ಸುಳ್ಯ:ಪ್ರಾಕೃತಿಕ ವಿಕೋಪ ಉಂಟಾಗಿ ಹಾನಿ ಸಂಭವಿಸಿದರೆ ಕೂಡಲೇ ಭೇಟಿ ನೀಡಿ ಪರಿಶೀಲನೆ ನಡೆಸಿ ಈ ಕುರಿತು ವಿವರವಾದ ವರದಿ ಸಲ್ಲಿಸಬೇಕು, ಪರಿಹಾರ ಒದಗಿಸುವ ಪ್ರಯತ್ನ ಮಾಡಲಾಗುವುದು ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದ್ದಾರೆ. ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಪ್ರಾಕೃತಿಕ ವಿಕೋಪ ಕುರಿತು ಕುರಿತ ಸಮಾಲೋಚನಾ ಸಭೆಯಲ್ಲಿ ಅವರು ಅಧಿಕಾರಿಗಳಿಗೆ ಈ ಸೂಚನೆ ನೀಡಿದ್ದಾರೆ.ಪ್ರಾಕೃತಿಕ ವಿಕೋಪದಿಂದ
ಮನೆ ಹಾನಿ, ಕೊಟ್ಟಿಗೆ ಹಾನಿ ಮಾತ್ರವಲ್ಲದೆ ಬರೆ ಜರಿದರೂ ವರದಿ ತಯಾರಿಸಿ ನೀಡಿ. ಪ್ರತೀ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಹಾನಿ ಕುರಿತು ಪ್ರತ್ಯೇಕ ಪಟ್ಟಿ ತಯಾರಿಸಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಹಲವು ಕಡೆಗಳಲ್ಲಿ ಬರೆ ಜರಿದು ಅಪಾಯ ಇರುವ ಸ್ಥಿತಿ ನಿರ್ಮಾಣವಾಗಿದೆ.ಅದನ್ನು ತೆರವು ಮಾಡಲು ಅನುದಾನ ಅಗತ್ಯ ಇದೆ.ಈ ನಿಟ್ಟಿನಲ್ಲಿ ಸರಕಾರದ ಮಟ್ಟದಲ್ಲಿ ಪ್ರಯತ್ನ ನಡೆಸಲಾಗುವುದು. ಪ್ರತೀ ಪಂಚಾಯತ್ ವ್ಯಾಪ್ತಿಯ ಪಟ್ಟಿ ತಯಾರಿಸಿ, ಸಮಗ್ರ ವರದಿ ಮಾಡಿ ಕೊಡಬೇಕು ಎಂದು ಶಾಸಕರು ಸೂಚನೆ ನೀಡಿದರು.
ಈ ಬಾರಿಯ ಮಳೆಗಾಲದಲ್ಲಿ ಮನೆ ಹಾನಿ ಸೇರಿದಂತೆ ಸುಮಾರು 35 ಪ್ರಕರಣಗಳಲ್ಲಿ ಸುಮಾರು 7 ಲಕ್ಷ ಪರಿಹಾರ ವಿತರಿಸಲಾಗಿದೆ ಎಂದು ಇ.ಒ. ರಾಜಣ್ಣ ಮಾಹಿತಿ ನೀಡಿದರು.ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದಲ್ಲಿ ಹಾಗೂ ಕುಡಿಯುವ ನೀರು ಸರಬರಾಜು ವಿಭಾಗದಲ್ಲಿ ಇಂಜಿನಿಯರ್ಗಳ ಕೊರತೆ ಬಗ್ಗೆ ಇಂಜಿನಿಯರ್ ಮಣಿಕಂಠ ಸಭೆಯ ಗಮನ ಸೆಳೆದರು. ಎರಡೂ ವಿಭಾಗ ಸೇರಿ ಇಬ್ಬರು ಎಇಇ ಹಾಗೂ 8 ಮಂದಿ ಇಂಜಿನಿಯರ್ಗಳು ಸೇರಿ 10 ಮಂದಿ ಇರಬೇಕಾದಲ್ಲಿ ಕೇವಲ ಇಬ್ಬರು ಮಾತ್ರ ಇದ್ದಾರೆ. ಇದರಿಂದ ಕೆಲಸದ ಒತ್ತಡ ಜಾಸ್ತಿಯಾಗಿದೆ ಎಂದರು. ಪಿಡಬ್ಲ್ಯೂಡಿ ಎ.ಇ.ಇ. ಗೋಪಾಲ್ ರವರು ಕೂಡಾ ಇಂಜಿನಿಯರು, ಸಿಬ್ಬಂದಿಗಳು ಇಲ್ಲದೆ ಕೆಲಸ ತಡವಾಗುತ್ತಿರುವ ಕುರಿತು ಸಭೆಯಲ್ಲಿ ಪ್ರಸ್ತಾಪಿಸಿದರು.
63 ಮರ ತೆರವಿಗೆ ಅರ್ಜಿಗಳು ಬಂದಿದ್ದು ಪರಿಶೀಲನೆ ನಡೆಸಲಾಗಿದೆ. 2 ಮರ ಮಾತ್ರ ಅಪಾಯ ಇದೆ. ಉಳಿದೆಲ್ಲವೂ ಗೆಲ್ಲುಗಳು ತೆಗೆದರೆ ಸಾಕಾಗುತ್ತದೆ ಎಂದು ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್ ಮಾಹಿತಿ ನೀಡಿದ್ದಾರೆ. ತಾಲೂಕಿನಲ್ಲಿ 62 ಶಾಲೆಗಳ ಕಟ್ಟಡದಲ್ಲಿ ಹಾನಿ ಕಂಡು ಬಂದಿದೆ. ಈ ಕುರಿತು ವರದಿ ನೀಡಲಾಗಿದೆ. 3 ಶಾಲೆಗಳ ಕಟ್ಟಡ ತೀರಾ ದುಸ್ಥಿತಿಯಲ್ಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶೀತಲ್ ಯು.ಕೆ. ಮಾಹಿತಿ ನೀಡಿದರು.ತಹಶೀಲ್ದಾರ್ ಜಿ. ಮಂಜುನಾಥ್ ಇ.ಒ. ರಾಜಣ್ಣ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಇದ್ದರು.