ಸುಳ್ಯ:ಜಿಟಿ ಜಿಟಿ ಮಳೆಯ ಮಳೆಯ ಮಧ್ಯೆ ಇಲ್ಲಿ ಮೇಳೈಸಿದೆ ಮನ ಸೆಳೆಯುವ ಹಲಸು,ಮಾವು ಹಣ್ಣುಗಳ ರಾಶಿ, ರಾಶಿ..ಬಾಯಲ್ಲಿ ನೀರೂರಿಸುವ ಹಲಸಿನ ವೈವಿಧ್ಯಮ ಖಾದ್ಯಗಳ ಘಮ ಘಮ.. ಹಸಿರು ಸೂಸುವ ಗಿಡಗಳು.ಹೌದು ಸುಳ್ಯದಲ್ಲಿ ಪ್ರಪ್ರಥಮ ಬಾರಿಗೆ ಆಯೋಜನೆಗೊಂಡಿರುವ ಹಲಸು ಮತ್ತು ಮಾವು ಮೇಳವು ವೈವಿಧ್ಯಮಯವಾಗಿ ಮೂಡಿ ಬಂದಿದ್ದು ಜನಾಕರ್ಷಣೆಯ ಕೇಂದ್ರವಾಗಿದೆ.ಮೇಳಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ಪ್ರಥಮ ದಿನವೇ
ಸಾವಿರಾರು ಮಂದಿ ಆಗಮಿಸಿ ಮೇಳದ ಸವಿಯುಂಡರು. ಮೇಳದಲ್ಲಿ 100ಕ್ಕೂ ಹೆಚ್ಚು ಮಳಿಗೆಗಳಿದ್ದು, ಹಲಸು, ಮಾವಿನ ತಾಜಾ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದಾರೆ.ಹಲಸು, ಮಾವಿನ ವಿವಿಧ ತಳಿಗಳ ಜೊತೆಗೆ ವಿವಿಧ ರುಚಿಯ ಹಣ್ಣುಗಳು ಮತ್ತು ಖಾದ್ಯಗಳು ಮೇಳದ ಪ್ರಮುಖ ಆಕರ್ಷಣೆಯಾಗಿವೆ. ಈ ವಿಶೇಷ ಮೇಳದಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ತಾಜಾ ಹಣ್ಣುಗಳು, ಹತ್ತಾರು ಜನಪ್ರಿಯ ತಳಿಯ ಹಲಸು ಮಾವಿನ ಹಣ್ಣುಗಳು ಗ್ರಾಹಕರ ಮನ ಸೆಳೆಯುತ್ತಿವೆ. ಮಾವು, ಹಲಸಿನ ಹಣ್ಣುಗಳ

ಮಾರಾಟದ ಜತೆಗೆ ವಿವಿಧ ಸ್ಟಾಲ್ಗಳಲ್ಲಿ ಇತರ ಉತ್ಪನ್ನಗಳ ಮಾರಾಟದ ಭರಾಟೆಯೂ ಜೋರಾಗಿ ನಡೆಯುತಿದೆ.ಮಾವು- ಹಲಸು, ರಾಂಬುಟಾನ್, ಡ್ರಾಗನ್ಫ್ರಟ್ ಸೇರಿ ವಿವಿಧ ಹಣ್ಣುಗಳು ರುಚಿಯ ವೈವಿಧ್ಯತೆ ಸಾರುತಿದೆ.
ಇನ್ನು ಹಲಸಿನ ವೈವಿಧ್ಯ ಖಾದ್ಯಗಳು ಮೇಳದ ಹೈಲೈಟ್ಸ್. ಹಲಸಿನ ದೋಸೆ, ಇಡ್ಲಿ ಸೇರಿದಂತೆ ವಿವಿಧ ಖಾದ್ಯಗಳನ್ನು ಪರಿಚಯಿಸಲಾಗುತಿದೆ. ಸ್ಥಳದಲ್ಲೇ ಮಾಡಿಕೊಂಡುವ ಹಲಸಿನ ಬಿಸಿಬಿಸಿ ಜಲೇಬಿ, ಬಿಸಿಬಿಸಿ ಹಲಸಿನ ಹೋಳಿಗೆ, ಹಲಸಿನ ಪಲಾವ್ ಸೇರಿದಂತೆ ಹಲಸಿನ ವೈವಿಧ್ಯಮಯ ತಿಂಡಿ ತಿನಿಸುಗಳು ಬಾಯಲ್ಲಿ ನೀರೂರಿಸುವಂತಿವೆ. ಹಲಸಿನ

