ಸಂಪಾಜೆ: ಗೇರು ಸಂಶೋಧನಾ ನಿರ್ದೇಶನಾಲಯ ಪುತ್ತೂರು ವತಿಯಿಂದ ಕೃಷಿ ಭೂಮಿ ಸಂರಕ್ಷಣಾ ಅಭಿಯಾನದ ಅಂಗವಾಗಿ ಸಂಪಾಜೆ ಗ್ರಾಮದ ಗೇರು ತೋಟಗಳಿಗೆ ವಿಜ್ಞಾನಿಗಳು ಭೇಟಿ ನೀಡಿದರು.
ಮಣ್ಣಿನ ಆರೋಗ್ಯ ಸಂರಕ್ಷಣೆ ಹಾಗೂ ವೈಜ್ಞಾನಿಕ ಕೃಷಿ ಪದ್ಧತಿಗಳ ಅಳವಡಿಕೆಗಳ ಬಗ್ಗೆ
ಕೃಷಿಕರಿಗೆ ಮಾಹಿತಿ ನೀಡಲಾಯಿತು. ವಿಜ್ಞಾನಿಗಳಾದ ಡಾ.ವೀಣಾ, ಡಾ.ಭಾಗ್ಯ ಗ್ರಾಮದ ಕೃಷಿಕರ ಗೇರು ತೋಟಗಳಿಗೆ ಭೇಟಿ ನೀಡಿ ಕೃಷಿ ಚಟುವಟಿಕೆಗಳ ಕುರಿತು ಮಾಹಿತಿ ಹಾಗೂ ಮಾರ್ಗದರ್ಶನ ನೀಡಿದರು. ಸಂಪಾಜೆ ಗ್ರಾಮದ ಕೃಷಿಕರಾದ ಜಗದೀಶ್ ಕೆ.ಪಿ. ಹಾಗೂ ಸಿಲ್ವೆಸ್ಟರ್ ಡಿಸೋಜಾ ಅವರು ನಿರ್ವಹಿಸುತ್ತಿರುವ ಗೇರು ತೋಟಗಳಿಗೆ ಭೇಟಿ ನೀಡಿದರು.ಗೇರು ಕೃಷಿಯ ನಿರ್ವಹಣೆ, ಮಣ್ಣಿನ ಆರೋಗ್ಯದ ಮಹತ್ವ ಮತ್ತು ಸುಸ್ಥಿರ ಕೃಷಿ ಪದ್ಧತಿಗಳ ಕುರಿತು ಚರ್ಚಿಸಲಾಯಿತು. ಕೃಷಿ ಭೂಮಿ ಸಂರಕ್ಷಣಾ
ಅಭಿಯಾನದ ಆಶಯದಂತೆ ಮಣ್ಣಿನ ಫಲವತ್ತತೆಯನ್ನು ಕಾಪಾಡುವುದು, ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಅನುಸರಿಸುವುದು ಹಾಗೂ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ರೈತರಲ್ಲಿ ಜಾಗೃತಿ ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿತ್ತು.
ಈ ಸಂದರ್ಭದಲ್ಲಿ ಕೃಷಿಕರಾದ ಹನೀಫ್ ಎಸ್.ಕೆ., ಸುಂದರಿ ಮುಂಡಡ್ಕ, ನಾಗೇಶ್ ಬಾಚಿಗದ್ದೆ,ಸಂಪಾಜೆ ಗ್ರಾಮದ ಕೃಷಿ ಸಖಿ ಮೋಹಿನಿ ವಿಶ್ವನಾಥ್ (ನಿಶಾ) ಮತ್ತಿತರರು ಭಾಗವಹಿಸಿದ್ದರು.











