ಸುಳ್ಯ:ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಆರಂಭಗೊಂಡಿದ್ದು ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಕಂಡು ಬಂದಿದೆ. ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾದ ಹಲವು ಮಂದಿ ಈ ಬಾರಿ ಅರ್ಜಿ ಸಲ್ಲಿಸಿದ್ದಾರೆ. ಸುಳ್ಯದ ಮೂರು ಮಂದಿ ಆಕಾಂಕ್ಷಿಗಳಾಗಿದ್ದಾರೆ ಎಂದು ತಿಳಿದು ಬಂದಿದೆ. ಆಕಾಂಕ್ಷಿಗಳು ತಮ್ಮ ಪರ ಪ್ರಚಾರ ನಡೆಸುತ್ತಿದ್ದು, ಪಕ್ಷದೊಳಗಿನ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.ರಾಜ್ಯದ ಎಲ್ಲಾ
ಜಿಲ್ಲೆಗಳ ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಏಕರೂಪದ ಮಾದರಿಯಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಈ ಬಾರಿ ಕಾರ್ಯಕರ್ತರು, ಮುಖಂಡರು ಹಾಗೂ ಪಕ್ಷದ ವಿವಿಧ ಸಂಘಟನೆಗಳ ಅಭಿಪ್ರಾಯಕ್ಕೂ ಹೆಚ್ಚಿನ ಮಹತ್ವ ನೀಡಲಾಗುತ್ತಿದ್ದು, ಅಂತಿಮ ಆಯ್ಕೆಯಲ್ಲಿ ತಳಮಟ್ಟದ ಕಾರ್ಯಕರ್ತರ ಅಭಿಪ್ರಾಯ ನಿರ್ಣಾಯಕವಾಗುವ ಸಾಧ್ಯತೆ ಇದೆ.ಪ್ರತಿ ಜಿಲ್ಲೆಗೆ ಐವರು ವೀಕ್ಷಕರನ್ನು ನೇಮಕ ಮಾಡಲಾಗಿದ್ದು, ಅವರಲ್ಲಿ ಒಬ್ಬರಿಗೆ ಕಾರ್ಯಕರ್ತರಿಂದ ನೇರವಾಗಿ ಅಭಿಪ್ರಾಯ ಸಂಗ್ರಹಿಸುವ ವಿಶೇಷ ಜವಾಬ್ದಾರಿ ನೀಡಲಾಗಿದೆ. ಉಳಿದ ನಾಲ್ವರು ವೀಕ್ಷಕರು ಆಯ್ಕೆ ಪ್ರಕ್ರಿಯೆಗೆ ಸಹಕಾರ ನೀಡಲಿದ್ದಾರೆ.
ವೀಕ್ಷಕರು ಜಿಲ್ಲೆಯ ಪ್ರತಿ ತಾಲೂಕಿನ ಬ್ಲಾಕ್ ಕಾಂಗ್ರೆಸ್ ಕಚೇರಿಗಳಿಗೆ ಭೇಟಿ ನೀಡಿ ಕಾರ್ಯಕರ್ತರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಅವರ ಅಭಿಪ್ರಾಯ ದಾಖಲಿಸಲಿದ್ದಾರೆ.ದಕ್ಷಿಣ ಕನ್ನಡ ಜಿಲ್ಲೆಯ ವೀಕ್ಷಕರಾಗಿ ಕೋಯಿಕ್ಕೊಡು ಉತ್ತರ ಕ್ಷೇತ್ರದ ಶಾಸಕ ಕೆ.