ಕೋಲ್ಕತ್ತ: ಭಾರತ ಮತ್ತು ದಕ್ಷಿಣ ಆಫ್ರಿಕಾ ಮಧ್ಯೆ ಹೈ ವೋಲ್ಟೇಜ್ ಪಂದ್ಯ ಇಂದು ಕೋಲ್ಕತ್ತಾ ಈಡನ್ ಗಾರ್ಡನ್ಸ್ನಲ್ಲಿ ನಡೆಯಲಿದೆ. ಎರಡೂ ತಂಡಗಳು ಸೆಮಿಫೈನಲ್ ಪ್ರವೇಶಿಸಿರುವ ಕಾರಣ
ಅಗ್ರ ಸ್ಥಾನಕ್ಕಾಗಿ ಪೈಪೋಟಿ ನಡೆಯಲಿದೆ. ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಭಾರತ ಮತ್ತು ಎರಡನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ತಂಡಗಳು ರೌಂಡ್ ರಾಬಿನ್ ಲೀಗ್ನಲ್ಲಿ ಅತ್ಯಂತ ಬಲಾಢ್ಯ ತಂಡಗಳಾಗಿ ಹೊರಹೊಮ್ಮಿವೆ. ಆಡಿದ ಏಳು ಪಂದ್ಯಗಳಲ್ಲಿಯೂ ಭಾರತ ಗೆದ್ದಿದೆ.ಆದರೆ ಇಷ್ಟೇ ಪಂದ್ಯಗಳನ್ನು
ಆಡಿರುವ ತೆಂಬಾ ಬವುಮಾ ನಾಯಕತ್ವದ ದಕ್ಷಿಣ ಆಫ್ರಿಕಾ ನೆದರ್ಲೆಂಡ್ಸ್ ವಿರುದ್ಧ ಅನುಭವಿಸಿದ್ದ ಆಘಾತ ಬಿಟ್ಟರೆ ಉಳಿದದ್ದರಲ್ಲಿ ಭರ್ಜರಿ ಜಯ ಸಾಧಿಸಿದೆ.ಭಾರತ ಎಲ್ಲ ವಿಭಾಗಗಳಲ್ಲಿಯೂ ಆಟಗಾರರು ಶ್ರೇಷ್ಠ ಲಯದಲ್ಲಿದ್ದಾರೆ. ನಾಯಕ ರೋಹಿತ್ ಶರ್ಮಾ, ಶುಭಮನ್ ಗಿಲ್ ಉತ್ತಮ ಆರಂಭ ನೀಡುತ್ತಿದ್ದಾರೆ. ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್ ಕೂಡ ಉತ್ತಮ ಫಾರ್ಮ್ನಲ್ಲಿ ಇದ್ದಾರೆ.
ರವೀಂದ್ರ ಜಡೇಜ ತಮ್ಮ ಆಲ್ರೌಂಡ್ ಆಟವನ್ನು ಮುಂದುವರಿಸಿದ್ದಾರೆ.
ಮೊಹಮ್ಮದ್ ಶಮಿ, ಜಸ್ಪ್ರೀತ್ ಬೂಮ್ರಾ ಮತ್ತು ಮೊಹಮ್ಮದ್ ಸಿರಾಜ್ ಮುಂದೆ ಆಫ್ರಿಕಾ ಬ್ಯಾಟರ್ಗಳ ಅಬ್ಬರಕ್ಕೆ ತಡೆಯೊಡ್ಡುವ ಸವಾಲು ಇದೆ. ಸ್ಪಿನ್ನರ್ ಕುಲದೀಪ್ ಯಾದವ್ ಅವರ ಸ್ಪಿನ್ ಎಸೆತಗಳ ಸತ್ವ ಪರೀಕ್ಷೆಯೂ ಇಲ್ಲಿ ಆಗಬಹುದು.
ನಾಲ್ಕು ಶತಕ ಗಳಿಸಿರುವ ಕ್ವಿಂಟನ್ ಡಿಕಾಕ್, ಎರಡು ಬಾರಿ ಮೂರಂಕಿ ದಾಟಿರುವ ರೆಸಿ ವ್ಯಾನ್ ಡರ್ ಡಸೆ, ತಲಾ ಒಂದು ಶತಕ ಗಳಿಸಿರುವ ಏಡನ್ ಮರ್ಕರಂ ಮತ್ತು ಹೆನ್ರಿಚ್ ಕ್ಲಾಸನ್ ಅವರನ್ನು
ಕಟ್ಟಿಹಾಕುವುದು ಪ್ರಮುಖ ಸವಾಲು. ಇವರಲ್ಲದೇ ಡೇವಿಡ್ ಮಿಲ್ಲರ್ ಕೂಡ ಬೀಸಾಟ ಮಾಡುವ ಬ್ಯಾಟರ್ ಆಗಿದ್ದಾರೆ.
ತಂಡಗಳು
ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್. ರಾಹುಲ್ (ವಿಕೆಟ್ಕೀಪರ್), ರವೀಂದ್ರ ಜಡೇಜ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಆರ್. ಅಶ್ವಿನ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಪ್ರಸಿದ್ಧ ಕೃಷ್ಣ.
ದಕ್ಷಿಣ ಆಫ್ರಿಕಾ: ತೆಂಬಾ ಬವುಮಾ (ನಾಯಕ), ಜೆರಾಲ್ಡ್ ಕೋಝಿ, ಕ್ವಿಂಟನ್ ಡಿಕಾಕ್ (ವಿಕೆಟ್ಕೀಪರ್), ರೀಝಾ ಹೆನ್ರಿಕ್ಸ್, ಮಾರ್ಕೊ ಯಾನ್ಸನ್, ಹೆನ್ರಿಚ್ ಕ್ಲಾಸೆನ್ (ವಿಕೆಟ್ಕೀಪರ್), ಆ್ಯಂಡಿಲೆ ಪಿಶುವಾಯೊ, ಕೇಶವ್ ಮಹಾರಾಜ್, ಏಡನ್ ಮರ್ಕರಂ, ಡೇವಿಡ್ ಮಿಲ್ಲರ್, ಲುಂಗಿ ಗಿಡಿ, ಕಗಿಸೊ ರಬಾಡ, ತಬ್ರೇಜ್ ಶಮ್ಸಿ, ರೆಸಿ ವ್ಯಾನ್ ಡರ್ ಡಸೆ, ಲಿಜಾದ್ ವಿಲಿಯಮ್ಸ್.
ಪಂದ್ಯ ಆರಂಭ: ಮಧ್ಯಾಹ್ನ 2
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್, ಹಾಟ್ಸ್ಟಾರ್ ಆ್ಯಪ್