ಹಪ್ಪಳ, ಚಿಪ್ಸ್, ಉಂಡ್ಲಕಾಳು, ಐಸ್ ಕ್ರೀಂ ಮೊದಲಾದ ತಿನಿಸುಗಳು, ಪೋಡಿ, ಹಲಸಿನ ಗುಜ್ಜೆ ಮಂಚೂರಿ, ಹಲಸಿನ ಜ್ಯೂಸ್, ಜಾಮೂನ್, ಉಪ್ಪಿನಕಾಯಿ, ಪಾಯಸ, ಕಾಯಿ ಸೋಂಟೆ, ಹಲಸು ಬೀಜದ ಬಿಸ್ಕೇಟ್, ಚಪಾತಿ ಮೊದಲಾದ ಖಾದ್ಯಗಳು ಹಲಸು ಪ್ರಿಯರ ಮನ ಗೆದ್ದಿದೆ. ವಿವಿಧ ಮಾವಿನ ಹಣ್ಣಿನ ಪಾನಿಯಗಳು ಕೂಡ ಲಭ್ಯವಿದೆ.
ರಾಜ್ಯದ ವಿವಿಧ ಭಾಗಗಳಿಂದ ಬಂದ ಕೆಂಪು ಹಲಸು,ಬಿಳಿ ಹಲಸು ಜೊತೆಗೆ ಸ್ಥಳೀಯ ಹಲಸಿನ ಹಣ್ಣುಗಳು, ವಿವಿಧ ತಳಿಯ ಹಲಸಿನ ಗಿಡಗಳ ಪ್ರದರ್ಶನ ಮತ್ತು ಮಾರಾಟ ನಡೆಯುತಿದೆ.
ಹಲಸು ಮಾವು ಸೇರಿ ಹಲವು ಗಿಡಗಳು, ಬೀಜಗಳು ಲಭ್ಯವಿದೆ. ಹಲಸಿನ ರೆಂಬೆಗೆ ಸ್ಥಳದಲ್ಲಿಯೇ

ಕಸಿ ಕಟ್ಟಿ ಕೊಡುವ ಕಾರ್ಯವೂ ನಡೆಯುತ್ತಿತ್ತು. 100 ಕ್ಕೂ ತಳಿಯ 380 ಗಿಡಗಳಿಗೆ ಮೊದಲ ದಿನ ಕಸಿ ಕಟ್ಟಿ ನೀಡಲಾಗಿದೆ. ಹಲಸು, ಮಾವು ಸೇರಿ ವಿವಿಧ ಕೃಷಿಗಳು ಸೇರಿ ವಿವಿಧ ವಿಷಯಗಳ ಕುರಿತ ವಿಚಾರಗೋಷ್ಠಿಗಳು ನಡೆಯುತಿದೆ. ಸಂಜೆಯ ವೇಳೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತಿದೆ.
ಒಟ್ಟಿನಲ್ಲಿ ಸುಳ್ಯದಲ್ಲಿ ಮೇಳೈಸಿದ ಹಲಸು ಮಾವು ಸಂಭ್ರಮವು ಹಬ್ಬದ ವಾತಾವರಣವನ್ನು ಸೃಷ್ಠಿಸಿದ್ದು ಕೃಷಿ ಜಾತ್ರೆಯ ರಂಗು ತಂದಿದೆ.

ಟೀಮ್ ಉಬಾರ್, ಸುಳ್ಯ ರೈತ ಉತ್ಪಾದಕ ಕಂಪೆನಿ ಸುಳ್ಯ, ಪ್ರಣವ ಸೌಹಾರ್ದ ಸಹಕಾರಿ ಸಂಘ ಮತ್ತು ಸುದ್ದಿ ಕೃಷಿ ಅರಿವು ಕೇಂದ್ರ ಇವರ ಜಂಟಿ ಆಶ್ರಯದಲ್ಲಿ ಸ್ಥಳೀಯ ತಾಲೂಕು ಆಡಳಿತ,ತಾಲೂಕು ಪಂಚಾಯತ್, ಕೃಷಿ ಸಂಬಂಧಿತ ಸರಕಾರಿ ಇಲಾಖೆಗಳು ಹಾಗೂ ಸಹಕಾರಿ ಸಂಘಗಳು, ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸುಳ್ಯದ ಕೇರ್ಪಳ ಶ್ರೀ ದುರ್ಗಾಪರಮೇಶ್ವರಿ ಕಲಾ ಮಂದಿರದ ವಠಾರದಲ್ಲಿ ಏರ್ಪಡಿಸಲಾದ 3 ದಿನಗಳ ಹಲಸು ಮತ್ತು ಮಾವು ಮೇಳ ಏರ್ಪಡಿಸಲಾಗಿದೆ.ಜೂ.14ರಂದು ಮೇಳಕ್ಕೆ ತೆರೆ ಬೀಳಲಿದೆ.

















