*ಗಣೇಶ್ ಮಾವಂಜಿ.
ಸಹಜವಾಗಿ ಅಪರಿಚಿತ ಜಾಗಕ್ಕೆ ಹೋದಾಗ ಪರಿಚಿತ ಜಾಗದಲ್ಲಿ ವ್ಯವಹರಿಸಿದಷ್ಟು ಸಲೀಸಾಗಿ ನಮ್ಮ ಮನಸ್ಸು ಹೊಂದಿಕೊಳ್ಳುವುದಿಲ್ಲ. ಎಷ್ಟೇ ಒರಟಾಗಿದ್ದ ವ್ಯಕ್ತಿಗಳೂ ಕೂಡಾ ಅಪರಿಚಿತ ಸ್ಥಳದಲ್ಲಿ ಒಂದೆರಡು ಕ್ಷಣ ತಮ್ಮ ಮೂಲ ಗುಣದಿಂದ ತುಸು ಭಿನ್ನವಾಗಿ ವರ್ತಿಸುತ್ತಾರೆ. ಇದೆಲ್ಲವೂ ಮಾಮೂಲಿ.., ಇಲ್ಲಿನವರೆಲ್ಲರೂ ನಮ್ಮಂತೆಯೇ ಸಾದಾಸೀದಾ ವ್ಯಕ್ತಿಗಳೇ ಎಂದು ನಮ್ಮ ಮನಸ್ಸು ಅಲ್ಲಿನ ಪರಿಸರವನ್ನು ಓದಿದೆ ಎಂದಾದರೆ ಆಗ ನಮ್ಮ ಮೊದಲಿನ ವ್ಯಕ್ತಿತ್ವವೇ ಅಲ್ಲಿ
ಬಿಂಬಿತವಾಗುತ್ತದೆ.ಉದಾಹರಣೆಗೆ ಹೇಳುವುದಾದರೆ ಮನೆಯಲ್ಲಿ ಸದಾ ತುಂಟಾಟವಾಡುವ ಮಗು ಯಾರಾದರೂ ಅಪರಿಚಿತರು ಮನೆಗೆ ಬಂದಾಗ ಗುರುತು ಪರಿಚಯ ಇದ್ದವರಲ್ಲಿ ಮಾತಾಡುವಷ್ಟು ಬೇಗ ಮಾತಾಡುವುದಿಲ್ಲ. ಒಂದೋ ಅಳು ಮುಖ ಹೊತ್ತುಕೊಂಡು ಆ ಮಗು ಅಲ್ಲಿಂದ ಮೆಲ್ಲನೆ ಕಾಲ್ಕಿತ್ತು ಒಳಗೆ ಓಡಿ ಹೋಗಬಹುದು., ಇಲ್ಲದಿದ್ದರೆ ಬಂದವರನ್ನೇ ಎವೆಯಿಕ್ಕದೆ ನೋಡಿ ಬಳಿಕ ಬಂದವರು ಏನಾದರೂ ಮಾತಾಡಿಸಿದರೆ ಅಳೆದು ಸುರಿದು ಮಾತನಾಡಲು ಮನಸ್ಸು ಮಾಡಬಹುದು. ಸ್ವಲ್ಪ ಹೊತ್ತು ಕಳೆದ ಬಳಿಕ ಆ ಮಗು ಕೂಡಾ ಇವರೊಂದಿಗೆ ಮಾತನಾಡಬಹುದು ಎಂದು ಮನಸ್ಸಿನಲ್ಲೇ ಚರ್ಚಿಸಿಕೊಂಡ ಬಳಿಕ ಮಾತ್ರ ಕೇಳಿದ ಪ್ರಶ್ನೆಗೆ ಉತ್ತರ ಕೊಡಲು ಆರಂಭಿಸುತ್ತದೆ.
