ಆಲೆಟ್ಟಿ:ಐಸಿಎಆರ್– ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಬೆಂಗಳೂರು,ಕೃಷಿ ವಿಜ್ಞಾನ ಕೇಂದ್ರ ದಕ್ಷಿಣ ಕನ್ನಡ, ಜಿಲ್ಲಾ ಪಂಚಾಯತ್ ಮಂಗಳೂರು,ತಾಲೂಕು ಪಂಚಾಯತ್ ಸುಳ್ಯ,ಗ್ರಾಮ ಪಂಚಾಯತ್ ಆಲೆಟ್ಟಿ ಹಾಗೂ ಶ್ರೀ ಲಕ್ಷ್ಮೀ ಸಂಜೀವಿನಿ ಒಕ್ಕೂಟ ಆಲೆಟ್ಟಿ ಇವರ ಸಹಯೋಗದಲ್ಲಿ ಪರಿಶಿಷ್ಟ ಪಂಗಡ ಯೋಜನೆಯಡಿ ಪರಿಶಿಷ್ಟ ಪಂಗಡದ ರೈತರ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮ ಹಾಗೂ ಕೃಷಿ ಪರಿಕರಗಳ ವಿತರಣೆ ಕಾರ್ಯಕ್ರಮ
ರಮೇಶ್ ನಾಯ್ಕ್ ರಂಗತ್ತಮಲೆ ಅವರ ಮನೆಯಲ್ಲಿ ನಡೆಯಿತು.ಕಾರ್ಯಕ್ರಮದ ಕುರಿತು ಕೃಷಿ ವಿಜ್ಞಾನ ಕೇಂದ್ರ ದಕ್ಷಿಣ ಕನ್ನಡದ ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥರಾದ ಡಾ.ಟಿ.ಜೆ. ರಮೇಶ ಪ್ರಾಸ್ತಾವಿಕವಾಗಿ ಮಾತನಾಡಿದರು.ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಜಿಲ್ಲಾ ಯೋಜನಾ ನಿರ್ದೇಶಕರಾದ ಕೆ.ಇ.ಜಯರಾಮ್ ಉದ್ಘಾಟಿಸಿದರು. ಬೆಂಗಳೂರಿನ ಐಸಿಎಆರ್–ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಸಾಮಾಜಿಕ ವಿಜ್ಞಾನಗಳು ಮತ್ತು ತರಬೇತಿ ವಿಭಾಗದ ಪ್ರಧಾನ ವಿಜ್ಞಾನಿ ಡಾ.ವಿ. ಶಂಕರ್ ಮಾತನಾಡಿ, ಕೇಂದ್ರ ಸರ್ಕಾರದಿಂದ ದೊರೆಯುವ ಇಂತಹ ಸೌಲಭ್ಯಗಳನ್ನು ಕೃಷಿಕರು

ಸದುಪಯೋಗ ಮಾಡಿಕೊಂಡು ಕೃಷಿಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸಬೇಕು ಎಂದು ಹೇಳಿದರು. ಯಾವುದೇ ಯೋಜನೆ ಯಶಸ್ವಿಯಾಗಬೇಕಾದರೆ ಕೃಷಿಕರ ಸಕ್ರಿಯ ಪಾಲ್ಗೊಳ್ಳುವಿಕೆ ಅತ್ಯಂತ ಮುಖ್ಯವಾಗಿದೆ.ತರಬೇತಿ ಹಾಗೂ ಅಧ್ಯಯನ ಪ್ರವಾಸಗಳಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವ ಕೃಷಿಕರು ಅಗತ್ಯ ದಾಖಲೆಗಳನ್ನು ಸಲ್ಲಿಸುವ ಮೂಲಕ ಅವಕಾಶವನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಕೃಷಿ ವಿಜ್ಞಾನ ಕೇಂದ್ರದ ಡಾ.ರಶ್ಮಿ ತೋಟಗಾರಿಕಾ ಬೆಳೆಗಳ ನಿರ್ವಹಣೆ, ಬೆಳೆಗಳಿಗೆ ಬರುವ ರೋಗಗಳ ನಿಯಂತ್ರಣ,ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳುವ ವಿಧಾನಗಳು ಹಾಗೂ ಸಾವಯವ ಗೊಬ್ಬರಗಳ ಬಳಕೆಯಿಂದಾಗುವ ಪ್ರಯೋಜನಗಳ ಕುರಿತು ಸಮಗ್ರ ಮಾಹಿತಿ ನೀಡಿದರು.
