*ವರದಿ:ಎಂ.ನಾ.ಚಂಬಲ್ತಿಮಾರ್.
ಏತ್ತಡ್ಕ: ದೇವರಿಗೆ ಊರಲ್ಲಿ ಬೆಳೆಯುವ ಹಲಸಿನ ಹಣ್ಣಿನ ಅಪ್ಪ ಮಾಡಿ ನೈವೇದ್ಯ ಉಣಿಸಿ, ಭಕ್ತಾದಿಗಳೂ ಪ್ರಸಾದವೆಂದು ಸೇವಿಸಿ ಸಂಭ್ರಮಿಸುವ ಅಪೂರ್ವ ಸೇವೆಯೊಂದು ಕಾಸರಗೋಡಿನ ಏತಡ್ಕ ಸದಾಶಿವ ದೇವಾಲಯದಲ್ಲಿ ನಡೆಯುತ್ತಿದೆ. 75 ವರ್ಷಗಳಿಗೂ ಮಿಕ್ಕ ಕಾಲದಿಂದ ಆಚಾರದಂತೆ ನಡೆದು ಬರುವ ಹಲಸಿನ ಹಣ್ಣಿನ ಅಪ್ಪಸೇವೆ ಈ ಕ್ಷೇತ್ರದ್ದೇ ವೈಶಿಷ್ಠ್ಯ. ಬಹುಶಃ ದೇಶದ ಮತ್ತೆಲ್ಲೂ
ಕಾಣದ ವೈವಿಧ್ಯ.ಈ ಬಾರಿ ಇಂದು (ಜು. 29ರಂದು) ಬೆಳಗ್ಗೆ 9.30ರಿಂದ ಏತಡ್ಕ ಸದಾಶಿವ ದೇವರಿಗೆ ರುದ್ರಾಭಿಷೇಕ ಸಹಿತ ಹಲಸಿನ ಹಣ್ಣಿನ ಅಪ್ಪ ಸೇವಾ ಸಮರ್ಪಣೆ ನಡೆಯಲಿದೆ.ಗ್ರಾಮವೊಂದರ ನಿವಾಸಿಗಳೆಲ್ಲರ ಮನೆಯಿಂದ ಒಂದೊಂದು ಹಲಸಿನ ಹಣ್ಣು ಎಂಬಂತೆ ಸೇರಿ ಎಲ್ಲರ ಮನೆಯ ವೈವಿಧ್ಯ ಹಣ್ಣುಗಳು ಬೆರೆತು ಪರಿಮಳ ಭರಿತ ಅಪ್ಪವಾಗಿ ಶಿವಾರ್ಪಣಗೊಂಡು ಪ್ರಸಾದ ರೂಪೇಣ ನಾಡಿನ ಭಕ್ತರಿಗೆ ಸಮರ್ಪಣೆಯಾಗುವ ಈ ಅಪ್ಪದ ಉತ್ಸವ ಏತಡ್ಕದ ವಿಶೇಷತೆ.
75 ವರ್ಷಗಳ ಹಿಂದೆ ಏತಡ್ಕ ಸದಾಶಿವ ದೇವಳದ ಮುಂದಿನ ಹೊಳೆ

