ಗಣೇಶ್ ಮಾವಂಜಿ.
ಸುಳ್ಯ ತಾಲೂಕಿನ ಮೊದಲ ಹೈಸ್ಕೂಲ್ ಎಂದೇ ಹೆಸರುವಾಸಿಯಾದ ಸುಳ್ಯದ ಜೂನಿಯರ್ ಕಾಲೇಜಿನಲ್ಲಿ ಇತ್ತೀಚೆಗೆ ಹಿರಿಯ ವಿದ್ಯಾರ್ಥಿಗಳ ಸಮಾಗಮ ಎಂಬ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆರಂಭದಲ್ಲಿ ಹೈಸ್ಕೂಲ್ ವರೆಗಿನ ವಿದ್ಯಾಭ್ಯಾಸ ಇಲ್ಲಿ ನೀಡಲಾಗುತ್ತಿದ್ದರೆ ಬಳಿಕ ಪದವಿಪೂರ್ವ ವಿದ್ಯಾರ್ಜನೆಗೆ ಇಲ್ಲಿ ಅವಕಾಶ ಕಲ್ಪಿಸಲಾಗಿ ಸಾವಿರಾರು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ.
ಕಲಿತ ಶಾಲೆಯನ್ನು ಜ್ಞಾನ ದೇಗುಲ ಎಂದು ಸಂಬೋಧಿಸುತ್ತಾರೆ. ವಿದ್ಯೆಗೆ
ವಿನಯವೇ ಭೂಷಣ ಎಂದು ಒತ್ತಿ ಹೇಳಲಾಗುತ್ತದೆ. ಗುರುವಿಗೆ ಗುಲಾಮನಾದರೆ ಮಾತ್ರ ವಿದ್ಯೆ ಸಲೀಸಾಗಿ ತಲೆಗೆ ಹತ್ತುತ್ತದೆ ಎಂದೆಲ್ಲಾ ಹೇಳುತ್ತಾರೆ. ಆದರೆ ಕಲಿಕೆಯ ಹಂತದಲ್ಲಿ ಶಾಲೆ ಜ್ಞಾನ ದೇಗುಲ ಎಂದು ಅನಿಸುವುದೇ ಇಲ್ಲ. ಶಾಲೆಯಲ್ಲಿ ಕಾಪಿ ಬರೆಯದಿದ್ದರೆ ಬೆನ್ನಿಗೆರಡು ಬಿಗಿಯುವ ಮೇಷ್ಟ್ರು, ಪರೀಕ್ಷೆಯ ಉತ್ತರವನ್ನು ಎರಡೆರಡು ಸಲ ಬರೆಸುವ ಟೀಚರ್, ಕ್ಲಾಸಿಗೆ ಬಂಕ್ ಹೊಡೆದಾಗ ಅಪ್ಪನನ್ನು ಬರಹೇಳುವ ಪ್ರಿನ್ಸಿಪಾಲ್.., ಹೀಗೆ ಅಂಕುಡೊಂಕುಗಳನ್ನು ತಿದ್ದಿತೀಡುವ ಗುರುಗಳೆಲ್ಲರೂ ಮಕ್ಕಳಿಗೆ ವಿಲನ್ ಗಳಾಗಿಯೇ ಕಾಣುತ್ತಾರೆ.
ಆದರೆ ಕಲಿಕೆಯ ಹಂತ ದಾಟಿ ವೃತ್ತಿಜೀವನಕ್ಕೆ ಎಂಟ್ರಿ ಕೊಟ್ಟಾಗ ಮಾತ್ರ ಅದೇ ವಿಲನ್ ಗಳು ದೇವರಂತೆ ಭಾಸವಾಗುತ್ತಾರೆ. ತನ್ನ ದುಂಡಗಿನ ಅಕ್ಷರಗಳಿಗೆ ರಚ್ಚೆ ಹಿಡಿದು ಕಾಪಿ ಬರೆಸಿದ ಮೇಷ್ಟ್ರೇ ಕಾರಣ ಎಂಬುದು ಆಗ ಅರಿವಿಗೆ ಬರುತ್ತದೆ. ಆಗಾಗ ಕ್ಲಾಸಿಗೆ ಬಂಕ್ ಹೊಡೆದು ಪಿಕ್ಚರ್ ಟಾಕೀಸ್ ನಲ್ಲಿ ಹೀರೋ ಎಂಟ್ರಿ ಕೊಟ್ಟಾಗ ಹಾಕಿದ ಸಿಳ್ಳೆ ಯಾವ ಕಾರಣಕ್ಕೂ ನಿಜ ಜೀವನಕ್ಕೆ ಸಹಾಯ ಮಾಡುವುದಿಲ್ಲ ಎಂಬ ಅರಿವು ಆಗ ಗೊತ್ತಾಗಿಬಿಡುತ್ತದೆ.
