ಚಂಡೀಗಢ: ನಾಯಕ ಶುಭ್ಮನ್ ಗಿಲ್ ಅಮೋಘ ಶತಕ ಹಾಗು ಸಾಯ್ ಸುದರ್ಶನ ಅರ್ಧ ಶತಕದ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡವನ್ನು 7 ವಿಕೆಟ್ಗಳ ಅಂತರದಲ್ಲಿ ಮಣಿಸಿದ ಗುಜರಾತ್ ಟೈಟನ್ಸ್ ತಂಡ ಐಪಿಎಲ್ ಫೈನಲ್ಗೆ ಪ್ರವೇಶಿಸಿದೆ. ಮೇ.31ರಂದು ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುವ ಫೈನಲ್ನಲ್ಲಿ ಗುಜರಾತ್ ಟೈಟನ್ಸ್ ಆರ್ಸಿಬಿ ತಂಡವನ್ನು ಎದುರಿಸಲಿದೆ. ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ರಾಜಸ್ಥಾನ್ ರಾಯಲ್ಸ್ ವೈಭವ್ ಸೂರ್ಯವಂಶಿ ಅದ್ಭುತ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 214 ರನ್ ಕಲೆಹಾಕಿತು. ಗುರಿ ಬೆನ್ನಟ್ಟಿದ ಗುಜರಾತ್ 18.4 ಓವರ್ಗಳಲ್ಲಿ 3ವಿಕೆಟ್ ನಷ್ಟಕ್ಕೆ 219 ರನ್ ಗಳಿಸಿ ಫೈನಲ್ಗೆ ಮುನ್ನಡೆಯಿತು. ಟೈಟನ್ಸ್ಗೆ ಶುಭ್ಮನ್ ಗಿಲ್ ಹಾಗು ಸಾಯ್ ಸುದರ್ಶನ್ ಸ್ಪೋಟಕ ಆರಂಭ ನೀಡಿದರು. ಇವರಿಬ್ಬರು ಮೊದಲ ವಿಕೆಟ್ಗೆ 12.5 ಓವರ್ಗಳಲ್ಲಿ 167 ರನ್ ಗಳಿಸಿ ಗೆಲುವು ಖಾತ್ರಿ ಪಡಿಸಿದರು. ಶುಭ್ಮನ್ 53 ಎಸೆತಗಳಲ್ಲಿ 15 ಬೌಂಡರಿ ಹಾಗು 3 ಸಿಕ್ಸರ್ ನೆರವಿನಿಂದ104 ರನ್ ಗಳಿಸಿದರು. ಸುದರ್ಶನ್ 32 ಎಸೆತಗಳಲ್ಲಿ 8 ಬೌಂಡರಿ ಹಾಗು 1 ಸಿಕ್ಸರ್ ನೆರವಿನಿಂದ 58 ರನ್ ಗಳಿಸಿ ಹಿಟ್ ವಿಕೆಟ್ ಆದರು. ಇವರು ಸತತ ಎರಡನೇ ಪಂದ್ಯದಲ್ಲಿಯೂ ಕೈಯಿಂದ ಜಾರಿದ ಬ್ಯಾಟ್ ವಿಕೆಟ್ಗೆ ಬಡಿದು ಹಿಟ್ ವಿಕೆಟ್ ಆಗಿ ಔಟ್ ಆದರು.
ಮೊದಲು ಬ್ಯಾಟ್ ಮಾಡಿದ ರಾಜಸ್ಥಾನಕ್ಕೆ ವೈಭವ್ ಸೂರ್ಯವಂಶಿ ಮತ್ತೋಮ್ಮೆ ಅಮೋಘ ಇನ್ನಿಂಗ್ಸ್ ಆಡಿದರು.ವೈಭವ್ 47 ಎಸೆತದಲ್ಲಿ 8 ಬೌಂಡರಿ, 7 ಸಿಕ್ಸರ್ನಿಂದ 96 ರನ್ಗಳಿಸಿ ತಂಡಕ್ಕೆ ಆಸರೆಯಾದರು.
ರವೀಂದ್ರ ಜಡೇಜಾ 35 ಎಸೆತದಲ್ಲಿ 5 ಬೌಂಡರಿ, 1 ಸಿಕ್ಸರ್ನಿಂದ ಅಜೇಯ 45 ರನ್ ಗಳಿಸಿದರೆ,ಡೊನೊವನ್ ಫೆರೀರಾ ಗುಜರಾತ್ ಬೌಲರ್ಗಳನ್ನು ದಂಡಿಸಿಲು ಶುರುಮಾಡಿದರು. ಕೇವಲ 11 ಎಸೆತದಲ್ಲಿ 2 ಬೌಂಡರಿ, 4 ಸಿಕ್ಸರ್ನಿಂದ ಅಜೇಯ 38 ರನ್ ಗಳಿಸಿದರು. ಯಶಸ್ವಿ ಜೈಸ್ವಾಲ್ (1), ಧ್ರುವ್ ಜುರೆಲ್ (7), ರಿಯಾನ್ ಪರಾಗ್ (11), ದಾಸುನ್ ಶನಕ (3) ಮತ್ತು ಜೋಫ್ರಾ ಆರ್ಚರ್ (7) ಬೇಗನೆ ಪೆವಿಲಿಯನ್ ಸೇರಿದರು. ಗುಜರಾತ್ ಟೈಟನ್ಸ್ ಪರ ಜೇಸನ್ ಹೋಲ್ಡರ್ 27ಕ್ಕೆ 2, ಕಗಿಸೊ ರಬಾಡ 35ಕ್ಕೆ 2, ಪ್ರಸಿದ್ಧ್ ಕೃಷ್ಣ 42ಕ್ಕೆ 1 ಮತ್ತು ಮೊಹಮ್ಮದ್ ಸಿರಾಜ್ 42ಕ್ಕೆ 1 ವಿಕೆಟ್ ಪಡೆದರು.















