ಸುಳ್ಯ:ಕಳೆದ ಒಂದು ವರ್ಷದಲ್ಲಿ ಒಮ್ಮೆಯೂ ಮೆಸ್ಕಾಂ ಸಲಹಾ ಸಮಿತಿ ಸಭೆ ಕರೆಯಲಿಲ್ಲ, ಜನಸಂಪರ್ಕ ಸಭೆಯ ಮಾಹಿತಿಯನ್ನು ಮೆಸ್ಕಾಂ ಸಲಹಾ ಸಮಿತಿ ಸದಸ್ಯರಿಗೆ ನೀಡಿಲ್ಲ ಎಂದು ಆರೋಪಿಸಿ ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ನೇತೃತ್ವದಲ್ಲಿ ಮೆಸ್ಕಾಂ ಸಲಹಾ ಸಮಿತಿ ಸದಸ್ಯರು ಧರಣಿ ನಡೆಸಿದ ಕಾರಣ ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಏ.28 ರಂದು ಹಮ್ಮಿಕೊಂಡಿದ್ದ ಸುಳ್ಯ ಮತ್ತು ಸುಬ್ರಹ್ಮಣ್ಯ ಉಪವಿಭಾಗ ಮಟ್ಟದ
ಜನಸಂಪರ್ಕ ಸಭೆ ರದ್ದುಗೊಂಡಿದೆ. ಮೆಸ್ಕಾಂ ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ್ ಅವರ ಅಧ್ಯಕ್ಷತೆಯಲ್ಲಿ ಸಭೆ ಆರಂಭವಾಗುತ್ತಿದ್ದಂತೆ ಕಳೆದ ಒಂದು ವರ್ಷದಿಂದ ಮೆಸ್ಕಾಂ ಸಲಹಾ ಸಮಿತಿ ಸಭೆ ಕರೆದಿಲ್ಲ, ಜನಸಂಪರ್ಕ ಸಭೆಗೆ ಸಲಹಾ ಸಮಿತಿ ಸದಸ್ಯರಿಗೆ ಮಾಹಿತಿ ನೀಡಿಲ್ಲ ಎಂದು ಸಭೆಯ ಮುಂಭಾಗದಲ್ಲಿ ನೆಲದಲ್ಲಿ ಕುಳಿತು ಧರಣಿ ನಡೆಸಿದರು. ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ,ಮೆಸ್ಕಾಂ ಸಲಹಾ ಸಮಿತಿ ಸದಸ್ಯರು ಹಾಗೂ

ಪ್ರಮುಖರಾದ ಧರ್ಮಪಾಲ ಕೊಯಿಂಗಾಜೆ,ರಾಧಾಕೃಷ್ಣ ಪರಿವಾರಕಾನ, ದಿನೇಶ್ ಸರಸ್ವತಿ ಮಹಲ್, ಸತ್ಯಕುಮಾರ್ ಆಡಿಂಜ, ಆರ್.ಬಿ.ಬಶೀರ್, ಜುನೈದ್ ಅಡ್ಕಾರ್ ಮತ್ತಿತರರು ಸಭೆಯ ಮುಂಭಾಗ ಕುಳಿತು ಧರಣಿ ನಡೆಸಿದರು. ಬಳಿಕ ಭಾರೀ ಗೊಂದಲ ಏರ್ಪಟ್ಟಿತು. ಮೇ.12ರೊಳಗೆ ಮೆಸ್ಕಾಂ ಸಲಹಾ ಸಮಿತಿ ಸಭೆ ಕರೆದು ಅದರ ವರದಿ ಸಲ್ಲಿಸಬೇಕು, ಮೇ ತಿಂಗಳ ಕೊನೆಯ ವಾರದಲ್ಲಿ ಮತ್ತೆ ಜನ ಸಂಪರ್ಕ ನಡೆಯಬೇಕು ಎಂದು ಮೆಸ್ಕಾಂ ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ್ ಸೂಚಿಸಿದರು. ಬಳಿಕ ಸಭೆಯನ್ನು ಮುಂದೂಡಲಾಯಿತು.
ಪುತ್ತೂರು ವಿಭಾಗ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ, ಸುಬ್ರಹ್ಮಣ್ಯ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸತೀಶ್, ಸುಳ್ಯ ಸಹಾಯಕ ಇಂಜಿನಿಯರ್ ಸುಪ್ರೀತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ವಿನಯಕುಮಾರ್ ಕಂದಡ್ಕ, ಕೆ.ಗೋಕುಲ್ದಾಸ್, ಡಿ.ಎಂ.ಶಾರೀಖ್, ಜಯಪ್ರಕಾಶ್ ಬೈತ್ತಡ್ಕ,ಜಿ.ಕೆ.ಹಮೀದ್, ಮುರಳೀಧರ, ಹೇಮಂತ್ ಕಂದಡ್ಕ, ಬಾಲಕೃಷ್ಣ ರೈ, ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.













