ಬೆಂಗಳೂರು:ಕೇಂದ್ರ ಸರ್ಕಾರದ ಕಸ್ತೂರಿ ರಂಗನ್ ವರದಿ ಜಾರಿಗೆ ಕರ್ನಾಟಕ ವಿಧಾನಮಂಡಲದ ಉಭಯ ಸದನಗಳಲ್ಲಿ ಪಕ್ಷಾತೀತವಾಗಿ ಸದಸ್ಯರಿಂದ ವಿರೋಧ ವ್ಯಕ್ತವಾಗಿದೆ. ಉಪಗ್ರಹ ಆಧಾರಿತ ಸಮೀಕ್ಷೆ ಬದಲು ಕೇರಳ ಮಾದರಿಯಲ್ಲಿ ಭೌತಿಕ ಸಮೀಕ್ಷೆ ನಡೆಸಿ ಎನ್ಜಿಟಿಗೆ ವರದಿ ಸಲ್ಲಿಸಲು ಆಗ್ರಹಿಸಲಾಗಿದೆ. ಕಸ್ತೂರಿ ರಂಗನ್ ವರದಿ ಜಾರಿ ಸಂಬಂಧ
ಕೇಂದ್ರ ಸರ್ಕಾರ ಹೊರಡಿಸಿರುವ ಕರಡು ಅಧಿಸೂಚನೆಗೆ ಸೋಮವಾರ ಆರಂಭವಾದ ವಿಧಾನಮಂಡಲದ ವಿಶೇಷ ಅಧಿವೇಶನದ ಮೊದಲ ದಿನ ಉಭಯ ಸದನಗಳಲ್ಲಿ ಪಕ್ಷಾತೀತವಾಗಿ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರ ಕೇರಳ ಮಾದರಿಯಲ್ಲಿ ಭೌತಿಕ ಸಮೀಕ್ಷೆ ನಡೆಸಿ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣಕ್ಕೆ(ಎನ್ಜಿಟಿ) ವರದಿ ಸಲ್ಲಿಸಿ ಕಾನೂನು ಹೋರಾಟ ಮುಂದುವರೆಸಬೇಕು. ಕೇಂದ್ರದ ಕರಡು ಅಧಿಸೂಚನೆಯನ್ನು ತಿರಸ್ಕರಿಸಬೇಕು ಎಂದು ಒಕ್ಕೊರಲಿನಿಂದ ಆಗ್ರಹಿಸಿದರು. ಕಸ್ತೂರಿ ರಂಗನ್ ವರದಿ ಕುರಿತು ಉಭಯ ಸದನಗಳಲ್ಲಿ
ನಡೆದ ಚರ್ಚೆಯಲ್ಲಿ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಪಕ್ಷದ ಸದಸ್ಯರು ಪಾಲ್ಗೊಂಡು ಮಾತನಾಡಿದರು. ದಶಕದ ಹಿಂದೆ ಉಪಗ್ರಹಗಳ ಮೂಲಕ ಮಾಡಿರುವ ಸಮೀಕ್ಷೆ ಮಾಡಿ ಸಿದ್ಧಪಡಿಸಿರುವ ಈ ವರದಿ ಜಾರಿಯಾದರೆ, ಜನಜೀವನಕ್ಕೆ ಮಾರಕವಾಗಲಿದೆ. ಯಾವುದೇ ಕಾರಣಕ್ಕೂ ಈ ವರದಿ ಒಪ್ಪಬಾರದು. ರಾಜ್ಯ ಸರ್ಕಾರ ಕೇರಳ ಮಾದರಿಯಲ್ಲಿ ಭೌತಿಕ ಸರ್ವೆ ನಡೆಸಿ ಎನ್ಜಿಟಿಗೆ ಸಮಗ್ರ ವರದಿ ಸಲ್ಲಿಸಬೇಕು ಎಂದು ಒತ್ತಾಯಿಸಿದರು.
