ಜೈಪುರ:ಆರಂಭಿಕ ಬ್ಯಾಟರ್ಗಳಾದ ಕೆ.ಎಲ್.ರಾಹುಲ್ ಮತ್ತು ಪಾತುಮ್ ನಿಸ್ಸಾಂಕ ಅಮೋಘ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ರಾಜಸ್ಥಾನ್ ರಾಯಲ್ಸ್ ವಿರುದ್ಧ 7 ವಿಕೆಟ್ಗಳ ಗೆಲುವು ದಾಖಲಿಸಿದೆ. ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ಗೆ 225 ರನ್ ಕಲೆ ಹಾಕಿತು. ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು
19.1ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 226 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಡೆಲ್ಲಿ ಪರ ಕೆ.ಎಲ್.ರಾಹುಲ್ 40 ಎಸೆತಗಳಲ್ಲಿ 6 ಬೌಂಡರಿ ಮತ್ತು 5 ಸಿಕ್ಸರ್ ನೆರವಿನಿಂದ 75 ರನದ ಗಳಿಸಿದರು. ಪಾತುಂ ನಿಸ್ಸಾಂಕ 33 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 62 ರನ್ ಬಾರಿಸಿದರು. ಇವರಿಬ್ಬರು ಮೊದಲ ವಿಕೆಟ್ಗೆ 9.3 ಓವರ್ಗಳಲ್ಲಿ 110 ರನ್ ಸೇರಿಸಿದರು. ನಿತೀಶ್ ರಾಣಾ 17 ಎಸೆತಗಳಲ್ಲಿ 2 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 33 ರನ್ ಗಳಿಸಿದರು. ಕೊನೆಯಲ್ಲಿ ಟಿಸ್ಟನ್ ಸ್ಟಬ್(18) ಹಾಗೂ ಅಶುತೋಶ್ ಶರ್ಮ (25) ತಂಡವನ್ನು ಗೆಲುವಿನ ದಡ ಸೇರಿಸಿದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ಸ್ಗೆ ಅನುಭವಿ ವೇಗಿಗಳಾದ ಮಿಚೇಲ್ ಸ್ಟಾರ್ಕ್ ಮತ್ತು ಕೈಲ್ ಜೇಮಿಸನ್ ಆಘಾತ ನೀಡಿದರು. ಬಿರುಸಿನ ಬ್ಯಾಟಿಂಗ್ಗೆ ಹೆಸರಾದ ವೈಭವ್ ಸೂರ್ಯವಂಶಿ (4) ಮತ್ತು ಯಶಸ್ವಿ ಜೈಸ್ವಾಲ್ (6) ಅವರಿಬ್ಬರನ್ನೂ ತಂಡದ ಮೊತ್ತ 12 ರನ್ ಆಗುವಷ್ಟರಲ್ಲೇ ಪೆವಿಲಿಯನ್ಗೆ ಅಟ್ಟಿದರು.
ಈ ಹಂತದಲ್ಲಿ ಕ್ರೀಸ್ಗಿಳಿದ ನಾಯಕ ಪರಾಗ್, ವಿಕೆಟ್ ಕೀಪರ್ ಬ್ಯಾಟರ್ ಧ್ರುವ್ ಜುರೇಲ್ (42) ಜೊತೆ ಮೂರನೇ ವಿಕೆಟ್ ಪಾಲುದಾರಿಕೆಯಲ್ಲಿ 102 ರನ್ ಕೂಡಿಸಿದರು. ನಂತರ ಅನುಭವಿ ರವೀಂದ್ರ ಜಡೇಜ (20) ಜೊತೆಗೂಡಿ 53 ರನ್ ಕಲೆಹಾಕಿದರು. ಈ ಜೊತೆಯಾಟಗಳು, ಇನಿಂಗ್ಸ್ ಸ್ಥಿರತೆ ನೀಡಿದವು.50 ಎಸೆತಗಳನ್ನು ಎದುರಿಸಿದ ಪರಾಗ್, 90 ರನ್ ಗಳಿಸಿದ್ದಾಗ ಸ್ಟಾರ್ಕ್ ಬೌಲಿಂಗ್ನಲ್ಲಿ ಔಟಾದರು. ಅವರ ಇನಿಂಗ್ಸ್ನಲ್ಲಿ ಎಂಟು ಬೌಂಡರಿ ಮತ್ತು ಐದು ಸಿಕ್ಸರ್ಗಳಿದ್ದವು.
ಅಂತಿಮ ಓವರ್ಗಳಲ್ಲಿ ಗುಡುಗಿದ ಡೊನೊವಾನ್ ಫೆರ್ರೇರಾ ತಂಡದ ಮೊತ್ತವನ್ನು 220ರ ಗಡಿ ದಾಟಿಸಿದರು. ಕೇವಲ 14 ಎಸೆತಗಳನ್ನು ಎದುರಿಸಿದ ಅವರು 6 ಸಿಕ್ಸ್ ಮತ್ತು 2 ಬೌಂಡರಿ ಸಹಿತ 47 ರನ್ ಸಿಡಿಸಿ ಅಜೇಯವಾಗಿ ಉಳಿದರು. ಡೆಲ್ಲಿ ಪರ, ಮಿಚೇಲ್ ಸ್ಟಾರ್ಕ್ ಮೂರು ವಿಕೆಟ್ ಉರುಳಿಸಿದರೆ, ಜೇಮಿಸನ್, ನಾಯಕ ಅಕ್ಷರ್ ಪಟೇಲ್ ಮತ್ತು ಟಿ. ನಟರಾಜನ್ ಒಂದೊಂದು ವಿಕೆಟ್ ಪಡೆದರು.