ಆದರೆ ಕಲಿಕೆಯ ಹಂತದಲ್ಲಿ ಅದ್ಯಾವುದೂ ನೆನಪಿಗೆ ಬರುವುದೇ ಇಲ್ಲ. ಮೊದಲ ಬೆಂಚಿನ ಒಂದಿಬ್ಬರು ಮೇಷ್ಟ್ರ ಪಾಠಕ್ಕೆ ಸೀರಿಯಸ್ಸಾಗಿ ಕಿವಿಗೊಡುತ್ತಿದ್ದರೆ ಉಳಿದವರ ದೃಷ್ಟಿಯಲ್ಲಿ ಅವರು ಗಾಂಧಿಗಳು..! ಇನ್ನು ಕಲಿಸುವ ಶಿಕ್ಷಕರಿಗಂತೂ ಅವರಿಗೇ ಗೊತ್ತಿಲ್ಲದಂತೆ ಮಕ್ಕಳಿಂದ ವಿವಿಧ ನಾಮಧೇಯಗಳು. ಕಲಿಸುವಾಗ ಗುರುವೊಬ್ಬ ಬಳಸಿದ ಪದವನ್ನೇ ಮತ್ತೆ ಮತ್ತೆ ಬಳಸುತ್ತಿದ್ದರೆ ಅದೇ ಪದ ಅವರ ಅಡ್ಡ ಹೆಸರಾಗಿ ಪರಿವರ್ತನೆಗೊಳ್ಳುತ್ತಿತ್ತು. ಬಣ್ಣ ಕಪ್ಪಗಿದ್ದರೆ, ಹೆಚ್ಚು ಬಿಳಿಯಾಗಿದ್ದರೆ, ಮೂಗಿನೊಳಗೆ ಆಗಾಗ ಕೈ ಹಾಕುವ ಅಭ್ಯಾಸ ಹೊಂದಿದ್ದರೆ, ತಲೆಯಲ್ಲಿ ಕೂದಲು ಇಲ್ಲದಿದ್ದರೆ, ನೋಡಲು ಲಕ್ಷಣವಾಗಿದ್ದರೆ…, ಹೀಗೆ ಶಿಕ್ಷಕರ ಪ್ರತಿಯೊಂದು ಚರ್ಯೆಗೂ ಮಕ್ಕಳ ಕಡೆಯಿಂದ ಪುಕ್ಕಟೆಯಾಗಿ ಅಡ್ಡಹೆಸರೊಂದು ನಾಮಕರಣಗೊಳ್ಳುತ್ತಿತ್ತು.
ಈ ಅಡ್ಡ ಹೆಸರು ಕೇವಲ ಕಲಿಸುವ ಶಿಕ್ಷಕರಿಗೆ ಮಾತ್ರ ಸೀಮಿತವಾಗಿರಲಿಲ್ಲ. ಜೊತೆಯಲ್ಲಿ ಕಲಿಯುವ ಸ್ನೇಹಿತ, ಸ್ನೇಹಿತೆಯರಿಗೂ ಈ ಅಡ್ಡ ಹೆಸರಿನ ಬಳಕೆಯಾಗುತ್ತಿತ್ತು. ಕಲಿಕೆಯಲ್ಲಿ ಮುಂದಿರುವವರಿಗೆ, ಪರೀಕ್ಷೆಯಲ್ಲಿ ಸದಾ ಸೊನ್ನೆ ಸುತ್ತುವವರಿಗೆ, ಆಗಾಗ ಹುಡುಗಿಯರ ಬೆಂಚಿನತ್ತ ಕಣ್ಣು ಹಾಯಿಸುವವನಿಗೆ, ಓರೆಗಣ್ಣಿನಲ್ಲಿ ತನ್ನ ಒಲವಿನ ಹುಡುಗನತ್ತ ಓರೆ ನೋಟ ಬೀರುವವಳಿಗೆ…ಹೀಗೆ ಪ್ರತಿಯೊಬ್ಬರಿಗೂ ಚಿತ್ರ ವಿಚಿತ್ರ ನಾಮಧೇಯಗಳು. ಅದಕ್ಕಿಂತಲೂ ಹೆಚ್ಚಾಗಿ ಅವರವರ ಹೆಸರಿಗಿಂತಲೂ ಶಾಲೆಯ ಕಾರಿಡಾರಿನಲ್ಲಿ ಮೊಳಗುತ್ತಿದ್ದದ್ದು ಅವರವರ ತಂದೆಯ ಹೆಸರುಗಳೇ. ತಂದೆಯ ಹೆಸರನ್ನು ಅದು ಹೇಗೋ ಕಂಡುಹಿಡಿಯುತ್ತಿದ್ದ ಬೆಂಚ್ ಮೇಟ್ಗಳು ಬಳಿಕ ಕರೆಯುತ್ತಿದ್ದದ್ದು ಒಂದೋ ಅವರ ಅಡ್ಡ ಹೆಸರಿನಿಂದ ಅಥವಾ ಅವರ ಅಪ್ಪನ ಹೆಸರಿನಿಂದ.!