‘ಅವನು ಹಾಗೆಲ್ಲಾ ಮಾತಾಡುವುದಿಲ್ಲ. ಸ್ವಲ್ಪ ಹೊತ್ತಾಗಲಿ ನೋಡಿ.., ಮತ್ತೆ ಅವನು ನಿಮ್ಮನ್ನು ಬಿಡುವುದೇ ಇಲ್ಲ’, ಎಂದು ಮಗುವಿನ ಹೆತ್ತವರು ತಮ್ಮ ಮಗುವಿನ ತುಂಟತನದ ಬಗ್ಗೆ ವರದಿ ಒಪ್ಪಿಸುತ್ತಾರೆ. ಅದೇ ಮಗು ನೆಂಟರ ಮನೆಗೋ, ಬಂಧುಗಳ ಮನೆಗೋ ಹೋದಾಗಲೂ ಕೂಡಾ ಇನ್ನೊಬ್ಬರೊಂದಿಗೆ ಮಾತನಾಡುವಾಗ ತುಸು ಸಮಯ ತೆಗೆದುಕೊಳ್ಳುತ್ತದೆ. ತನ್ನದೇ ವಯೋಮಾನದ ಮಕ್ಕಳೊಂದಿಗೆ ಸ್ವಲ್ಪ ಬೇಗ ಹೊಂದಿಕೊಳ್ಳುತ್ತದೆ. ತನಗಿಂತ ದೊಡ್ಡವರೊಂದಿಗೆ ವ್ಯವಹರಿಸಲು ತುಸು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.
ಮನಸ್ಸು ಅಲ್ಲಲ್ಲಿನ ಪರಿಸ್ಥಿತಿಗೆ ಹೊಂದಿಕೊಳ್ಳಲು ತುಸು ಸಮಯ ತೆಗೆದುಕೊಳ್ಳುತ್ತದೆ ಎಂಬುದು ಮಾತ್ರ ಸತ್ಯ. ಇದಕ್ಕೆ ದೊಡ್ಡವರು, ಚಿಕ್ಕವರು ಎಂಬ ಭೇದಭಾವ ಇರಲಾರದು. ಆದರೆ ಪರಿಸ್ಥಿತಿಗೆ ಹೊಂದಿಕೊಳ್ಳಲು ತೆಗೆದುಕೊಳ್ಳುವ ಸಮಯದ ಅವಧಿಯಲ್ಲಿ ಮಾತ್ರ ವ್ಯಕ್ತಿ-ವ್ಯಕ್ತಿಗಳ ನಡುವೆ ತುಸು ವ್ಯತ್ಯಾಸ ಕಂಡು ಬರಬಹುದು.
ಪರಿಸ್ಥಿತಿ ಹೀಗಿದ್ದರೂ ಹುಟ್ಟುಗುಣ ಘಟ್ಟ ಹತ್ತಿದರೂ ಹೋಗದು ಎಂಬಂತೆ ಬಾಲ್ಯದಲ್ಲಿ ಕಲಿತಂತಹ ಕೆಲವೊಂದು ಗುಣಗಳು ಬಾಲ್ಯ ದಾಟಿ ಯೌವನಾವಸ್ಥೆಗೆ ತಲುಪಿದ ಬಳಿಕವೂ ಮುಂದುವರಿಯಬಹುದು. ಆದರೆ ಹುಟ್ಟುಗುಣದ ಅನಾವರಣವೂ ಕೂಡಾ ಪರಿಸ್ಥಿತಿ ಸರಿ ಇಲ್ಲ ಎಂಬ ಕಡೆಗಳಲ್ಲಿ ಖಂಡಿತವಾಗಿಯೂ ಬಿಚ್ಚಿಕೊಳ್ಳಲಾರದು.
