ನವದೆಹಲಿ:ಮಹಾರಾಷ್ಟ್ರದಲ್ಲಿ ಅಡಿಕೆ ಸಾಗಾಟದ ವಾಹನಗಳ ಸಂಚಾರಕ್ಕೆ ಎದುರಾಗುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಲು ಮತ್ತು ಅಡಿಕೆ ಬೆಳೆಗಾರರು ಹಾಗೂ ವರ್ತಕರ ಹಿತರಕ್ಷಣೆಯನ್ನು ಕಾಯುವ ನಿಟ್ಟಿನಲ್ಲಿ, ನವದೆಹಲಿಯಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ ನೇತೃತ್ವದ ನಿಯೋಗವು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿ ಮಾಡಿದ ಚರ್ಚೆ ನಡೆಸಿದರು.ಈ ಸಂದರ್ಭದಲ್ಲಿ
ಸಂಸದರುಗಳಾದ ಬಿ.ವೈ.ರಾಘವೇಂದ್ರ, ಕೋಟ ಶ್ರೀನಿವಾಸ ಪೂಜಾರಿ, ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರಾದ ಅರಗ ಜ್ಞಾನೇಂದ್ರ, ರಾಜೇಶ್ ನಾಯ್ಕ್ ಹಾಗೂ ಕ್ಯಾಂಪ್ಕೋ ಸಂಸ್ಥೆಯ ಪ್ರತಿನಿಧಿಗಳು ಮತ್ತು ಇತರ ಪ್ರಮುಖ ಅಡಿಕೆ ಸಹಕಾರಿ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ನಿಯಮಬದ್ಧವಾಗಿ ಮತ್ತು ಕಾನೂನುಬದ್ಧವಾಗಿ ಸಾಗಣೆಯಾಗುತ್ತಿರುವ ಅಡಿಕೆ ಸರಕು ವಾಹನಗಳ ಸುಗಮ ಸಂಚಾರಕ್ಕೆ ಎದುರಾಗುತ್ತಿರುವ ಅಡಚಣೆಗಳನ್ನು ನಿವಾರಿಸಲು ತಕ್ಷಣವೇ ಮಧ್ಯಪ್ರವೇಶಿಸಬೇಕೆಂದು ಮಹಾರಾಷ್ಟ್ರ ಸಿಎಂ ಅವರಲ್ಲಿ ನಿಯೋಗವು ಮನವಿ ಮಾಡಿತು. ಇದೇ ವೇಳೆ ಮಹಾರಾಷ್ಟ್ರ ಸಿಎಂ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಅಡಿಕೆಯು ಕರ್ನಾಟಕದ ಬಹುಪಾಲು ಪ್ರದೇಶಗಳ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಲಕ್ಷಾಂತರ ರೈತ ಕುಟುಂಬಗಳ ಜೀವನೋಪಾಯಕ್ಕೆ ಆಧಾರವಾಗಿದೆ. ಅಷ್ಟೇ ಅಲ್ಲದೆ, ಇದು ವರ್ತಕರು, ಕಾರ್ಮಿಕರು, ಸಾರಿಗೆದಾರರು ಮತ್ತು ಸಹಕಾರಿ ಸಂಸ್ಥೆಗಳ ಬೃಹತ್ ವ್ಯವಸ್ಥೆಯನ್ನೇ ಮುನ್ನಡೆಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಅವರ ಜೀವನೋಪಾಯವನ್ನು ರಕ್ಷಿಸುವುದು ಮತ್ತು ಅಂತರಾಜ್ಯ ಮುಕ್ತ ವ್ಯಾಪಾರಕ್ಕೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳುವುದು ಪ್ರಮುಖ ಆದ್ಯತೆಯಾಗಿದೆ ಎಂದು ಮನವರಿಕೆ ಮಾಡಲಾಯಿತು.