ಜಿಲ್ಲಾ ಯೋಜನಾ ನಿರ್ದೇಶಕರಾದ ಕೆ.ಇ. ಜಯರಾಮ್ ಮಾತನಾಡಿ, ಕೃಷಿಕರಿಗೆ ಕೃಷಿ ಪರಿಕರಗಳನ್ನು ವಿತರಿಸುವುದರ ಜೊತೆಗೆ ಅವುಗಳ ಸಮರ್ಪಕ ಬಳಕೆಗೆ ಅಗತ್ಯವಾದ ತಾಂತ್ರಿಕ ತರಬೇತಿಗಳನ್ನು ನೀಡುವುದು ಅತ್ಯಂತ ಅವಶ್ಯಕವಾಗಿದೆ.ಈ ನಿಟ್ಟಿನಲ್ಲಿ ಹೆಚ್ಚಿನ ಆದ್ಯತೆ ನೀಡಬೇಕೆಂದು

ಹೇಳಿದರು.ಸಂಜೀವಿನಿ ಎನ್ಆರ್ಎಲ್ಎಂ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಶ್ವೇತಾ ಮಾತನಾಡಿ ವಿತರಿಸಲಾದ ಕೃಷಿ ಕಿಟ್ಗಳನ್ನು ವಿಜ್ಞಾನಿಗಳು ತಿಳಿಸಿದ ವಿಧಾನದಲ್ಲಿಯೇ ಬಳಸಬೇಕು ಎಂದು ಹೇಳಿದರು. ಆಲೆಟ್ಟಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಹಾಗೂ ಸಂಜೀವಿನಿ ಗ್ರಾಮ ಪಂಚಾಯತ್ ಒಕ್ಕೂಟದ ಅಧ್ಯಕ್ಷೆ ಸುಷ್ಮಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಮಗ್ರ ಕೃಷಿಕರಾದ ನೆಲ್ಲೂರು ಕೆಮ್ರಾಜೆಯ ವಿನೋದ್ ಮೂಡಗದ್ದೆ, ಐವರ್ನಾಡು ನವೀನ್ ಚಾತುಬಾಯಿ, ವಿಮಾಲಾಕ್ಷಿ ರಮೇಶ್, ಜಯಲಕ್ಷ್ಮೀ ದಯಾನಂದ, ಕಾರ್ಯದರ್ಶಿ ಸರೋಜಿನಿ, ಎಂ.ಬಿ.ಕೆ.ರೇಣುಕಾ, ಎಲ್ಸಿಆರ್ಪಿಗಳಾದ ಲೀಲಾವತಿ ಹಾಗೂ ಭಾರತಿ, ಪಶು ಸಖಿ ಸರೋಜಿನಿ,ಕೃಷಿ ಸಖಿಯರಾದ ಪುಷ್ಪಲತಾ ಮಡಪ್ಪಾಡಿ, ಪೂರ್ಣಿಮಾ ಅಜ್ಜಾವರ, ಲೋಚನಾ ಆಲೆಟ್ಟಿ, ವಸಂತಿ ಅರಂತೋಡು, ಅನಿತಾ ಮರ್ಕಂಜ ಹಾಗೂ ಮೋಹಿನಿ ವಿಶ್ವನಾಥ್ (ನಿಶಾ) ಸಂಪಾಜೆ ಸೇರಿದಂತೆ ಹಲವರು ಭಾಗವಹಿಸಿದ್ದರು.
ತರಬೇತಿ ಕಾರ್ಯಕ್ರಮದಲ್ಲಿ ಬಡ್ಡಡ್ಕ, ಆಲೆಟ್ಟಿ ಹಾಗೂ ಕೂರ್ನಡ್ಕ, ತಲೆಪಲ್ಲ, ರಂಗತ್ತಮಲೆ ಭಾಗದ ಕೃಷಿಕರು, ಮಹಿಳೆಯರು ಮತ್ತು ಯೋಜನೆಯ ಫಲಾನುಭವಿಗಳು ಭಾಗವಹಿಸಿದ್ದರು. ಸಂಪಾಜೆ ಗ್ರಾಮದ ಕೃಷಿ ಸಖಿ ಮೋಹಿನಿ ವಿಶ್ವನಾಥ್ (ನಿಶಾ) ಸ್ವಾಗತಿಸಿ,ವಂದಿಸಿ ಕಾರ್ಯಕ್ರಮ ನಿರೂಪಿಸಿದರು.