ಭಾರೀ ಮಳೆಗೆ ನೆರೆಯಾಗಿ ಉಕ್ಕಿ ಹರಿಯಿತು. ದೇವಸ್ಥಾನವೂ ಒಳಗೊಂಡು ಸುತ್ತಲಿನ ಕೃಷಿ ಭೂಮಿ ಹೂಳು ತುಂಬಿತು. ಕೃಷಿಗೆ ಅಯೋಗ್ಯವಾಯಿತು. ಅದು 1944ರ ಕಾಲ.
ಆಗ ದೇವಳವನ್ನೊಳಗೊಂಡ ಪಡ್ರೆ ಗ್ರಾಮದ ಈ ಜಾಗವನ್ನು ದಿ. ಸುಬ್ರಾಯ ಭಟ್ಟರು ಖರೀದಿಸಿದರು. ಮುಳಿ ಹುಳ್ಳಿನ ಛಾವಣಿ, ಮಣ್ಣಿನ ಗೋಡೆಯಲ್ಲಿದ್ದ ದೇವಳವನ್ನು ನವೀಕರಿಸಿದರು. ಜೀರ್ಣೋದ್ದಾರ ಬ್ರಹ್ಮಕಲಶೋತ್ಸವ ನಡೆಸಿದರು. ಆ ಕಾಲಕ್ಕೆ ಊರಿಗೆ ಊರೇ ಬಡತನದಿಂದ ತಾಂಡವವಾಡುತಿತ್ತು. ಜಾತಿ, ಮತ ಬೇಧ ಇಲ್ಲದೇ ಎಲ್ಲರಿಗೂ ಮೂರು ಹೊತ್ತು ಪ್ರಕೃತಿ ದತ್ತ ಹಲಸೇ ಆಹಾರ. ಇದು ಅನ್ಯತ್ರ ಆಹಾರ ಇಲ್ಲದ ಕಾಲದಲ್ಲಿ ನಮಗೆ ಸದಾಶಿವ ದೇವರೇ ಒದಗಿಸಿದ ಆಹಾರ ಎಂದೇ ಜನರು ನಂಬಿದರೆ. ನಂಬಿದ ದೇವರಿಗೂ ಋಣ ಸಂದಾಯ

ಪೂರ್ವಕ ವರ್ಷಂಪ್ರತಿ ಹಲಸಿನ ಹಣ್ಣಿನ ಅಪ್ಪ ನೈವೇದ್ಯ ಇರಿಸಲು ಆರಂಭಿಸಿದರು. ಆ ಸಂಪ್ರದಾಯ ಈಗಲೂ ಮುಂದುವರಿದು 75ವರ್ಷಗಳನ್ನು ಹಿಂದಿಕ್ಕಿದೆ. ಇದು ಗ್ರಾಮವೊಂದನ್ನು ಹಲಸು ಕಾಪಾಡಿದ ಕತೆಯೂ ಹೌದು. ಹಸಿವು ನೀಗಿಸಿದ ದೇವರಿಗೆ ಅದೇ ಹಲಸಿನ ಹಣ್ಣು ಸಮರ್ಪಿಸಿ, ಹಲಸಿಗೂ ಆಧ್ಯಾತ್ಮಿಕ ಬೆಸುಗೆ ಹಾಕಿದ ಕತೆಯೂ ಹೌದು..
ನಿನ್ನೆ ಮೊನ್ನೆಯಿಂದೀಚೆಗೆ ಏತಡ್ಕದ ಗ್ರಾಮೀಣ ಭಕ್ತರೆಲ್ಲ ಹಲಸಿನ ಮರವನ್ನೇರಿದ್ದಾರೆ. ಮನೆಗೊಂದರಂತೆ ಹಣ್ಣು ಕೊಯ್ದು

ದೇವರಿಗೊಪ್ಪಿಸಿದ್ದಾರೆ.
ದೇವಳದಲ್ಲೀಗ ಪರಿಮಳ ಭರಿತ ಹಣ್ಣುಗಳು ರಾಶಿಯಾಗಿವೆ. ಇಂದು (29)ಭಾನುವಾರ ಬೆಳಿಗ್ಗೆ ಊರವರೆಲ್ಲ ಸೇರಿ ಹಣ್ಣು ಕೊಯ್ದು ಸಂಸ್ಕರಿಸುತ್ತಾರೆ. ಊರವರೇ ದೇಣಿಗೆ ಇತ್ತ ಎಣ್ಣೆ, ಬೆಲ್ಲ, ತುಪ್ಪ ಮತ್ತಿತರ ಪೂರಕ ವಸ್ತುಗಳೊಂದಿಗೆ ಅಪ್ಪ ತಯಾರಾಗುತ್ತದೆ. ಮಧ್ಯಾಹ್ನದ ಪೂಜೆಯೊಂದಿಗೆ ಸಮರಪಣಗೊಂಡು ಶಿವಪ್ರಸಾದವಾಗುತ್ತದೆ.