ಚೆನ್ನೈ: 200 ಯುನಿಟ್ ಉಚಿತ ವಿದ್ಯುತ್, ಮಹಿಳೆಯರ ರಕ್ಷಣೆಗೆ ವಿಶೇಷ ಪಡೆ ಸೇರಿದಂತೆ ವಿವಿಧ ಜನಪರ ಘೋಷಣೆಗಳನ್ನು ಜಾರಿಗೆ ತರುವುದಾಗಿ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ, ನಟ ಜೋಸೆಫ್ ವಿಜಯ್ ಪ್ರಕಟಿಸಿದ್ದಾರೆ.’ತಮಿಳುನಾಡಿನಲ್ಲಿ ಹೊಸ ಸರ್ಕಾರದ
ಆರಂಭ ಇದಾಗಿದೆ. ನಿಜವಾದ, ಜಾತ್ಯತೀತ ಹಾಗೂ ