ಸುಳ್ಯ: ಆಧುನಿಕ ಯುಗದಲ್ಲಿನ ಹಲವು ಆತಂಕದ ನಡುವೆಯೂ ವೇದಗಳು ಬದುಕಿಗೆ ಭರವಸೆ ಮೂಡಿಸುತ್ತದೆ. ಅಂತರಂಗದಲ್ಲಿ ವೇದಗಳು ಗಟ್ಟಿಯಾದರೆ ಎಲ್ಲವನ್ನೂ ಗಳಿಸಿಕೊಳ್ಳಬಹುದು ಎಂದು ಖ್ಯಾತ ವಾಗ್ಮಿ ಹಾಗೂ ಸಂಸ್ಕೃತಿ ಚಿಂತಕರಾದ ಡಾ.ಆರತಿ ವಿ.ಬಿ.ಬೆಂಗಳೂರು ಹೇಳಿದ್ದಾರೆ. ಸುಳ್ಯ ಹಳೆಗೇಟು ವಿದ್ಯಾನಗರದ ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಆಶ್ರಯದಲ್ಲಿ
ಸುಳ್ಯ ಬಸ್ ನಿಲ್ದಾಣದ ಬಳಿಯ ಶಿವಕೃಪಾ ಕಲಾ ಮಂದಿರದಲ್ಲಿ ಆರಂಭಗೊಂಡ 26ನೇ ವರ್ಷದ ಅಂತಾರಾಜ್ಯ ಮಟ್ಟದ ಉಚಿತ ವೇದ- ಯೋಗ-ಕಲಾ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.ಕೇಶವ ಕೃಪಾ ಪ್ರತಿಷ್ಠಾನವು ವೇದ, ಸಂಸ್ಕಾರ, ಪ್ರೀತಿ ನೀಡಿ ಮಕ್ಕಳನ್ನು ಅದ್ಭುತ ವ್ಯಕ್ತಿಗಳಾಗಿ ಮಾಡುವ ಕೆಲಸ ಮಾಡುತಿದೆ, ಇದೊಂದು ಜ್ಞಾನ ಯಜ್ಞ ಎಂದು ಬಣ್ಣಿಸಿದ ಅವರು ನಮ್ಮ ಸಂಸ್ಕೃತಿಯನ್ನು ಹೆಮ್ಮೆಯಿಂದ ಆಚರಿಸಿಕೊಳ್ಳಬೇಕು. ನಮ್ಮತನವನ್ನು ಬಿಡದೆ

ಭಾರತೀಯರಾಗಿ ಬದುಕಬೇಕು.ಭಾರತೀಯ ವಿದ್ಯೆಗಳಿಗೆ, ಯೋಗ, ವೇದ ಜ್ಞಾನಕ್ಕೆ ಜಗತ್ತಿನಾದ್ಯಂತ ಅದ್ಭುತ ಮೌಲ್ಯವಿದೆ. ಈ ವೇದವನ್ನು ಕಲಿಯಲು ದೊರೆತಿರುವ ಅಪೂರ್ವ ಅವಕಾಶವನ್ನು ಬಳಸಿಕೊಳ್ಳಬೇಕು, ಮಕ್ಕಳು
ದೇಶ, ಸಂಸ್ಕೃತಿ, ಧರ್ಮದ ಬಗ್ಗೆ ಸ್ವಾಭಿಮಾನ ಬೆಳೆಸಿಕೊಳ್ಳಬೇಕು, ಸ್ವಾಭಿಮಾನದಿಂದ ಬದುಕುವ ಆತ್ಮಬಲವನ್ನು ಸಿದ್ದಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹರೀಶ್ ಇಂಜಾಡಿ ಮಾತನಾಡಿ’ ನಾಗರಾಜ ಭಟ್ ನೇತೃತ್ವದ ಕೇಶವ ಕೃಪಾದ ವತಿಯಿಂದ ನಡೆಯುವ ವೇದ ಶಿಬಿರವು ಅರ್ಥ ಪೂರ್ಣ ಮತ್ತು ಪವಿತ್ರವಾದ ಕಾರ್ಯಕ್ರಮ ಎಂದು ಹೇಳಿದರು. ನಮ್ಮ ಸಂಪ್ರದಾಯ, ಆಚಾರ, ವಿಚಾರಗಳು ನಮ್ಮ ಧರ್ಮ ಮತ್ತೊಂದು ಸಂಸ್ಕೃತಿಯ ಭಾಗ. ಶಿಬಿರಗಳ ಮೂಲಕ ಮಕ್ಕಳಲ್ಲಿ ಜ್ಞಾನ, ಸಂಸ್ಕಾರ, ತುಂಬುವ ಕೆಲಸ ಆಗುತಿದೆ. ಈ ಶಿಬಿರದಲ್ಲಿ ವೇದ ಕಲಿತ ವಿದ್ಯಾರ್ಥಿಗಳು ಪ್ರತಿಯೊಬ್ಬರೂ ಮುಂದಿನ ದಿನಗಳಲ್ಲಿ ಸಮಾಜಕ್ಕೆ ಮಾರ್ಗದರ್ಶಕರಾಗಲಿ ಎಂದು ಹಾರೈಸಿದರು.

ಶಿಬಿರವನ್ನು ನಯನಕೃಷ್ಣ ಭಟ್ ಪೆರುಂಬಾರು ಹಾಗೂ ಸೌಮ್ಯಾ ನಯನಕೃಷ್ಣ ದಂಪತಿಗಳು ಉದ್ಘಾಟಿಸಿದರು.ಮುಖ್ಯ ಅಭ್ಯಾಗತರಾಗಿ ಬೆಂಗಳೂರಿನ ಸಾಫ್ಟ್ವೇರ್ ಉದ್ಯೋಗಿ ಮತ್ತು ಕೇಶವಕೃಪಾ ಹಿರಿಯ ವಿದ್ಯಾರ್ಥಿ ಕಿರಣ ಎ.ಎಸ್. ಅರ್ತ್ಯಡ್ಕ ಭಾಗವಹಿಸಿದ್ದರು. ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಗೌರವಾಧ್ಯಕ್ಷ ಗೋಪಾಲಕೃಷ್ಣ ಭಟ್ ವಗೆನಾಡು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ
ಅಧ್ಯಕ್ಷ ಪುರೋಹಿತ ನಾಗರಾಜ ಭಟ್ ಸ್ವಾಗತಿಸಿ, ಶ್ರೀದೇವಿ ನಾಗರಾಜ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, ಶಿಬಿರದ ಸಂಚಾಲಕ ಅಭಿರಾಮ್ ಭಟ್ ವಂದಿಸಿದರು, ಉದಯಭಾಸ್ಕರ್ ಮತ್ತು ಯಶಸ್ವಿ ಪಿ.ಭಟ್ ಕಾರ್ಯಕ್ರಮ ನಿರೂಪಿಸಿದರು.
ಸುಮಾರು 1 ತಿಂಗಳ ಪರ್ಯಂತ ನಡೆಯುವ ಶಿಬಿರದಲ್ಲಿ ವೇದ, ಯೋಗ ಅಧ್ಯಯನದ ಜೊತೆಗೆ ವಿವಿಧ

ಕಲಾ ಪ್ರಕಾರಗಳಾದ ಯಕ್ಷಗಾನ, ಕಂಸಾಳೆ, ಜಾದೂ, ಭಜನೆ, ಸಂಗೀತ, ಪೇಪರ್ ಕಟ್ಟಿಂಗ್, ಮಿಮಿಕ್ರಿ, ಈಜು ತರಬೇತಿ ಮೊದಲಾದ ಸೃಜನಶೀಲ ಕಲೆಗಳನ್ನು ಶಿಬಿರಾರ್ಥಿಗಳಿಗೆ ಕಲಿಸಲಾಗುತ್ತದೆ. ಶಿಬಿರದಲ್ಲಿ ರಾಜ್ಯ ಮತ್ತು ಹೊರರಾಜ್ಯಗಳಿಂದ ಒಟ್ಟು 220 ಮಂದಿ ಶಿಬಿರಾರ್ಥಿಗಳು ಭಾಗವಹಿಸುತ್ತಿದ್ದಾರೆ. ಯಜುರ್ವೇದ ವಿಭಾಗದಲ್ಲಿ 5 ತರಗತಿಗಳಿದ್ದು, ಸಂಧ್ಯಾವಂದನೆಯಿಂದ ಮೊದಲ್ಗೊಂಡು ಸೂಕ್ತಗಳು, ರುದ್ರ ಚಮಕ ಶ್ರೀ ಶಿವರಾಧನೆಯ ಪ್ರಾಕ್ಟಿಕಲ್ ಅಲ್ಲದೆ ಅಗ್ನಿಮುಖ ಪ್ರಯೋಗ, ಸಪ್ತಶತೀ ದುರ್ಗಾಪೂಜೆ ಪಾಠಗಳು ನಡೆಯುತ್ತವೆ.
















