ನವದೆಹಲಿ:ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಭರ್ಜರಿ ಜಯ ಸಾಧಿಸಿ ಅಧಿಕಾರಕ್ಕೆ ಬಂದರೂ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿಯೇ ಉಳಿದಿದೆ.ಮುಖ್ಯಮಂತ್ರಿ ಆಯ್ಕೆ ಹೈಕಮಾಂಡ್ ಅಂಗಳಕ್ಕೆ ಬಂದಿದ್ದು ದೆಹಲಿಯಲ್ಲಿ ಬಿರುಸಿನ ಚರ್ಚೆ ನಡೆದಿದೆ.ಆದರೆ ಇಂದು ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಆಯ್ಕೆ ಅಂತಿಮಗೊಂಡಿಲ್ಲ.ಸಿಎಂ ಸ್ಥಾನಕ್ಕಾಗಿ
ವಿಪಕ್ಷ ನಾಯಕ ವಿ.ಡಿ. ಸತೀಶನ್,ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮತ್ತು ಹಿರಿಯ ಮುಖಂಡ ರಮೇಶ್ ಚೆನ್ನಿತ್ತಲ ನಡುವೆ ಸ್ಪರ್ಧೆ ಏರ್ಪಟ್ಟಿದೆ.ಈ ಮೂವರು ನಾಯಕರು ಪಟ್ಟು ಬಿಡದ ಕಾರಣ ಸಿಎಂ ಆಯ್ಕೆ ಜಟಿಲವಾಗಿದೆ.ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಉಪಸ್ಥಿತಿಯಲ್ಲಿ ಈ ಮೂರು ಮಂದಿ ಮುಖಂಡರನ್ನು ಕರೆಸಿ ಸಭೆ ನಡೆಸಲಾಯಿತು. ಆದರೆ ನಿರ್ಧಾರ ಆಗಿಲ್ಲ. ಮುಖ್ಯಮಂತ್ರಿಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಘೋಷಿಸಲಿದ್ದಾರೆ ಎಂದು ಸಭೆಯ ಬಳಿಕ ಸತೀಶನ್, ವೇಣುಗೋಪಾಲ್ ಹಾಗೂ ರಮೇಶ್ ಚೆನ್ನಿತಲ ತಿಳಿಸಿದ್ದಾರೆ.
ಪಕ್ಷದ ಹಿರಿಯ ಮುಖಂಡರಾದ ಮುಕುಲ್ ವಾಸ್ನಿಕ್ ಮತ್ತು ಅಜಯ್ ಮಾಕನ್ ಅವರನ್ನು ಕೇರಳದ ವೀಕ್ಷಕರನ್ನಾಗಿ ಹೈಕಮಾಂಡ್ ನೇಮಿಸಿತ್ತು.ಇವರು ಕೇರಳಕ್ಕೆ ಆಗಮಿಸಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಸಿ ಶಾಸಕರ ಅಭಿಪ್ರಾಯ ಪಡೆದಿದ್ದಾರೆ. ಪ್ರತ್ಯೇಕ ಪ್ರತ್ಯೇಕ ಪ್ರತಿಯೊಬ್ಬ ಶಾಸಕರ ಅಭಿಪ್ರಾಯ ದಾಖಲಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ವರದಿ ಸಲ್ಲಿಸಿದ್ದಾರೆ.
ಇಂದು ಮೂವರು ಮುಖಂಡರನ್ನು ಕರೆಸಿ ಖರ್ಗೆ ಅವರ ನವದೆಹಲಿಯ ನಿವಾಸದಲ್ಲಿ ರಾಹುಲ್ ಗಾಂಧಿ ಉಪಸ್ಥಿತಿಯಲ್ಲಿ ಚರ್ಚೆ ನಡೆಸಿದರು. ಮೂವರು ಮುಖಂಡರು ಕೂಡ ತಮ್ಮ ಅಭಿಪ್ರಾಯ ಮತ್ತು ಭಾವನೆಯನ್ನು ಮುಖಂಡರ ಮುಂದೆ ವ್ಯಕ್ತಪಡಿಸಿದ್ದಾರೆ.
