ಬೆಂಗಳೂರು: ಜನವರಿ ಮೊದಲ ಅಥವಾ ಎರಡನೇ ವಾರದಲ್ಲಿ ತಾಲ್ಲೂಕು, ಜಿಲ್ಲಾ ಪಂಚಾಯತಿ ಚುನಾವಣೆಗಳು ನಡೆಯಲಿವೆ. ಬಳಿಕ ಗ್ರಾಮ ಪಂಚಾಯಿತಿ ಚುನಾವಣೆ ಅಧಿಸೂಚನೆ ಹೊರಬೀಳಲಿದೆ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು.ಸುದ್ದಿಗಾರರ ಜತೆ ಮಾತನಾಡಿದ ಅವರು ಗ್ರಾಮೀಣ ಸ್ಥಳೀಯ ಸಂಸ್ಥೆ ಚುನಾವಣೆಗೆ ಈಗಾಗಲೇ
ಕರಡು ಮೀಸಲು ಅಧಿಸೂಚನೆ ಹೊರಡಿಸಿದ್ದು, ಅ.19ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಸುಮಾರು ಎರಡು ಸಾವಿರಕ್ಕೂ ಅಧಿಕ ಆಕ್ಷೇಪಣೆ ಬಂದಿವೆ. ಅಧಿಕಾರಿಗಳು ನಿಯಮದಂತೆ ಪರಿಶೀಲನೆ ನಡೆಸುತ್ತಿದ್ದಾರೆ. ಶೀಘ್ರ ಅಂತಿಮ ಅಧಿಸೂಚನೆ ಹೊರಡಿಸಲಾಗುವುದು’ ಎಂದರು.ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿದ ನಂತರ ರಾಜ್ಯ ಚುನಾವಣೆ ಆಯೋಗ, ಕೇಂದ್ರ ಚುನಾವಣೆ ಆಯೋಗದಿಂದ ಮತದಾರರ ಪಟ್ಟಿ ಪಡೆದು ಅಥವಾ ತನ್ನಲ್ಲಿರುವ ಮತದಾರರ ಪಟ್ಟಿಯನ್ನೇ ಪರಿಷ್ಕರಿಸಿ ಚುನಾವಣಾ ಪ್ರಕ್ರಿಯೆ ಆರಂಭಿಸಲಿದೆ ಎಂದು ಹೇಳಿದರು.
ರಾಜ್ಯದ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿಗಳಿಗೆ 2016ರ ಏಪ್ರಿಲ್ನಲ್ಲಿ ಚುನಾವಣೆ ನಡೆದಿತ್ತು. ಅಂದು ಆಯ್ಕೆಯಾಗಿದ್ದ ಸದಸ್ಯರ ಅವಧಿ 2021ರ ಏಪ್ರಿಲ್ 27ರಂದು ಮುಕ್ತಾಯವಾಗಿತ್ತು. ಐದೂವರೆ ವರ್ಷಗಳಿಂದ ಚುನಾವಣೆ ನಡೆದಿಲ್ಲ. ರಾಜ್ಯದ ಬಹುತೇಕ ಗ್ರಾಮ ಪಂಚಾಯಿತಿಗಳಿಗೆ 2020–21 ರಲ್ಲಿ ಚುನಾವಣೆ ನಡೆಸಲಾಗಿತ್ತು. ಅವುಗಳ ಅವಧಿಯು ಮುಕ್ತಾಯವಾಗಿ ಎರಡನೇ ಅವಧಿಗೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದರು.









