ಧರ್ಮಸ್ಥಳ: ಶ್ರದ್ಧಾ-ಭಕ್ತಿಯಿಂದ ಭಗವಂತನ ಆರಾಧನೆಯೊಂದಿಗೆ ಸಾಧ್ಯವಾದಷ್ಟು ಪರೋಪಕಾರ ಹಾಗೂ ಇತರರ ಸೇವೆ ಮಾಡಬೇಕು. ಆಗ ದೇವರು ಸಂತೃಪ್ತರಾಗಿ ನಮ್ಮನ್ನು ಅನುಗ್ರಹಿಸುತ್ತಾರೆ ಎಂದು ಶೃಂಗೇರಿ ಪೀಠದ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.
ಅವರು ಭಾನುವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ
666ನೇ “ವಾತ್ಸಲ್ಯ ಮನೆ” ಹಸ್ತಾಂತರ ಮಾಡಿ ಫಲಾನುಭವಿಗಳಿಗೆ ಮಾಸಾಶನ ಮತ್ತು ಇತರ ಸವಲತ್ತುಗಳನ್ನು ವಿತರಿಸಿ ಆಶೀರ್ವಚನ ನೀಡಿದರು.ಕಷ್ಟದಲ್ಲಿರುವವರಿಗೆ “ವಾತ್ಸಲ್ಯ ಮನೆ” ನೀಡುವ ಕಾಯಕ ಅತ್ಯಂತ ಪುಣ್ಯದಾಯಕ ಸೇವೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ ಶೃಂಗೇರಿಗೂ ಧರ್ಮಸ್ಥಳಕ್ಕೂ ಅವಿನಾಭಾವ ಸಂಬಂಧವಿದೆ ಎಂದು ಹೇಳಿ ಪೂಜ್ಯರ ಆಶೀರ್ವಾದ ಮತ್ತು ಮಾರ್ಗದರ್ಶನ ಇರಲಿ ಎಂದು ಕೋರಿದರು.

ಸ್ವಾಮೀಜಿಯವರು ಸಾನ್ನಿಧ್ಯ ಸರತಿ ಸಾಲಿನ ವ್ಯಸಸ್ಥೆ ಹಾಗೂ ವಸ್ತುಸಂಗ್ರಾಹಾಲಯವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಎಸ್.ಎಸ್.ಪ್ರಾಸ್ತಾವಿಕವಾಗಿ ಮಾತನಾಡಿದರು.
ಹೇಮಾವತಿ ವೀ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಸೋನಿಯಾ ಯಶೋವರ್ಮ, ಗ್ರಾಮಾಭಿವೃದ್ಧಿ ಯೋಜನೆಯ ಆಡಳಿತ ಮಂಡಳಿ ಸದಸ್ಯ ಶ್ಯಾಮ್ಭಟ್ ಕೆ. ಉಪಸ್ಥಿತರಿದ್ದರು. ಉಪನ್ಯಾಸಕ ಡಾ.ಶ್ರೀಧರ ಭಟ್ ಸ್ವಾಗತಿಸಿದರು. ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಮನೋಜ್ ಮಿನೆಜಸ್ ಧನ್ಯವಾದವಿತ್ತರು.
ಪೂಜಾ ಪ್ರಶಾಂತ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.















