ನವದೆಹಲಿ:ದೇಶದ ವಿವಿಧ ಭಾಗಗಳಲ್ಲಿ ಈ ಬಾರಿ ನೈರುತ್ಯ ಮುಂಗಾರಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸೂಚನೆ ನೀಡಿದೆ. ಈ ಬಾರಿ ವಾಡಿಕೆಯ ಶೇ 90ರಷ್ಟು ಮಾತ್ರವೇ ಮಳೆಯಾಗಲಿದೆ ಎಂದು ಇಲಾಖೆ ಅಂದಾಜಿಸಿದೆ. ಎಲ್ ನಿನೊ ತೀವ್ರ ಸ್ವರೂಪ ಪಡೆದುಕೊಳ್ಳಲಿದ್ದು ಇದರಿಂದ ಮಳೆಯ
ಪ್ರಮಾಣ ಕಡಿಮೆಯಾಗಲಿದೆ. ಇದರಿಂದ ಮಳೆಯಾಧಾರಿತ ಕೃಷಿಗೂ ಹೊಡೆತ ಬೀಳಲಿದೆ’ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಎಲ್ ನಿನೋ ಪರಿಣಾಮ ಉಷ್ಣಾಂಶ ಹೆಚ್ಚಾಗುವ ಸಾಧ್ಯತೆಯೂ ಕಂಡು ಬಂದಿದೆ. ಆದರೆ
ಈಶಾನ್ಯ ಭಾಗದಲ್ಲಿ ಮಾತ್ರ ವಾಡಿಕೆಯ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಈ ಮಧ್ಯೆ ಜೂನ್ ಮೊದಲ ವಾರ ಮುಂಗಾರು ಆರಂಭವಾಗುವ ಲಕ್ಷಣಗಳಿವೆ ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.ಮೇ. 26ಕ್ಕೆ ಮುಂಗಾರು ಕೇರಳಕ್ಕೆ ಪ್ರವೇಶವಾಗಲಿದೆ ಎಂದು ಅಂದಾಜಿಸಲಾಗಿತ್ತು. ಮಳೆ ಮಾರುತ ಮೇ.16ಕ್ಕೆ ಅಂಡಮಾನ್ಗೆ ಆಗಮಿಸಿದ್ದರೂ ಕೇರಳ ತೀರಕ್ಕೆ ಆಗಮಿಸಲು ಇನ್ನೂ ಒಂದು ವಾರ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಕೇರಳದ ವಿವಿಧ ಭಾಗಗಳಲ್ಲಿ ಮುಂಗಾರು ಪೂರ್ವ ಉತ್ತಮ ಮಳೆಯಾಗುತಿದೆ.















