ಚೆನ್ನೈ: ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗುಜರಾತ್ ಟೈಟನ್ಸ್ ಸುಲಭ ಜಯ ದಾಖಲಿಸಿತು. ಕಿಂಗ್ಸ್ ನೀಡಿದ್ದ 159 ರನ್ಗಳ ಗುರಿ ಎದುರು ಲೀಲಾಜಾಲವಾಗಿ ಆಡಿದ ಟೈಟನ್ಸ್ ಬ್ಯಾಟರ್ಗಳು, ಇನ್ನೂ 20 ಎಸೆತಗಳು ಬಾಕಿ ಇರುವಂತೆಯೇ 162 ರನ್ ಗಳಿಸಿ ಜಯದ ನಗು ಬೀರಿತು.ಟೈಟನ್ಸ್ಗೆ ನಾಯಕ ಶುಭಮನ್ ಗಿಲ್ (33) ಹಾಗೂ
ಸಾಯಿ ಸುದರ್ಶನ್ ಜೋಡಿ ಉತ್ತಮ ಆರಂಭ ನೀಡಿತು. ಗಿಲ್ ವಿಕೆಟ್ ಪತನದ ಬಳಿಕ ಸಾಯಿ ಹಾಗೂ ಜಾಸ್ ಬಟ್ಲರ್ (ಅಜೇಯ 39) ಕಳೆಗಟ್ಟಿತು. ಸಾಯಿ, ಕೇವಲ 46 ಎಸೆತಗಳಲ್ಲೇ 7 ಸಿಕ್ಸರ್ ಹಾಗೂ 4 ಬೌಂಡರಿ ಸಹಿತ 87 ರನ್ ಬಾರಿಸಿದರು.ಇದಕ್ಕೂ ಮೊದಲು ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಚೆನ್ನೈ ಬ್ಯಾಟರ್ಗಳು, ಪೆವಿಲಿಯನ್ ಪರೇಡ್ ನಡೆಸಿದರು. ತಂಡದ ಮೊತ್ತ 37 ರನ್ ಆಗುವಷ್ಟರಲ್ಲೇ ಅಗ್ರ ಕ್ರಮಾಂಕದ ನಾಲ್ಕು ಮಂದಿ ವಿಕೆಟ್ ಒಪ್ಪಿಸಿದರು.
ಕಳೆದ ಪಂದ್ಯದಲ್ಲಿ ಶತಕ ಬಾರಿಸಿದ್ದ ಸಂಜು ಸ್ಯಾಮ್ಸನ್ (11), ಉರ್ವಿಲ್ ಪಟೇಲ್ (4), ಸರ್ಫರಾಜ್ ಖಾನ್ (0) ಹಾಗೂ ಡೆವಾಲ್ಡ್ ಬ್ರೆವಿಸ್ (2) ಬೇಗನೆ ಔಟಾದರು. ಹೀಗಾಗಿ, ಅಲ್ಪ ಮೊತ್ತಕ್ಕೆ ಕುಸಿಯುವ ಆತಂಕ ಮೂಡಿತ್ತು.
ಈ ಹಂತದಲ್ಲಿ ನಾಯಕ ಋತುರಾಜ್ ಗಾಯಕವಾಡ್ ಮತ್ತು ಶಿವಂ ದುಬೆ (22 ರನ್) ಆಸರೆಯಾದರು. 5ನೇ ವಿಕೆಟ್ ಪಾಲುದಾರಿಕೆಯಲ್ಲಿ 59 ರನ್ ಕೂಡಿಸುವ ಮೂಲಕ, ಕುಸಿತಕ್ಕೆ ತಡೆಯೊಡ್ಡಿದರು.
ವಿಕೆಟ್ ಬೀಳುತ್ತಿದ್ದರೂ, ಜವಾಬ್ದಾರಿಯುತ ಬ್ಯಾಟಿಂಗ್ ಮುಂದುವರಿಸಿದ ನಾಯಕ, 60 ಎಸೆತಗಳಲ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 74 ರನ್ ಗಳಿಸಿ ಔಟಾಗದೆ ಉಳಿದರು. ಇದರಿಂದಾಗಿ, ಚೆನ್ನೈ ತಂಡದ ಮೊತ್ತ 150ರ ಗಡಿ ದಾಟಿತು.