ಮೊನ್ನೆ ಜೂನಿಯರ್ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಮಾವೇಶಕ್ಕೆ ಹೋಗಿದ್ದಾಗ ಮನಸ್ಸಿನಾಳದಲ್ಲಿ ಹುದುಗಿಹೋಗಿದ್ದ ಈ ಹಳೆಯ ನೆನಪುಗಳೆಲ್ಲಾ ಮತ್ತೆ ಬಿಚ್ಚಿಕೊಂಡಿತ್ತು. ಮರೆತೇ ಹೋದಂತಿದ್ದ ಸಂಗತಿಗಳೆಲ್ಲವೂ ಶಾಲೆಯ ಬೆಂಚ್ನಲ್ಲಿ ಕೂತಾಗ, ಡೆಸ್ಕ್ನ ಬೆನ್ನು ಸವರಿದಾಗ, ಕರಿ ಬೋರ್ಡ್ನತ್ತ ದೃಷ್ಟಿ ಹರಿಸಿದಾಗ, ಹುಡುಗಿಯರು ಕುಳಿತುಕೊಳ್ಳುತ್ತಿದ್ದ ಸ್ಥಳದತ್ತ ಕಣ್ಣು ಹಾಯಿಸಿದಾಗ ಮತ್ತೆ ನೆನಪಾದವು.
ಜೊತೆಯಲ್ಲೇ ಬೆಂಚಿ ಬಿಸಿ ಮಾಡಿ ಸಾಥ್ ಕೊಡುತ್ತಿದ್ದ ಗೆಳೆಯ ಗೆಳತಿಯರು ಹಲವು ವರ್ಷಗಳ ಬಳಿಕ ಮಾತಿಗೆ ಸಿಕ್ಕಾಗ ಮನಸ್ಸಿಗೆ ಹೇಳಿಕೊಳ್ಳಲಾರದಷ್ಟು ಖುಷಿಯಾಯಿತು. ಸದಾ ಅಡಿಬಗ್ಗಿಕೊಂಡೇ ಶಾಲೆಗೆ ಬರುತ್ತಿದ್ದ ಕೆಲವರು ಈಗ ಕತ್ತೆತ್ತಿ ಗಂಭೀರವಾಗಿ ಹರಟುವಷ್ಟು ಪ್ರೌಢಿಮೆ ಹೊಂದಿದ್ದರು. ಸದಾ ಏನಾದರೊಂದು ಕೀಟಲೆ ಮಾಡಿ ಮೇಷ್ಟ್ರುಗಳಿಂದ ಬೈಸಿಕೊಳ್ಳುತ್ತಿದ್ದ ಕೆಲವರು ಇದೀಗ ಜೀವನದಲ್ಲಿ ಯಶಸ್ಸು ಕಂಡಿದ್ದರು. ತಲೆತುಂಬಾ ಕೂದಲು ಹೊಂದಿ ಸದಾ ಕ್ರಾಪ್ ಸರಿಮಾಡಿಕೊಳ್ಳುತ್ತಿದ್ದ ಸ್ಟೈಲ್ ಕಿಂಗ್ ಗಳು ಈಗ ಬೊಕ್ಕ ತಲೆ ಹೊಂದಿ ಕಾಲದ ಮಹಿಮೆಗೆ ಶರಣಾಗಿ ಹೋಗಿದ್ದರು. ಸ್ಟೈಲಿಶ್ ಐಕಾನ್ ಆಗಿ ಕಾಲೇಜಿನಲ್ಲಿ ಕಂಗೊಳಿಸುತ್ತಿದ್ದ ಕನ್ಯಾಮಣಿಗಳ ಮುಖದಲ್ಲಿ ಈಗ ವಯಸ್ಸಿನ ನೆರಿಗೆಗಳು ಲಗ್ಗೆ ಇಟ್ಟದ್ದು ಸ್ಪಷ್ಟವಾಗಿ ಕಂಡುಬರುತ್ತಿತ್ತು.
