ಚೆನ್ನೈ: ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಮೇಲುಗೈ ಸಾಧಿಸಿದೆ. ಇಲ್ಲಿನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಎರಡನೇ ದಿನದಾಟದ ಟೀ ವಿರಾಮದ ಬಳಿಕ ಬಾಂಗ್ಲಾದೇಶ 39 ಓವರ್ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 126 ರನ್ ಗಳಿಸಿದ್ದು, ಸಂಕಷ್ಟದಲ್ಲಿದೆ.ಪ್ರವಾಸಿ ತಂಡವು ಇನ್ನೂ ಎರಡು
ವಿಕೆಟ್ ಮಾತ್ರ ಬಾಕಿ ಉಳಿದಿರುವಂತೆಯೇ 250 ರನ್ಗಳ ಹಿನ್ನಡೆಯಲ್ಲಿದೆ.
ಕೇವಲ 40 ರನ್ ಗಳಿಸುವಷ್ಟರಲ್ಲಿ ಬಾಂಗ್ಲಾದೇಶ ತಂಡ ಐದು ವಿಕೆಟ್ ಕಳೆದುಕೊಂಡಿತ್ತು. ಶದ್ಮಾನ್ ಇಸ್ಲಾಂ (2), ಝಾಕೀರ್ ಹಸನ್ (3), ಮೊಮಿನುಲ್ ಹಕ್ (0), ನಾಯಕ ನಜ್ಮುಲ್ ಹುಸೇನ್ ಶಾಂತೊ (20) ಮತ್ತು ಮುಷ್ಫೀಕುರ್ ರಹೀಂ (8) ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು.ಭಾರತೀಯ ವೇಗಿಗಳಾದ ಜಸ್ಪ್ರೀತ್ ಬೂಮ್ರಾ, ಆಕಾಶ್ ದೀಪ್ ಮತ್ತು ಮೊಹಮ್ಮದ್ ಸಿರಾಜ್ ಬಾಂಗ್ಲಾದೇಶಕ್ಕೆ ಆರಂಭದಲ್ಲೇ ಬಲವಾದ ಪೆಟ್ಟು ಕೊಟ್ಟರು.
ಶಕಿಬ್ ಅಲ್ ಹಸನ್ (32) ಹಾಗೂ ಲಿಟನ್ ದಾಸ್ (22) ಆರನೇ ವಿಕೆಟ್ಗೆ ಅಲ್ಪ ಪ್ರತಿರೋಧ ಒಡ್ಡಿದರು. ಆದರೆ ಅವರಿಬ್ಬರನ್ನು ಹೊರದಬ್ಬಿದ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ ಬಾಂಗ್ಲಾ ಓಟಕ್ಕೆ ಕಡಿವಾಣ ಹಾಕಿದರು.ಭಾರತದ ಪರ ಬೂಮ್ರಾ ಮೂರು ಮತ್ತು ಆಕಾಶ್ ದೀಪ್ ಹಾಗೂ ರವಿಂದ್ರ ಜಡೇಜ ತಲಾ ಎರಡು ಮತ್ತು ಮೊಹಮ್ಮದ್ ಸಿರಾಜ್ ಒಂದು ವಿಕೆಟ್ ಕಬಳಿಸಿದರು.
ಬುಮ್ರಾ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 400 ವಿಕೆಟ್ ಉರುಳಿಸಿದರು. ಈ ಮೊದಲು ಭಾರತ ತಂಡ 91.2 ಓವರ್ಗಳಲ್ಲಿ 376 ರನ್ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿತು.
ರವೀಂದ್ರ ಜಡೇಜ ಹಾಗೂ ರವಿಚಂದ್ರನ್ ಅಶ್ವಿನ್ ಏಳನೇ ವಿಕೆಟ್ಗೆ 199 ರನ್ಗಳ ಜೊತೆಯಾಟ ಕಟ್ಟಿದರು. 86 ರನ್ ಗಳಿಸಿದ ಜಡೇಜ ಶತಕ ವಂಚಿತರಾದರು.ಮೊದಲ ದಿನದಾಟದಲ್ಲಿ ಟೆಸ್ಟ್ ಕ್ರಿಕೆಟ್ನ ಆರನೇ ಶತಕ ಸಾಧನೆ ಮಾಡಿದ ಅಶ್ವಿನ್ 133 ಎಸೆತಗಳಲ್ಲಿ 113 ರನ್ ಗಳಿಸಿ ಔಟ್ ಆದರು.ಬಾಂಗ್ಲಾದೇಶದ ಪರ ಹಸನ್ ಮೆಹಮೂದ್ ಐದು ಮತ್ತು ತಸ್ಕಿನ್ ಅಹಮದ್ ಮೂರು ವಿಕೆಟ್ ಗಳಿಸಿದರು.