ಕ್ಲಾಸಿನಲ್ಲಿ ಸದಾ ನಿದ್ದೆಗೆ ಜಾರುವ ವಿದ್ಯಾರ್ಥಿ ಹೊಸ ಶಿಕ್ಷಕರು ಬಂದು ತರಗತಿ ತೆಗೆದುಕೊಂಡಾಗ ಖಂಡಿತವಾಗಿಯೂ ನಿದ್ದೆ ಮಾಡಲಾರ.ಅದರಲ್ಲೂ ಹೊಸ ಮೇಷ್ಟ್ರು ಹಳೆಯ ಮೇಷ್ಟ್ರಿಗಿಂತ ಖಡಕ್ ಆಗಿದ್ದಾರೆ ಎಂದರೆ ಮಾತ್ರ ಎವೆಯಿಕ್ಕದೆ ಅವರ ಮಾತುಗಳಿಗೆ ಕಿವಿಯಾಗುವ ಮನಸ್ಸು ಬರುತ್ತದೆ. ಬರಬರುತ್ತಾ ಶಿಕ್ಷಕರ ಮಾತುಗಳು ಮಾಮೂಲಿ ಎಂದರಿವಾದಾಗ ಮಾತ್ರ ಮತ್ತೆ ಆ ವಿದ್ಯಾರ್ಥಿ ಕ್ಲಾಸಿನಲ್ಲಿ ನಿದ್ದೆಗೆ ಶರಣಾಗುತ್ತಾನೆ. ಹಾಗಿದ್ದರೆ ಆ ಹುಟ್ಟುಗುಣ ಹೊಸ ಶಿಕ್ಷಕರು ಬಂದಾಗ ಎಲ್ಲಿಗೆ ಓಡಿರುತ್ತದೆ.? ಪರಿಸ್ಥಿತಿಯನ್ನು ಅವಲೋಕಿಸಿದ ಮೇಲಷ್ಟೇ ಹುಟ್ಟುಗುಣದ ಬಾಲವೂ ಬಿಚ್ಚತೊಡಗುತ್ತದೆ ಎಂಬುದು ಈ ಉದಾಹರಣೆಯಿಂದ ಸ್ಪಷ್ಟವಾಗಬಹುದು.
ಹಾಗಿದ್ದರೂ ಆಯಾ ವ್ಯಕ್ತಿಗಳ ಗುಣಾವಗುಣಗಳು ಆಯಾ ಪರಿಸ್ಥಿತಿಯನ್ನು ಹೊಂದಿಕೊಂಡಿರುತ್ತದೆ ಎಂಬುದು ಮಾತ್ರ ಅಷ್ಟೇ ಸತ್ಯ. ಬಾಲ್ಯದಲ್ಲಿ ಕಷ್ಟವನ್ನೇ ಕಂಡ ವ್ಯಕ್ತಿ ಪ್ರೌಢಾವಸ್ಥೆಗೆ ತಲುಪಿದಾಗ ಅದೇನೇ ಕಷ್ಟ ಬಂದೊದಗಿದರೂ ಅದನ್ನು ಎದುರಿಸುವ ಎದೆಗಾರಿಕೆ ಹೊಂದಿರುತ್ತಾನೆ. ಆದರೆ ಕಷ್ಟ ಏನೆಂದು ಅರಿಯದ ವ್ಯಕ್ತಿ, ಬಾಲ್ಯದಲ್ಲಿ ಸುಖದ ಸುಪ್ಪತ್ತಿಗೆಯಲ್ಲೇ ತೇಲಾಡಿದ ವ್ಯಕ್ತಿಗೆ ಬದುಕಿನಲ್ಲಿ ಚಿಕ್ಕ ಕಷ್ಟ ಎದುರಾದರೂ ಅದನ್ನು ಎದುರಿಸಲಾಗದೆ ಎದೆಗುಂದುತ್ತಾನೆ. ಸದಾ ತಂದೆಯ ರೇಗಾಟದಲ್ಲೇ ಬಾಲ್ಯ ಕಳೆದವನಿಗೆ ಉದ್ಯೋಗ ದೊರೆತಾಗ ಬಾಸ್ ನ ಕಿರಿಕಿರಿ ಅಷ್ಟೇನೂ ತೊಂದರೆ ಕೊಡಲಾರದು. ಚಿಕ್ಕಂದಿನಲ್ಲಿ ಅಮ್ಮನ ಮಾತಿಗೆ ಎದುರಾಡದೆ ಅಡುಗೆ ಕೆಲಸದಲ್ಲೋ ಅಥವಾ ಇನ್ಯಾವುದೇ ಕಷ್ಟದಲ್ಲಿ ಕೈ ಜೋಡಿಸಿದ ಮಗಳಿಗೆ ಗಂಡನ ಮನೆಯಲ್ಲಿ ಅತ್ತೆಯ ಆಜ್ಞಾಪನೆ, ಮಾವನ ಕಿವಿಮಾತು, ಗಂಡನ ಆರೈಕೆ ಎಂದಿಗೂ ಕಷ್ಟ ಎನಿಸಲಾರದು. ಇಲ್ಲೆಲ್ಲಾ ಬೆಳವಣಿಗೆಯ ಹಂತದಲ್ಲಿ ರೂಢಿಸಿಕೊಂಡ ಚರ್ಯೆಗಳು ಕೈಹಿಡಿದು ಮುನ್ನಡೆಸುವ ಕೆಲಸ ಮಾಡುತ್ತದೆ.
