ಅಹಮದಾಬಾದ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಂಘಟಿತ ಪ್ರದರ್ಶನದ ಮಧ್ಯೆಯೂ ವಾಷಿಂಗ್ಟನ್ ಸುಂದರ ಅರ್ಧಶತಕದ ನೆರವಿನಿಂದ ಗುಜರಾತ್ ಟೈಟನ್ಸ್ ತಂಡ ಆರ್ಸಿಬಿಗೆ 156 ರನ್ ಗುರಿ ನೀಡಿದೆ.ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ
ಆರ್ಸಿಬಿ, ಗುಜರಾತ್ ತಂಡ ರನ್ ಗಳಿಸಲು ಪರದಾಡುವಂತೆ ಮಾಡಿತು.ನಿಗದಿತ 20 ಓವರ್ಗಳಲ್ಲಿ ಗುಜರಾತ್ ಟೈಟನ್ಸ್ 8 ವಿಕೆಟ್ ಕಳೆದುಕೊಂಡು 155 ರನ್ ಗಳಿಸಿದೆ.ಆರಂಭದ ಮೊದಲ ಓವರ್ನಲ್ಲಿಯೇ 13 ರನ್ ಗಳಿಸಿ ಬೃಹತ್ ಮೊತ್ತ ಗಳಿಸುವ ಯೋಜನೆ ಹಾಕಿದ್ದ ಗುಜರಾತ್ ಮೂರನೇ ಓವರ್ನ ಎರಡನೇ ಎಸೆತದಲ್ಲಿ ಶುಭಮನ್ ಗಿಲ್ (10) ವಿಕೆಟ್ ಕಳೆದುಕೊಂಡಿತು.ನಾಲ್ಕನೇ ಓವರ್ನ ನಾಲ್ಕನೇ ಎಸೆತದಲ್ಲಿ ಸಾಯಿ ಸುದರ್ಶನ (12) ಭುವನೇಶ್ವರ ಕುಮಾರ್ಗೆ ವಿಕೆಟ್ ಕೊಟ್ಟು ಹೊರನಡೆದರು. ಪವರ್ ಪ್ಲೇ ಅಂತ್ಯಕ್ಕೆ 45ಕ್ಕೆ ಪ್ರಮುಖ ಎರಡು ವಿಕೆಟ್ ಕಳೆದುಕೊಂಡು ಗುಜರಾತ್ ಸಂಕಷ್ಟಕ್ಕೆ ಸಿಲುಕಿತು.
ನಿಶಾಂತ್ ಸಿಂಧು (20), ಜೋಸ್ ಬಟ್ಲರ್ (19), ಅರ್ಷದ್ ಖಾನ್ (15) ಅಲ್ಪ ಮೊತ್ತದ ಕಾಣಿಕೆ ನೀಡಿ ಹೊರನಡೆದರು. ರಾಹುಲ್ ತೆವಾಟಿಯಾ, ಜೇಸನ್ ಹೋಲ್ಡರ್ ಮತ್ತು ರಶೀದ್ ಖಾನ್ ತಲಾ 7 ರನ್ ಗಳಿಸಿ ಪೆವಿಲಿಯನ್ ಸೇರಿದರು.ಏಕಾಂಗಿಯಾಗಿ ಹೋರಾಟ ಮಾಡಿದ ವಾಷಿಂಗ್ಟನ್ ಸುಂದರ 37 ಎಸೆತದಲ್ಲಿ 5 ಬೌಂಡರಿ ಸೇರಿದಂತೆ ಅಜೇಯ 50 ರನ್ ಗಳಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.
ಆರ್ಸಿಬಿ ಪರ ರಾಸಿಖ್ ಸಲಾಮ್ ದಾರ್ 37ಕ್ಕೆ 3 ವಿಕೆಟ್ ಪಡೆದರೆ, ಭುವನೇಶ್ವರ್ ಕುಮಾರ್ 29ಕ್ಕೆ 2, ಜೋಶ್ ಹ್ಯಾಜಲ್ವುಡ್ 37ಕ್ಕೆ 2 ಮತ್ತು ಕೃನಾಲ್ ಪಾಂಡ್ಯ 23ಕ್ಕೆ 1 ವಿಕೆಟ್ ಪಡೆದರು.