ಶಾಸಕರ ಬೆಂಬಲ ಹೆಚ್ಚು ವೇಣುಗೋಪಾಲ್ ಅವರ ಪರವಾಗಿದ್ದರೆ, ಕೇರಳ ರಾಜ್ಯದ ಜನರ ಭಾವನೆ, ಕಾಂಗ್ರೆಸ್ ಕಾರ್ಯಕರ್ತರ ಒಲವು ಹಾಗು ಯುಡಿಎಫ್ ಮಿತ್ರಪಕ್ಷಗಳ ಬೆಂಬಲ ಸತೀಶನ್ ಅವರಿಗಿದೆ.
ಸಾಮಾಜಿಕ ಜಾಲತಾಣಗಳ ಮೂಲಕವೂ, ಪ್ಲೆಕ್ಸ್ ಸ್ಥಾಪಿಸುವುದರ ಮೂಲಕ ಮಾತ್ರವಲ್ಲದೆ ಸತೀಶನ್ ಅವರಿಗೆ ಸಿಎಂ ಸ್ಥಾನ ನೀಡಬೇಕು ಎಂದು ಕೇರಳ ರಾಜ್ಯದಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಮೆರವಣಿಗೆ, ಸಭೆಗಳನ್ನು ಮಾಡುವ ಮೂಲಕ ಅಭಿಯಾನ ನಡೆಸಿದ್ದಾರೆ. 2021ರ ಚುನಾವಣೆಯಲ್ಲಿ ಕಾಂಗ್ರೆಸ್ ಸೋತ ನಂತರ, ವಿ.ಡಿ ಸತೀಶನ್ ಅವರು ವಿರೋಧ ಪಕ್ಷದ ಮುಖಂಡರಾಗಿ, ಯುಡಿಎಫ್ನ ಮುಂಚೂಣಿಯಲ್ಲಿ ನಿಂತು, ಪಕ್ಷವನ್ನು ಮರಳಿ ಅಧಿಕಾರಕ್ಕೆ ತಂದಿದ್ದಾರೆ. ಕೇರಳದ ಮುಖ್ಯಮಂತ್ರಿ ಸ್ಥಾನಕ್ಕೆ ಅವರೇ ಅರ್ಹರು ಎಂದು ಅವರ ಬೆಂಬಲಿಗರು ವಾದಿಸುತ್ತಿದ್ದಾರೆ. ‘ಯುಡಿಎಫ್ ಮೈತ್ರಿಕೂಟದಲ್ಲಿರುವ ಮುಸ್ಲಿಂ ಲೀಗ್ ಹಾಗೂ ಇತರ ಪಕ್ಷಗಳ ಬೆಂಬಲವೂ ಸತೀಶನ್ ಅವರಿಗೆ ಇದೆ.
‘ಮುಖ್ಯಮಂತ್ರಿ ಆಯ್ಕೆ ವಿಷಯದಲ್ಲಿ ಜನಪ್ರಿಯತೆ ಮತ್ತು ಜನಬೆಂಬಲ ಮಾತ್ರ ಮುಖ್ಯವಲ್ಲ, ಪಕ್ಷದ ಶಾಸಕರ ಬೆಂಬಲವೂ ನಿರ್ಣಾಯಕ’ ಎಂದು ವೇಣುಗೋಪಾಲ್ ಪರವಾಗಿ ಬೆಂಬಲಿಗರು ಧ್ವನಿ ಎತ್ತಿದ್ದಾರೆ. ಹಿರಿಯ ಮುಖಂಡರಾದ ರಮೇಶ್ ಚೆನ್ನಿತಲ ಅವರಿಗೆ ಹಿರಿತನದ ಆಧಾರದಲ್ಲಿ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂಬುದು ಚೆನ್ನಿತಲ ಬೆಂಬಲಿಗರ ಒತ್ತಾಯ.