ಅದೆಷ್ಟೋ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ನೆರವಾದ ಜೂನಿಯರ್ ಕಾಲೇಜ್ ಗತವೈಭವಕ್ಕೆ ಸಾಕ್ಷಿ ಎಂಬಂತೆ ಈಗಲೂ ಮೂಲ ಸ್ವರೂಪ ಹೊಂದಿರುವುದು ಸುಳ್ಳಲ್ಲ. ಕಾಲೇಜಿನ ಹೊರನೋಟ ಕಿಂಚಿತ್ತೂ ಬದಲಾವಣೆ ಹೊಂದಿಲ್ಲ. ಹಾಗಿದ್ದರೂ ಹೈಸ್ಕೂಲಿನ ಒಳಾಂಗಣದ ಒಂದು ಪಾರ್ಶ್ವದಲ್ಲಿ ಹೊಸ ಕಟ್ಟಡವೊಂದು ಎದ್ದು ನಿಂತಿದೆ. ಕಾಲೇಜಿನ ಮತ್ತೊಂದು ಭಾಗದಲ್ಲಿ ಹೊಸ ಕಟ್ಟಡಗಳು ತಲೆ ಎತ್ತಿವೆಯಾದರೂ ಹಿಂದಿನ ನೋಟಕ್ಕೆ ಎಲ್ಲೂ ಧಕ್ಕೆ ಆಗಿಲ್ಲ.
ಇದು ಸುಳ್ಯದ ಜೂನಿಯರ್ ಕಾಲೇಜೊಂದರ ಕಥೆಯಲ್ಲ. ಶಾಲೆಯೊಂದರಲ್ಲಿ ಅದೆಷ್ಟೋ ವಿದ್ಯಾರ್ಥಿಗಳು ವಿದ್ಯಾಭ್ಯಾಸ ನಡೆಸಿ ಹೊರ ಹೋಗುತ್ತಾರೆ. ಅಷ್ಟೇ ಸಂಖ್ಯೆಯ ಮಕ್ಕಳು ಅದೇ ಶಾಲೆಗೆ ಪ್ರವೇಶಾತಿ ಪಡೆದುಕೊಳ್ಳುತ್ತಾರೆ. ಕಲಿಕೆಯ ಹಂತದಲ್ಲಿ ಅಲ್ಲಿ ನಡೆಸುವ ಚಟುವಟಿಕೆಗಳು ಮುದ ನೀಡಲಾರವು. ಆದರೆ ಕಲಿತು ಹೊರಬಂದು ವೃತ್ತಿಜೀವನಕ್ಕೆ ಅಂಟಿಕೊಂಡಾಗ ಶಾಲಾ ಕಾಲೇಜಿನಲ್ಲಿ ಕಳೆದ ಅಮೂಲ್ಯ ಕ್ಷಣಗಳ ಶ್ರೇಷ್ಠತೆಯ ಅರಿವಾಗುತ್ತದೆ. ಹಿಂದಿನ ನೆನಪುಗಳನ್ನು ಕೆದಕಿದಷ್ಟೂ ಅದು ಮತ್ತೆ ಮತ್ತೆ ಮುದ ನೀಡುತ್ತದೆ. ನಿಜವಾಗಿಯೂ ಅನುಭವವು ಸವಿಯಲ್ಲ., ಅನುಭವದ ನೆನಪೇ ಸವಿ..ಏನಂತೀರಿ?

(ಗಣೇಶ್ ಮಾವಂಜಿ ಹಿರಿಯ ಪತ್ರಕರ್ತರು, ಅಂಕಣಕಾರರು)