ವರದಿ ಜಾರಿಯಿಂದ ಪರಿಸರ ಸೂಕ್ಷ್ಮ ವಲಯದೊಳಗೆ ಬರುವ ಗ್ರಾಮಗಳ ಜನರ ಬದುಕು ಹಾಳಾಗುತ್ತದೆ, ಜನವಸತಿ ಪ್ರದೇಶಗಳು, ಕಾಫಿ, ಏಲಕ್ಕಿ ತೋಟಗಳನ್ನು ಅರಣ್ಯ ಎಂದು ಪರಿಗಣಿಸಲಾಗಿದೆ. ಹೀಗಾಗಿ ಜನರಲ್ಲಿ ಆತಂಕ ಹೆಚ್ಚಾಗಿದೆ. ಹೀಗಾಗಿ ಈ ವರದಿಯನ್ನು ಒಪ್ಪಬಾರದು. ಕಸ್ತೂರಿ ರಂಗನ್ ವರದಿ ಸಂಬಂಧ ಕೇಂದ್ರ ಸರ್ಕಾರ ಎನ್ಜಿಟಿ ಎದುರು ತನ್ನ ನಿಲುವು ಸ್ಪಷ್ಟಪಡಿಸಬೇಕು ಎಂದು ಸದಸ್ಯರು ಆಗ್ರಹಿಸಿದರು.
ರೈತರ ಕೃಷಿ ಭೂಮಿ ಹಾಗೂ ವಾಸಸ್ಥಳದ ನೈಜ ಸ್ಥಿತಿಯನ್ನು ಪರಿಗಣಿಸಬೇಕು. ಸ್ಥಳೀಯ ಮಟ್ಟದಲ್ಲಿ ಭೂಮಿಯ ವಾಸ್ತವ ಸ್ಥಿತಿ, ಗ್ರಾಮಗಳ ಗಡಿ, ಕೃಷಿ ಪ್ರದೇಶ, ವಸತಿ ಪ್ರದೇಶ ಹಾಗೂ ಅರಣ್ಯ ಪ್ರದೇಶಗಳನ್ನು ಪ್ರತ್ಯೇಕವಾಗಿ ಗುರುತಿಸಬೇಕು ಎಂದು ಸಲಹೆ ನೀಡಿದರು.
ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಿಧಾನ ಪರಿಷತ್ತಿನಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಸ್ತೂರಿ ರಂಗನ್ ವರದಿಯಲ್ಲಿ ಪ್ರಮುಖ ಅಂಶಗಳು, ಶಿಫಾರಸುಗಳ ಬಗ್ಗೆ ವಿವರಿಸಿದರು.ಉಭಯ ಸದನಗಳಲ್ಲಿ
ಬಿಜೆಪಿಯ ಆರಗ ಜ್ಞಾನೇಂದ್ರ, ಕಾಂಗ್ರೆಸ್ನ ಎ.ಎಸ್.ಪೊನ್ನಣ್ಣ,
ಬಿ.ಕೆ.ಹರಿಪ್ರಸಾದ್,ಜೆಡಿಎಸ್ ಸದಸ್ಯ ಎಸ್.ಎಲ್.ಭೋಜೇಗೌಡ,
ಕಾಂಗ್ರೆಸ್ಸಿನ ಎಸ್.ರವಿ, ಕಾಂಗ್ರೆಸ್ಸಿನ ನಯನಾ ಮೋಟಮ್ಮ, ನಾಗರಾಜ್ ಯಾದವ್, ಐವಾನ್ ಡಿಸೋಜಾ, ಬಲ್ಕೀಸ್ ಬಾನು, ಬಿಜೆಪಿಯ ಎನ್.ರವಿಕುಮಾರ್, ಡಿ.ಎಸ್.ಅರುಣ್, ಹರೀಶ್ ಪೂಂಜಾ, ಕಿಶೋರ್ ಕುಮಾರ್ ಪುತ್ತೂರು, ಆರ್.ರಘು ಕೌಟಿಲ್ಯ, ಡಾ.ಧನಂಜಯ ಸರ್ಜಿ, ಕೇಶವ ಪ್ರಸಾದ್ ಮಾತನಾಡಿದರು.