ಜಯಂತ್ ಅವರನ್ನು ನೇಮಕ ಮಾಡಲಾಗಿದೆ. ಈಗಾಗಲೇ ಅವರು ಜಿಲ್ಲೆಯ ವಿವಿಧ ಬ್ಲಾಕ್ಗಳಿಂದ ಅಭಿಪ್ರಾಯ ಸಂಗ್ರಹ ಆರಂಭಿಸಿದ್ದಾರೆ. ಆಗಸ್ಟ್ 5ರಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಕಚೇರಿಗಳಿಗೆ ಭೇಟಿ ನೀಡಿ ಕಾರ್ಯಕರ್ತರು ಮತ್ತು ಮುಖಂಡರ ಅಭಿಪ್ರಾಯ ಸಂಗ್ರಹಿಸಲಿದ್ದಾರೆ ಎಂದು ತಿಳಿದುಬಂದಿದೆ. ಎಲ್ಲಾ ಆಕಾಂಕ್ಷಿಗಳ ಅರ್ಜಿ ಪರಿಶೀಲಿಸಿ ಕಾರ್ಯಕರ್ತರ, ಮುಖಂಡರ ಅಭಿಪ್ರಾಯ ಆಲಿಸಿ ವೀಕ್ಷಕರು ಇದರಿಂದ ಅತೀ ಹೆಚ್ಚು ಬೆಂಬಲಿತರ 4-5 ಹೆಸರುಗಳನ್ನು ಅಂತಿಮಗೊಳಿಸಿ ಹೈಕಮಾಂಡ್ಗೆ ಸಲ್ಲಿಸುವ ಸಾಧ್ಯತೆ ಇದೆ. ಜಿಲ್ಲಾಧ್ಯಕ್ಷತೆಗೆ

ಎಂ.ವೆಂಕಪ್ಪ ಗೌಡ, ಸದಾನಂದ ಮಾವಜಿ, ಕಿರಣ್ ಬುಡ್ಲೆಗುತ್ತು.
ಸುಳ್ಯ ಬ್ಲಾಕ್ನಿಂದ ಮೂರು ಮಂದಿ ಆಕಾಂಕ್ಷಿಗಳು ಇದ್ದಾರೆ. ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ವೆಂಕಪ್ಪ ಗೌಡ, ಅರೆಭಾಷೆ ಅಖಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಣ್ ಬುಡ್ಲೆಗುತ್ತು ಆಕಾಂಕ್ಷಿಗಳಾಗಿದ್ದಾರೆ. ಎಂ.ವೆಂಕಪ್ಪ ಗೌಡ ಹಾಗು ಕಿರಣ್ ಬುಡ್ಲೆಗುತ್ತು ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ. ಸದಾನಂದ ಮಾವಜಿ ಇನ್ನಷ್ಟೇ ಅರ್ಜಿ ಸಲ್ಲಿಸಲಿದ್ದಾರೆ. ಸುಳ್ಯದಿಂದ ಇನ್ನಷ್ಟು ಮಂದಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತಿದೆ.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ನ್ನು ಮಹಿಳಾ ಕಾಂಗ್ರೆಸ್ ಘಟಕದ ಮಾದರಿಯಲ್ಲಿ ನಗರ ಮತ್ತು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಎಂದು ಎರಡು ವಿಭಾಗ ಮಾಡಬೇಕು ಎಂಬ ಪ್ರಸ್ತಾಪ ಇದೆ. ನಾನು ಅಧ್ಯಕ್ಷತೆಗೆ ಅರ್ಜಿ ಸಲ್ಲಿಸಿದ್ದೇನೆ. ನಗರ ಮತ್ತು ಗ್ರಾಮಾಂತರ ಎಂಬ ವಿಭಾಗ ಆದರೆ ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷತೆಗೆ ನಾನು ಪ್ರಬಲ ಆಕಾಂಕ್ಷಿ ಎಂದು ಎಂ.ವೆಂಕಪ್ಪ ಗೌಡ ಹೇಳಿದ್ದಾರೆ.
ಜಿಲ್ಲಾ ಅಧ್ಯಕ್ಷತೆಗೆ ಅರ್ಜಿ ಸಲ್ಲಿಸಿದ್ದೇನೆ ಈ ಬಾರಿ ಯುವಕರಿಗೆ ಜಿಲ್ಲಾ ಅಧ್ಯಕ್ಷತೆ ನೀಡುವ ನಿರೀಕ್ಷೆ ಇದೆ. ಈ ಒಕ್ಕಲಿಗ ಗೌಡ ಸಮುದಾಯಕ್ಕೆ ಅವಕಾಶ ನೀಡಬೇಕು ಎಂಬ ಬೇಡಿಕೆ ಇದೆ ಕಿರಣ್ ಬುಡ್ಲೆಗುತ್ತು ಅಭಿಪ್ರಾಯ ಪಟ್ಟಿದ್ದಾರೆ.
