ಲಖನೌ: ನಾಯಕ ಕೆ.ಎಲ್.ರಾಹುಲ್ (82, 53ಎ, 4×9, 6×3) ಮತ್ತು ಕ್ವಿಂಟನ್ ಡಿಕಾಕ್ (54, 43ಎ) ಅವರ ಅರ್ಧ ಶತಕಗಳ ನೆರವಿನಿಂದ ಲಖನೌ ಸೂಪರ್ ಜೈಂಟ್ಸ್ ತಂಡ, ಶುಕ್ರವಾರ ನಡೆದ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 8 ವಿಕೆಟ್ಗಳಿಂದ ಸೋಲಿಸಿತು.177 ರನ್ಗಳ ಗುರಿಯನ್ನು ಬೆಂಬತ್ತಿದ ಲಖನೌಗೆ
ರಾಹುಲ್ ಮತ್ತು ವಿಕೆಟ್ ಕೀಪರ್ ಕ್ವಿಂಟನ್ ಡಿಕಾಕ್ 15 ಓವರುಗಳಲ್ಲಿ ಮೊದಲ ವಿಕೆಟ್ಗೆ 134 ರನ್ ಸೇರಿಸಿ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು. ತಂಡವು 19 ಓವರುಗಳಲ್ಲಿ 2 ವಿಕೆಟ್ಗೆ 180 ರನ್ ಗಳಿಸಿತು. ಇದಕ್ಕೆ ಮೊದಲು ಚೆನ್ನೈ ಸೂಪರ್ ಕಿಂಗ್ಸ್ ತಂಡ 20 ಓವರುಗಳಲ್ಲಿ 6 ವಿಕೆಟ್ಗೆ 176 ರನ್ ಗಳಿಸಿತ್ತು. ಚೆನ್ನೈ ತಂಡವು ಆಲ್ರೌಂಡರ್ ರವೀಂದ್ರ ಜಡೇಜ (ಔಟಾಗದೆ 57, 40ಎಸೆತ) ಅವರ ತಾಳ್ಮೆಯ ಅರ್ಧಶತಕ ಮತ್ತು ಕೊನೆಯ ಹಂತದಲ್ಲಿ ಮಹೇಂದ್ರಸಿಂಗ್ ಧೋನಿ (ಔಟಾಗದೇ 28, 9ಎ) ಬೀಸಾಟದಿಂದಾಗಿ ಹೋರಾಟದ ಮೊತ್ತ ದಾಖಲಿಸಿತು.
ಅಜಿಂಕ್ಯ ರಹಾನೆ (36; 24ಎ, 4X5, 6X1) ಹಾಗೂ ಮೋಯಿನ್ ಅಲಿ (30; 20ಎ, 6X3) ಅವರೂ ಕಾಣಿಕೆ ನೀಡಿದರು.
ಮಹೇಂದ್ರಸಿಂಗ್ ಧೋನಿ ಜಡೇಜ ಜೊತೆ ಮುರಿಯದ ಏಳನೇ ವಿಕೆಟ್ ಜೊತೆಯಾಟದಲ್ಲಿ 35 (13ಎ) ರನ್ ಸೇರಿಸಿದರು. ಅದರಲ್ಲಿ ಜಡೇಜ ಪಾಲು ಏಳು ರನ್ ಮಾತ್ರ. 9 ಎಸೆತಗಳನ್ನು ಎದುರಿಸಿದ ಅವರು 28 ರನ್ ಗಳಿಸಿದರು. ಅದರಲ್ಲಿ ಮೂರು ಬೌಂಡರಿ, ಎರಡು ಸಿಕ್ಸರ್ಗಳಿದ್ದವು.