ಸುಳ್ಯ:ದೆಹಲಿಯಲ್ಲಿ ವಿದ್ಯಾರ್ಥಿಗಳ ಮೇಲೆ ನಡೆಸಿದ ಲಾಠಿ ಚಾರ್ಜ್ ವಿರುದ್ಧ ಪ್ರತಿಭಟಿಸುತ್ತಿದ್ದ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರನ್ನು ಪೊಲೀಸರು ವಶಕ್ಕೆ ಪಡೆದ ಘಟನೆಯನ್ನು ತೀವ್ರವಾಗಿ ಖಂಡಿಸಲಾಗುವುದು ಎಂದು ಸಂಪಾಜೆ ವಲಯ ಕಾಂಗ್ರೆಸ್ ಹೇಳಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ
ಕೆಪಿಸಿಸಿ ಪ್ರಚಾರ ಸಮಿತಿ ಸಂಯೋಜಕ ಕೆ.ಪಿ.ಜಾನಿ ಕಲ್ಲುಗುಂಡಿ
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಪ್ರತಿಭಟಿಸುವ ವಿದ್ಯಾರ್ಥಿಗಳ ಜೊತೆ ಕೇಂದ್ರ ಸರಕಾರ ಚರ್ಚೆ ನಡೆಸಿ ಅವರ ಸಮಸ್ಯೆಯನ್ನು ಪರಿಹರಿಸಬೇಕಿತ್ತು. ಅದರ ಬದಲು ಅವರ ವಿರುದ್ಧ ಲಾಠಿ ಚಾರ್ಜ್ ನಡೆಸಿರುವುದು, ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಮುಖಂಡರ ವಿರುದ್ಧ ಅಮಾನುಷವಾಗಿ ವರ್ತಿಸಿರುವುದು ಖಂಡನೀಯ ಎಂದು ಅವರು ಹೇಳಿದರು.
ಸಂಪಾಜೆ ಕಾಂಗ್ರೆಸ್ನಲ್ಲಿ ಉಂಟಾಗಿರುವ ಸಮಸ್ಯೆಗಳನ್ನು ಪರಿಹರಿಸಲು ಬ್ಲಾಕ್, ಜಿಲ್ಲಾ ಕಾಂಗ್ರೆಸ್ ಸಮಿತಿಗಳು ಯಾವುದೇ ಆಸಕ್ತಿ ವಹಿಸುತ್ತಿಲ್ಲ ಎಂದು ಸಂಪಾಜೆ ಕಾಂಗ್ರೆಸ್ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದ, ಸುಮಾರು 4 ದಶಕಗಳ ಕಾಲ ಪಕ್ಷಕ್ಕಾಗಿ ದುಡಿದ ಸೋಮಶೇಖರ ಕೊಯಿಂಗಾಜೆ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದರೂ ಸೌಜನ್ಯಾಕ್ಕಾದರೂ ಮಾತನಾಡಲಿಲ್ಲ.ಇಲ್ಲಿನ ಭಿನ್ನಾಭಿಪ್ರಾಯಗಳನ್ನು ಮಾತುಕತೆ ಮೂಲಕ ಸರಿಪಡಿಸಬೇಕು ಎಂದು ಕೆಪಿಸಿಸಿ ತನಕ ದೂರು ನೀಡಿದರೂ ಯಾರು ಈ ಕರಿತು ಮಧ್ಯಪ್ರವೇಶಿಸಿಲ್ಲ, ಸರಿಪಡಿಸುವ ಪ್ರಯತ್ನ ನಡೆಸಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಡಿಸಿಸಿ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಕುಂಞಿ ಗೂನಡ್ಕ, ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ವಸಂತ ಪೆಲ್ತಡ್ಕ, ಪ್ರಧಾನ ಕಾರ್ಯದರ್ಶಿ ಲೂಕಾಸ್.ಟಿ.ಐ ಮಾತನಾಡಿದರು. ಜ್ಞಾನಶೀಲನ್ ನೆಲ್ಲಿಕುಮೇರಿ, ವಲಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಲನ.ಕೆ.ಆರ್, ಉಪಾಧ್ಯಕ್ಷೆ ಉಪಾಧ್ಯಕ್ಷೆ ಪ್ರಮೀಳ ಪೆಲ್ತಡ್ಕ ಉಪಸ್ಥಿತರಿದ್ದರು.