ಜಿಲ್ಲಾ ಅಧ್ಯಕ್ಷತೆಗೆ ಅರ್ಜಿ ಸಲ್ಲಿಸುತ್ತೇನೆ ಎಂದು ಸದಾನಂದ ಮಾವಜಿ ಹೇಳಿದ್ದಾರೆ.
ಕಾರ್ಯಕರ್ತರ ಒಲವು ಯಾರಿಗೆ ಹೆಚ್ಚು ಅನುಕೂಲ ಇರಲಿದೆ, ಹೈಕಮಾಂಡ್ ಯಾವ ಮಾನದಂಡಕ್ಕೆ ಆದ್ಯತೆ ನೀಡಲಿದೆ? ಅನುಭವಕ್ಕೆ ಮಣೆ ಹಾಕಲಿದೆಯೇ ಅಥವಾ ಯುವ ನಾಯಕತ್ವಕ್ಕೆ ಅವಕಾಶ ನೀಡಲಿದೆಯೇ? ಎಂಬ ಪ್ರಶ್ನೆಗಳು ಈಗ ಕಾಂಗ್ರೆಸ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ. ಒಟ್ಟಿನಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಆಯ್ಕೆಗೆ ಹೊಸತೊಂದು ಆಯ್ಕೆ ಪ್ರಕ್ರಿಯೆ ಆರಂಭಿಸಿರುವುದು ತೀವ್ರ
ಕುತೂಹಲ ಮೂಡಿಸಿದೆ.
ಸುಳ್ಯದಲ್ಲಿ 5 ರಂದು ಅಭಿಪ್ರಾಯ ಸಂಗ್ರಹ:
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಗೆ ನೂತನ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡುವ ಪ್ರಕ್ರಿಯೆಯ ಪೂರ್ವಭಾವಿಯಾಗಿ, ಎಐಸಿಸಿ ವೀಕ್ಷಕರಾದ ಜಯಂತ್ ಅವರು ಆ.5ರಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿಗಳ ವ್ಯಾಪ್ತಿಗೆ ಭೇಟಿ ನೀಡಿ “ಸಂಘಟನ್ ಸೃಜನ್ ಅಭಿಯಾನ” ಸಭೆಯನ್ನು ಸುಳ್ಯದ ಸದರ್ನ್ ರೆಸಿಡೆನ್ಸಿ ಸಭಾಂಗಣದಲ್ಲಿ ನಡೆಸಲಿದ್ದಾರೆ. ಈ ಸಭೆಯ ಮೂಲಕ ನೂತನ ಜಿಲ್ಲಾಧ್ಯಕ್ಷರ ನೇಮಕಾತಿಗೆ ಸಂಬಂಧಿಸಿದಂತೆ ಪಕ್ಷದ ಮುಖಂಡರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಲಿದ್ದಾರೆ.
ಸುಳ್ಯ ಬ್ಲಾಕ್ ವ್ಯಾಪ್ತಿಯಲ್ಲಿ ನಡೆಯುವ ಸಭೆಯಲ್ಲಿ ಜಿಲ್ಲಾಧ್ಯಕ್ಷರ ನೇಮಕಾತಿ ಕುರಿತು ಅಭಿಪ್ರಾಯ ನೀಡಲು ಬ್ಲಾಕ್ ಪದಾಧಿಕಾರಿಗಳು, ಪಕ್ಷದಲ್ಲಿ ಸ್ಥಾನಮಾನ ಹೊಂದಿದವರು, ಎಲ್ಲಾ ಸರ್ಕಾರಿ ನಾಮನಿರ್ದೇಶಿತ ಅಧ್ಯಕ್ಷರು,ಸದಸ್ಯರು, ಮಾಜಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಸದಸ್ಯರು, ಪಟ್ಟಣ ಪಂಚಾಯತ್ ಸದಸ್ಯರು, ಪಕ್ಷದ ಹಿರಿಯ ನಾಯಕರು ಹಾಗೂ BLA-2 ಗಳು ಮಾತ್ರ ತಮ್ಮ ತಮ್ಮ ಅಭಿಪ್ರಾಯಗಳನ್ನು ತಿಳಿಸಲು ಅವಕಾಶವಿರುತ್ತದೆ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












