ನಾಟಿಂಗ್ಹ್ಯಾಮ್: ಟಿ20 ಕ್ರಿಕೆಟ್ನಲ್ಲಿ ತಮ್ಮ ಚೊಚ್ಚಲ ಶತಕ ಬಾರಿಸಿದ ಸ್ಮೃತಿ ಮಂದಾನ ಹಾಗೂ ಪದಾರ್ಪಣೆ ಪಂದ್ಯದಲ್ಲಿ ಮಿಂಚಿದ ಸ್ಪಿನ್ನರ್ ಶ್ರೀಚರಣಿ ಅವರ ಆಟದ ಬಲದಿಂದ ಭಾರತ ಶುಭಾರಂಭ ಮಾಡಿತು.
ಇಂಗ್ಲೆಂಡ್ ಎದುರಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡವು 97 ರನ್ಗಳಿಂದ ಇಂಗ್ಲೆಂಡ್ ಎದುರು ಜಯಿಸಿತು. ಸರಣಿಯಲ್ಲಿ
1–0 ಮುನ್ನಡೆ ಸಾಧಿಸಿತು.ಹಂಗಾಮಿ ನಾಯಕಿಯೂ ಆಗಿರುವ ಮಂದಾನ (112; 62ಎಸೆತ) ಅವರ ಶತಕದ ಬಲದಿಂದ ಭಾರತ ತಂಡವು 20 ಓವರ್ಗಳಲ್ಲಿ 5ಕ್ಕೆ 210 ರನ್ ಗಳಿಸಿತು. ಇದಕ್ಕುತ್ತರವಾಗಿ ಇಂಗ್ಲೆಂಡ್ ತಂಡಕ್ಕೆ 14.5 ಓವರ್ಗಳಲ್ಲಿ 113 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಎಡಗೈ ಸ್ಪಿನ್ನರ್ ಶ್ರೀಚರಣಿ ನಾಲ್ಕು ವಿಕೆಟ್ ಗಳಿಸಿ ಆತಿಥೇಯ ತಂಡವನ್ನು ನಿಯಂತ್ರಿಸಿದರು. ಇಂಗ್ಲಂಡ್ ತಂಡದ ನ್ಯಾಟ್ ಶಿವರ್ ಬ್ರಂಟ್ (66; 42ಎ, 4X10) ಅವರು ಅರ್ಧಶತಕ ಗಳಿಸಿದರು.
ಸ್ಮೃತಿ ಮತ್ತು ಶಫಾಲಿ ವರ್ಮಾ (20;22ಎ) ಮೊದಲ ವಿಕೆಟ್ ಜೊತೆಯಾಟದಲ್ಲಿ 77 ರನ್ ಕಲೆಹಾಕಿದರು. ಸ್ಮೃತಿ ಅಮೋಘ ಬ್ಯಾಟಿಂಗ್ ಮಾಡಿ ಮಹಿಳಾ ಟಿ20 ಮಾದರಿಯಲ್ಲಿ ದೊಡ್ಡ ವೈಯಕ್ತಿಕ ಸ್ಕೋರ್ ದಾಖಲಿಸಿದರು. ಮಂದಾನ ಅವರಿಗೆ ಹರ್ಲಿನ್ ಡಿಯೊಲ್ (43; 23ಎಸೆತ) ಉತ್ತಮ ಜೊತೆ ನೀಡಿದರು. ಹರ್ಲಿನ್ ಮತ್ತು ಸ್ಮೃತಿ ಎರಡನೇ ವಿಕೆಟ್ ಜೊತೆಯಾಟದಲ್ಲಿ 94 ರನ್ ಸೇರಿಸಿದರು.