆಸರಿನಲ್ಲಿ ಸಲ್ಲಿಸಲಾದ ಮನವಿ ಪತ್ರವನ್ನು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರು ಅವರಿಗೆ ನೀಡಲಾಯಿತು.ಆ.15 ರಂದು ಸಾರ್ವಜನಿಕ ಸಭೆ ನಡೆಸಿ ಎಲ್ಲ ಗೊಂದಲಗಳಿಗೆ ಸ್ಪಷ್ಟನೆ ನೀಡುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.
ನಿಯೋಗದಲ್ಲಿ ಪ್ರಮುಖರಾದ ಚಂದ್ರಶೇಖರ ಶಾಸ್ತ್ರಿ ಪ್ರಕಾಶ್ ಜಾಕೆ, ಶಂಕರ ಭಟ್ ಮುಚ್ಚಿಲ, ಮೋನಪ್ಪ ಗೌಡ ಬೊಳ್ಳಾಜೆ, ಕಿರಣ್ ನೆಕ್ಕಿಲ, ಲೋಕೇಶ್ ಬರೆಮೇಲು, ಶರತ್ ಕುದ್ವ, ಉಜ್ವಲ್ ಚಿದ್ಗಲ್, ಲೋಕೇಶ್ ಕಲ್ಲಾಜೆ, ಜಯರಾಮ ಕಲ್ಲಾಜೆ, ಚಿನ್ನಪ್ಪ ಚೊಟ್ಟೆಮಜಲು,ಲಿಗೋಧರ ಆಚಾರ್ಯ, ಪ್ರಜ್ವಲ್ ಚಿದ್ಗಲ್, ಕಾರ್ಯಪ್ಪ ಗೌಡ ಚಿದ್ಗಲ್,ಅಂಕುಶ್ ಕುದ್ವ, ದಯಾನಂದ ಮೇಲ್ಮನೆ ಮತ್ತಿತರರ ಉಪಸ್ಥಿತರಿದ್ದರು.ಮನವಿ ಸ್ವೀಕರಿಸಿದ
ಡಾ. ದೇವಿಪ್ರಸಾದ್ ಕಾನತ್ತೂರು ಮಾತನಾಡಿ, ಮನವಿಯಲ್ಲಿ ಪ್ರಸ್ತಾಪಿಸಿರುವ ಪ್ರತಿಯೊಂದು ವಿಷಯಕ್ಕೂ ಆಡಳಿತ ಮಂಡಳಿಯ ಬಳಿ ಸಮರ್ಪಕ ಉತ್ತರಗಳಿವೆ. ಆದ್ದರಿಂದ ಆ.15ರಂದು ಮಧ್ಯಾಹ್ನ 3 ಗಂಟೆಗೆ ದೇವಸ್ಥಾನದ ಸಭಾಭವನದಲ್ಲಿ ಭಕ್ತಾದಿಗಳ ಸಭೆ ನಡೆಸಿ ಎಲ್ಲ ವಿಷಯಗಳ ಕುರಿತು ಸಂಪೂರ್ಣ ಮಾಹಿತಿ ನೀಡಲಾಗುವುದು. ನಮ್ಮ ಆಡಳಿತ ಸಮಿತಿಯ ಅವಧಿಯಲ್ಲಿ ದೇವಸ್ಥಾನದಲ್ಲಿ ಯಾವ ರೀತಿ ಅಭಿವೃದ್ಧಿ ಆಗಿದೆ ಎಂದು ಭಕ್ತರಿಗೆ ಮತ್ತು ಸಾರ್ವಜನಿಕರಿಗೆ ತಿಳಿದಿದೆ ಎಂದು ಅವರು ಹೇಳಿದ್ದಾರೆ.












