ಪಟ್ನಾ:ಬಿಹಾರ ವಿಧಾನಸಭೆ ಚುನಾವಣೆಯ ಸೀಟು ಹಂಚಿಕೆ ಪ್ರಕ್ರಿಯೆಯನ್ನು ಎನ್ಡಿಎ ಭಾನುವಾರ ಅಂತಿಮಗೊಳಿಸಿದೆ.243 ಸ್ಥಾನಗಳ ಪೈಕಿ ತಲಾ 101 ಸ್ಥಾನಗಳಲ್ಲಿ ಬಿಜೆಪಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು ಸ್ಪರ್ಧಿಸಲಿವೆ. ಇನ್ನುಳಿದ ಸ್ಥಾನಗಳನ್ನು
ಇತರೆ ಸಣ್ಣ ಮೈತ್ರಿ ಪಕ್ಷಗಳಿಗೆ ಹಂಚಿಕೆ ಮಾಡಲಾಗಿದೆ. ಸೀಟು ಹಂಚಿಕೆ ಪ್ರಕ್ರಿಯೆ ಅಂತಿಮಗೊಂಡಿರುವುದನ್ನು ಜೆಡಿಯು ಕಾರ್ಯಾಧ್ಯಕ್ಷ ಸಂಜಯ್ ಕುಮಾರ್ ಝಾ, ಬಿಜೆಪಿ ಮುಖಂಡ ಸಾಮ್ರಾಟ್ ಚೌಧರಿ ಎಕ್ಸ್ ಪೋಸ್ಟ್ನಲ್ಲಿ ಖಚಿತಪಡಿಸಿದ್ದಾರೆ.ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷವು (ರಾಮ್ ವಿಲಾಸ್) 29 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ.
ಕನಿಷ್ಠ 15 ಸ್ಥಾನಗಳಾದರೂ ಬೇಕು ಎಂದು ಪಟ್ಟು ಹಿಡಿದಿದ್ದ, ಕೇಂದ್ರ ಸಚಿವ ಜಿತನ್ ರಾಮ್ ಮಾಂಝಿ ಅವರ ಎಚ್ಎಎಂ ಪಕ್ಷಕ್ಕೆ 6 ಸ್ಥಾನಗಳನ್ನು ಹಂಚಿಕೆ ಮಾಡಲಾಗಿದೆ.ರಾಜ್ಯಸಭಾ ಸದಸ್ಯ ಉಪೇಂದ್ರ ಕುಶ್ವಾಹ ಅವರ ರಾಷ್ಟ್ರೀಯ ಲೋಕ ಮೋರ್ಚಾ ಪಕ್ಷವು 6 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ.















