ಮಂಗಳೂರು:ಮತದಾರರ ಪಟ್ಟಿ ಸೇರ್ಪಡೆ ಅಭಿಯಾನ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಗೆ ಚುನಾವಣಾ ಆಯೋಗದ ವೀಕ್ಷಕರಾಗಿರುವ ನೋಂದಣಿ ಇಲಾಖೆ ಮಹಾನಿರೀಕ್ಷಕಿ ಡಾ. ಬಿ.ಆರ್. ಮಮತಾ ಅವರು ಇಂದು ಮಂಗಳೂರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಅವರು ಸಭೆ ನಡೆಸಿದರು. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಮತದಾರರ ಪಟ್ಟಿ ಸೇರ್ಪಡೆ, ಯುವ ಮತದಾರರ ನೋಂದಣಿ, ಮೃತಪಟ್ಟವರ ಹೆಸರು ತೆಗೆದುಹಾಕಲು ಕೈಗೊಂಡ ಕ್ರಮಗಳ ಬಗ್ಗೆ ವೀಕ್ಷಕರಿಗೆ ಮಾಹಿತಿ
ನೀಡಿದರು. ಬಳಿಕ ವೀಕ್ಷಕರು 9 ಮತಗಟ್ಟೆಗಳನ್ನು ಹೊಂದಿರುವ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಕೋಡಿಕಲ್ ಸರಕಾರಿ ಶಾಲೆ ಹಾಗೂ 11 ಮತಗಟ್ಟೆಗಳು ಇರುವ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಪಿತಾನಿಯೋ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು.
ಸ್ಥಳೀಯ ಬಿ.ಎಲ್.ಓ.ಗಳೊಂದಿಗೆ ಸಮಾಲೋಚನೆ ನಡೆಸಿದ ಅವರು ಮತದಾರರ ಪಟ್ಟಿಗೆ ಸೇರ್ಪಡೆ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ಪಡೆದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾರರ ನೋಂದಣಿ ಪ್ರಕ್ರಿಯೆಗಳ ಪ್ರಗತಿಗೆ ಸಂತಸ ವ್ಯಕ್ತಪಡಿಸಿದ ವೀಕ್ಷಕರಾದ ಬಿ.ಆರ್. ಮಮತಾ ಅವರು, ಯುವ ಮತದಾರರ ನೋಂದಣಿಗೆ ಕಾಲೇಜುಗಳ ಮೂಲಕ ಇನ್ನಷ್ಟು ಅಭಿಯಾನ ನಡೆಸುವಂತೆ ತಿಳಿಸಿದರು.
ವೀಕ್ಷಕರು ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಮತದಾರರ ಸಹಾಯವಾಣಿ ಕೇಂದ್ರಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮಂಗಳೂರು ಉಪವಿಭಾಗಾಧಿಕಾರಿ ಹರ್ಷವರ್ಧನ್, ತಹಶಿಲ್ದಾರ್ ಪ್ರಶಾಂತ್ ಪಾಟೀಲ್, ನಗರಪಾಲಿಕೆ ಉಪ ಆಯುಕ್ತರಾದ ರೇಖಾ ಶೆಟ್ಟಿ ಮತ್ತಿತರರು ಇದ್ದರು.