ದಂಬುಲ್ಲಾ: ಅಫ್ಗಾನಿಸ್ತಾನ ಎ ತಂಡವು ಮಳೆಯಿಂದಾಗಿ ಮೊಟಕುಗೊಂಡ ತ್ರಿಕೋನ ಸರಣಿ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಗುರುವಾರ ಭಾರತ ಎ ತಂಡವನ್ನು ಡಕ್ವರ್ತ್ ಲೂಯಿಸ್ ಸ್ಟರ್ನ್ (ಡಿಎಲ್ಎಸ್) ವಿಧಾನದಲ್ಲಿ 4 ರನ್ಗಳಿಂದ ಸೋಲಿಸಿತು.ಭಾರತ ತಂಡವು, ಮಳೆಯ ಕಾರಣ 49 ಓವರುಗಳಿಗೆ ಸೀಮಿತಗೊಂಡ ಇನಿಂಗ್ಸ್ನಲ್ಲಿ
9 ವಿಕೆಟ್ಗೆ 349 ರನ್ಗಳ ದೊಡ್ಡ ಮೊತ್ತ ಗಳಿಸಿತು. ಪ್ರಭಸಿಮ್ರನ್ ಸಿಂಗ್ 69 ಎಸೆತಗಳಲ್ಲಿ 84 ರನ್ ಸಿಡಿಸಿದರೆ, ಉಪನಾಯಕ ಋತುರಾಜ್ ಗಾಯಕವಾಡ್ (66, 73 ಎಸೆತ) ಮತ್ತು ನಾಯಕ ತಿಲಕ್ ವರ್ಮಾ (66, 80 ಎಸೆತ) ಅವರೂ ಅರ್ಧ ಶತಕಗಳನ್ನು ಬಾರಿಸಿ ಮೊತ್ತ ಬೆಳೆಸಿದರು.ಅಫ್ಗಾನಿಸ್ತಾನ ತಂಡ ಆಡುವಾಗ ಮಳೆ ಮತ್ತೆ ಮತ್ತೆ ಸುರಿಯಿತು. ಹೀಗಾಗಿ ಗುರಿಯನ್ನು ಡಿಎಲ್ಎಸ್ ವಿಧಾನ ಬಳಸಿ 38 ಓವರುಗಲ್ಲಿ 294 ರನ್ಗಳಿಗೆ ಪರಿಷ್ಕೃತಗೊಳಿಸಲಾಯಿತು.
ನಾಯಕ ಇಮ್ರಾನ್ (ಅಜೇಯ 75, 70 ಎಸೆತ) ಮತ್ತು ಹಸನ್ ಐಸಾಖಿಲ್ (34, 29 ಎಸೆತ) ಅವರು ಅಫ್ಗನ್ ತಂಡ ಹಿಂದೆಬೀಳದಂತೆ ನೋಡಿಕೊಂಡರು. ತಂಡ 25.5 ಓವರುಗಳಲ್ಲಿ 2 ವಿಕೆಟ್ಗೆ 177 ರನ್ ಗಳಿಸಿದ್ದಾಗ ಮಳೆ ಮತ್ತೆ ಸುರಿಯತೊಡಗಿ ಪಂದ್ಯ ಮುಂದುವರಿಸಲಾಗಲಿಲ್ಲ. ಈ ವೇಳೆ ಅಫ್ಗಾನಿಸ್ತಾನ ತಂಡವು ಅಗತ್ಯಕ್ಕಿಂತ ನಾಲ್ಕು ರನ್ ಹೆಚ್ಚು ಗಳಿಸಿತ್ತು.
ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಭಾರತ ತಂಡ ಪ್ರಭಸಿಮ್ರನ್ ಮತ್ತು ವೈಭವ್ ಸೂರ್ಯವಂಶಿ ಮಿಂಚಿನ ಆರಂಭ ನೀಡಿ 7 ಓವರುಗಳಲ್ಲಿ 74 ರನ್ ಸೇರಿಸಿದ್ದರು. ಎಡಗೈ ಆಟಗಾರ ಸೂರ್ಯವಂಶಿ 22 ಎಸೆತಗಳಲ್ಲಿ 44 ರನ್ ಬಾರಿಸಿದ್ದು, ಇದರಲ್ಲಿ 9 ಬೌಂಡರಿಗಳಿದ್ದವು. ಒಂದೂ ಸಿಕ್ಸರ್ ಹೊಡೆಯದಿದ್ದರೂ ಅವರು 200ರ ಸ್ಟ್ರೈಕ್ರೇಟ್ನಲ್ಲಿ ರನ್ ಗಳಿಸಿದ್ದು ವಿಶೇಷ. ಈ ಬುನಾದಿಯ ಮೇಲೆ ಋತುರಾಜ್, ತಿಲಕ್ ವರ್ಮಾ ಮತ್ತು ಸೂರ್ಯಾಂಶ್ ಶೆಡ್ಗೆ ರನ್ಸೌಧ ಕಟ್ಟಿದ್ದರು. ಸೂರ್ಯಾಂಶ್ ಶೆಡ್ಗೆ 27 ಎಸೆತಗಳಲ್ಲಿ 40 ರನ್ ಬಾರಿಸಿದರು.
ಸಂಕ್ಷಿಪ್ತ ಸ್ಕೋರು: ಭಾರತ ‘ಎ’: 49 ಓವರುಗಳಲ್ಲಿ 9 ವಿಕೆಟ್ಗೆ 349 (ಪ್ರಭಸಿಮ್ರನ್ ಸಿಂಗ್ 84, ವೈಭವ್ ಸೂರ್ಯವಂಶಿ 44, ಋತುರಾಜ್ ಗಾಯಕವಾಡ್ 66, ತಿಲಕ್ ವರ್ಮಾ 66, ಸೂರ್ಯಾಂಶ್ ಶೆಡ್ಗೆ 40; ಅಬ್ದುಲ್ಲಾ ಅಹಮದ್ಝೈ 68ಕ್ಕೆ5, ಫರ್ಮಾನುಲ್ಲಾ ಸಫಿ 85ಕ್ಕೆ3); ಅಫ್ಗಾನಿಸ್ತಾನ ‘ಎ’: 25.5 ಓವರುಗಳಲ್ಲಿ 2 ವಿಕೆಟ್ಗೆ 177 (ಇಮ್ರಾನ್ ಮೀರ್ ಔಟಾಗದೇ 75, ಬಶಿರ್ ಶಾ ಔಟಾಗದೇ 51)