ಪ್ರಾಥಮಿಕ ಶಾಲೆಯಿಂದ ತೊಡಗಿ ಪ್ರೌಢಶಾಲೆ, ಪಿಯುಸಿ, ಪದವಿ ತರಗತಿಯ ವಿದ್ಯಾಭ್ಯಾಸದವರೆಗೆ ಸಾಗಿ ಹೋಗುವಾಗ ಹಲವಾರು ವಿದ್ಯಾರ್ಥಿಗಳ ಸಂಪರ್ಕ ಹೊಂದುವಂತಾಗುತ್ತದೆ. ಅದರಲ್ಲೂ ತಂದೆ ತಾಯಿ ಕೇಂದ್ರ ಸರಕಾರ ಅಥವಾ ರಾಜ್ಯ ಸರಕಾರದ ಉದ್ಯೋಗಿಗಳಾಗಿದ್ದರಂತೂ ಅವರ ಮಕ್ಕಳು ಪದವಿ ತರಗತಿಯ ವಿದ್ಯಾಭ್ಯಾಸ ಮುಗಿಸುವ ವೇಳೆಗೆ ಹಲವಾರು ಜಿಲ್ಲೆ, ರಾಜ್ಯಗಳ ಶೈಕ್ಷಣಿಕ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡುವುದು ಅನಿವಾರ್ಯ ಎಂದಾಗುತ್ತದೆ. ಹೀಗಾದಾಗ ಮಕ್ಕಳು ಜೊತೆಯಾಗಿ ಕಲಿಯುವ ಮಕ್ಕಳಲ್ಲದೆ ಬೇರೆಬೇರೆ ಶಿಕ್ಷಕರ ಸಂಪರ್ಕ ಕೂಡಾ ಹೊಂದುವಂತಾಗುತ್ತದೆ. ಹೀಗೆ ಬೇರೆ ಬೇರೆ ಪರಿಸರದಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳು ತೆಗೆದುಕೊಳ್ಳುವ ನಿರ್ಧಾರಗಳು, ಕೆಲವೇ ಕೆಲವು ಶಾಲೆ ಅಥವಾ ವ್ಯಕ್ತಿಗಳೊಂದಿಗೆ ಮಾತ್ರ ಸಂಪರ್ಕ ಹೊಂದಿದ ವ್ಯಕ್ತಿಯ ನಿರ್ಧಾರಗಳಿಗಿಂತ ತೀರಾ ಭಿನ್ನವಾಗಿರಬಹುದು.
ಮಕ್ಕಳು ಬೆಳೆಯುತ್ತಾ ಹೋದಂತೆ ಬೆಸೆಯುವ ಸ್ನೇಹ, ಹೊಂದುವ ಅಭಿರುಚಿಗಳು, ತಿನ್ನುವ ಆಹಾರ.., ಹೀಗೆ ಪ್ರತಿಯೊಂದು ಅಂಶಗಳು ಕೂಡಾ ಬದಲಾಗಬಹುದು. ಪ್ರಾಥಮಿಕ ಶಾಲೆಯಲ್ಲಿ ಪ್ರಾಣ ಸ್ನೇಹಿತನಂತಿದ್ದ ವ್ಯಕ್ತಿ ಪ್ರೌಢಶಾಲೆಯ ವಿದ್ಯಾಭ್ಯಾಸದ ಸಂದರ್ಭ ಸ್ನೇಹದ ಕೊಂಡಿ ಕಳಚಿ ದೂರಾಗಬಹುದು. ಅದಕ್ಕೆ ಈರ್ವರ ನಡುವೆ ಭಿನ್ನಾಭಿಪ್ರಾಯಗಳೇ ಮೂಡಬೇಕೆಂದಿಲ್ಲ. ಏನೇ ತಿನ್ನುವಾಗಲೂ ಹಂಚಿ ತಿನ್ನುತ್ತಿದ್ದ ಬಾಲ್ಯದ ಗೆಳತಿ ಪ್ರೌಢಶಾಲೆಗೆ ಕಾಲಿಟ್ಟ ಕೂಡಲೇ ವರಸೆ ಬದಲಾಯಿಸಿ ಒಂದೋ ಮತ್ತೊಬ್ಬಳು ಗೆಳತಿಯ ಸ್ನೇಹ ಬಯಸಿ ದೂರಾಗಬಹುದು.,ಅಥವಾ ಕಂಜೂಸ್ ಆಗಿ ಹಂಚಿ ತಿನ್ನುವ ಬಾಲ್ಯದ ಗುಣಕ್ಕೆ ತೀರಾ ಭಿನ್ನಳಾಗಿ ಸ್ವಾರ್ಥಿಯಾಗಲೂ ಸಾಧ್ಯವಿದೆ. ಒಂದೇ ಶಾಲೆಯ ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೇರೆ ಶಾಲಾ ಕಾಲೇಜುಗಳಿಗೆ ಸೇರಲ್ಪಟ್ಟಾಗ ಆರಂಭದಲ್ಲಿ ಒಂದೇ ಶಾಲೆಯಿಂದ ಬಂದವರೆಂಬ ಕಾರಣದಿಂದ ಜೊತೆಯಾದರೂ ನಂತರದ ದಿನಗಳಲ್ಲಿ ಅವರಿಗೆ ಬೇರೆ ಶಾಲೆಯಿಂದ ಬಂದವರೊಂದಿಗೆ ಸ್ನೇಹವಾಗುತ್ತದೆ. ಆದರೆ
ಮತ್ತೆ ಕೆಲವು ವರ್ಷಗಳ ಬಳಿಕ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿಯೋ ಅಥವಾ ವೃತ್ತಿಯ ಕಾರಣದಿಂದಲೋ ಬೇರೆಡೆಗೆ ಸ್ಥಳಾಂತರಗೊಂಡಾಗ ಅಲ್ಲಿ ಮತ್ತೆ ಹೊಸ ಸ್ನೇಹಿತರು ಜೊತೆಯಾಗುತ್ತಾರೆ. ಹಳೆಯ ಸ್ನೇಹ, ಅಭಿರುಚಿ ಮೊದಲಾದವುಗಳು ಸಮಯ, ಸಂದರ್ಭ, ಸನ್ನಿವೇಶ ಹಾಗೂ ಬದಲಾದ ಪರಿಸರದ ಕಾರಣದಿಂದಾಗಿ ಮತ್ತೆ ಬದಲಾಗುತ್ತದೆ. ಬೆಳೆಯುತ್ತಾ ಸಾಗಿದಂತೆ ಇಷ್ಟದ ವಸ್ತು, ಇಷ್ಟಪಡುವ ಜನ, ಇಷ್ಟದ ಬಣ್ಣ…ಹೀಗೆ ಪ್ರತಿಯೊಂದು ಕೂಡಾ ಬದಲಾಗುವ ಸಾಧ್ಯತೆ ಇದೆ.
ಇದಕ್ಕೆ ತದ್ವಿರುದ್ಧವಾಗಿ ಕೆಲವೊಂದು ಸ್ನೇಹ, ಅಭಿರುಚಿ, ರೂಢಿಸಿಕೊಂಡ ಗುಣಗಳು ಬದಲಾಗದೆ ಇರುವ ಸಂದರ್ಭಗಳೂ ಇರಬಹುದು. ಆದರೆ ಅವುಗಳ ಸಾಧ್ಯತೆ ಮಾತ್ರ ತೀರಾ ಕಡಿಮೆ. ಬದಲಾದ ಪರಿಸರ, ಸಮಯ, ಸಂದರ್ಭಗಳು ಮನುಷ್ಯನ ಬೇಕು-ಬೇಡಗಳ ಮೇಲೆ ಅತ್ಯಂತ ಹೆಚ್ಚು ಪ್ರಭಾವ ಬೀರುತ್ತದೆ ಎಂಬುದು ಮಾತ್ರ ಸತ್ಯ.

(ಗಣೇಶ್ ಮಾವಂಜಿ ಹಿರಿಯ ಪತ್ರಕರ್ತರು ಹಾಗು ಅಂಕಣಕಾರರು)


















