ಬೆಂಗಳೂರು: ರಾಜ್ಯಸಭೆಯ ದ್ವೈವಾರ್ಷಿಕ ಚುನಾವಣೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿ ಕಾಂಗ್ರೆಸ್ನ ಮೂವರು ಅಭ್ಯರ್ಥಿಗಳು ಮತ್ತು ಬಿಜೆಪಿಯ ಒಬ್ಬರು ಕರ್ನಾಟಕದಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಗುರುವಾರ ಚುನಾವಣಾ ಅಧಿಕಾರಿಗಳು ಘೋಷಿಸಿದ್ದಾರೆ.ಖರ್ಗೆ ಅವರ ಜೊತೆಗೆ ಎಐಸಿಸಿ ಕಾರ್ಯದರ್ಶಿ ಮನ್ಸೂರ್ ಅಲಿಖಾನ್, ಕಾಂಗ್ರೆಸ್ನ ಮಾಧ್ಯಮ ಮತ್ತು
ಪ್ರಸಾರ ವಿಭಾಗದ ಮುಖ್ಯಸ್ಥ ಪವನ್ ಖೇರ ಮತ್ತು ಬಿಜೆಪಿಯಿಂದ ಪ್ರೊ.ಎಂ.ನಾಗರಾಜ್ ಆಯ್ಕೆಯಾಗಿದ್ದಾರೆ.ಪ್ರಸ್ತುತ ರಾಜ್ಯಸಭೆಯ ಸದಸ್ಯರಾಗಿರುವ ಬಿಜೆಪಿಯ ಈರಣ್ಣ ಕಡಾಡಿ, ನಾರಾಯಣ ಕೊರಗಪ್ಪ,, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಜೆಡಿಎಸ್ನ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಅವರ ಅವಧಿ ಜೂನ್ 25ಕ್ಕೆ ಕೊನೆಗೊಳ್ಳುವುದರಿಂದ ರಾಜ್ಯದಿಂದ ನಾಲ್ಕು ರಾಜ್ಯಸಭಾ ಸ್ಥಾನಗಳನ್ನು ಭರ್ತಿ ಮಾಡಲು ಚುನಾವಣೆ ಘೋಷಿಸಲಾಗಿತ್ತು. ಇದೇ 18ರಂದು ಮತದಾನ ನಡೆಯಬೇಕಿತ್ತು.ನಾಲ್ಕು ಸ್ಥಾನಗಳಿಗೆ ಸೋಮವಾರ ಐದು ಮಂದಿ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಪರಿಶೀಲನೆ ವೇಳೆ ಪಕ್ಷೇತರ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಂಡಿದೆ ಎಂದು ಚುನಾವಣಾ ಆಯೋಗ ಹೇಳಿದೆ. ನಾಮಪತ್ರ ಹಿಂಪಡೆಯಲು ಇಂದೇ(ಜೂ 11) ಕೊನೆಯ ದಿನವಾಗಿದ್ದು, ಕಣದಲ್ಲಿ 4 ಮಂದಿ ಮಾತ್ರ ಉಳಿದಿದ್ದರಿಂದ ಅವರು ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಘೋಷಿಸಲಾಗಿದೆ.














