ನವದೆಹಲಿ: ತಂಡದ ವೇಗಿಗಳಾದ ಭುವನೇಶ್ವರ್ ಕುಮಾರ್ ಮತ್ತು ಜೋಶ್ ಹ್ಯಾಜಲ್ವುಡ್ ಅವರ ಮಾರಕ ದಾಳಿಗೆ ತುತ್ತಾದ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 9 ವಿಕೆಟ್ಗಳಿಂದ ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ಜಯ ದಾಖಲಿಸಿತು.ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ನಾಯಕ ರಜತ್ ಪಾಟೀದಾರ್, ಎದುರಾಳಿಯನ್ನು ಬ್ಯಾಟಿಂಗ್ಗೆ
ಆಹ್ವಾನಿಸಿದರು. ಅವರ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಭುವಿ ಹಾಗೂ ಜೋಶ್ ಬೌಲಿಂಗ್ ಮಾಡಿದರು.ಪವರ್ ಪ್ಲೇ ಅವಧಿಯಲ್ಲೇ ಕೇವಲ 13 ರನ್ ಮಾತ್ರ ನೀಡಿ ಪ್ರಮುಖ ಆರು ವಿಕೆಟ್ಗಳನ್ನು ಕಬಳಿಸಿದ ಈ ಇಬ್ಬರು, ಆತಿಥೇಯರ ಬ್ಯಾಟಿಂಗ್ ಬೆನ್ನಲುಬು ಮುರಿದರು. ಹೀಗಾಗಿ ಅಕ್ಷರ್ ಪಟೇಲ್ ಪಡೆ 16.3 ಓವರ್ಗಳಲ್ಲಿ ಕೇವಲ 75 ರನ್ ಗಳಿಸಿ ಸರ್ವಪತನ ಕಂಡಿತು.
ಗುರಿ ಬೆನ್ನಟ್ಟಿದ ಆರ್ಸಿಬಿ 6.3 ಓವರ್ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 77 ರನ್ ಗಳಿಸಿ ಗೆಲುವಿನ ನಗು ಬೀರಿತು. 13 ಎಸೆತಗಳಲ್ಲಿ ತಲಾ 3 ಸಿಕ್ಸರ್ ಮತ್ತು ಬೌಂಡರಿ ಸಹೀತ ಅಜೇಯ 34 ಬಾರಿಸಿದ ದೇವದತ್ತ್ ಪಡಿಕಲ್ ಮತ್ತು 15 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 1 ಬೌಂಡರಿ ಸಹೀತ ಅಜೇಯ 23 ಬಾರಿಸಿದ ವಿರಾಟ್ ಕೊಹ್ಲಿ ಗೆಲುವನ್ನು ಸುಲಭಗೊಳಿಸಿದರು. ಜೋಸೆಫ್ ಬೆಥಲ್ 1 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 1 ಬೌಂಡರಿ ಸಹೀತ 20 ರನ್ ಬಾರಿಸಿದರು. ಈ ಮಧ್ಯೆ ಕೊಹ್ಲಿ ಐಪಿಎಲ್ನಲ್ಲಿ 9 ಸಾವಿರ ರನ್ ಪೂರೈಸಿದರು.
ಇದಕ್ಕೂ ಮುನ್ನ 8 ರನ್ಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಡೆಲ್ಲಿಗೆ ಏಳು, ಎಂಟು ಮತ್ತು ಒಂಬತ್ತನೇ ಕ್ರಮಾಂಕದಲ್ಲಿ ಕ್ರೀಸ್ಗೆ ಇಳಿದ ಅಭಿಷೇಕ್ ಪೊರೇಲ್ (30), ಡೇವಿಡ್ ಮಿಲ್ಲರ್ (19) ಹಾಗೂ ಕೇಲ್ ಜೇಮಿಸನ್ (12) ಹೊರತುಪಡಿಸಿ ಉಳಿದ ಯಾರೂ ಎರಡಂಕಿಯನ್ನೇ ಮುಟ್ಟಲಿಲ್ಲ. ಪದಾರ್ಪಣೆ ಪಂದ್ಯವಾಡಿದ ಆರಂಭಿಕ ಬ್ಯಾಟರ್ ಸಾಹಿಲ್ ಪ್ರಕಾಶ್ ಸೊನ್ನೆ ಸುತ್ತಿದರೆ, ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ್ದ ಕೆ.ಎಲ್. ರಾಹುಲ್ ಆಟ ಒಂದು ರನ್ಗೆ ಕೊನೆಯಾಯಿತು.ನಿತೀಶ್ ರಾಣ (1), ಟ್ರಿಸ್ಟನ್ ಸ್ಟಬ್ಸ್ (5) ಹೆಚ್ಚು ಹೊತ್ತು ನಿಲ್ಲಿಲಿಲ್ಲ. ಸಮೀರ್ ರಿಜ್ವಿ ಮತ್ತು ನಾಯಕ ಅಕ್ಷರ್ಗೂ ಖಾತೆ ತೆರೆಯಲಾಗಲಿಲ್ಲ.ಅಮೋಘ ದಾಳಿ ಸಂಘಟಿಸಿದ ಭುವಿ 3 ಓವರ್ಗಳಲ್ಲಿ ಕೇವಲ 5 ರನ್ ನೀಡಿ ಮೂರು ವಿಕೆಟ್ ಪಡೆದರೆ, ಜೋಶ್ 3.3 ಓವರ್ಗಳಲ್ಲಿ 12 ರನ್ಗೆ 4 ವಿಕೆಟ್ ಕಬಳಿಸಿದರು.ರಸೀಕ್ ಸಲಾಮ್ ದರ್, ಸುಯಾಶ್ ಶರ್ಮಾ ಮತ್ತು ಕೃಣಾಲ್ ಪಾಂಡ್ಯ ಒಂದೊಂದು ವಿಕೆಟ್ ಹಂಚಿಕೊಂಡರು.
ಏಪ್ರಿಲ್ 18ರಂದು ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಆರ್ಸಿಬಿ ಎದುರು ಡೆಲ್ಲಿ ಪಡೆ 6 ವಿಕೆಟ್ ಅಂತರದ ಜಯ ಸಾಧಿಸಿತ್ತು. ಆ ಸೋಲಿಗೆ ಆರ್ಸಿಬಿ ಭರ್ಜರಿಯಾಗಿ ಮುಯ್ಯಿ ತೀರಿಸಿಕೊಂಡಿತು.8 ಪಂದ್ಯ ಆಡಿದ ಆರ್ಸಿಬಿ 6ನೇ ಜಯ ದಾಖಲಿಸಿದ ಆರ್ಸಿಬಿ12 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.













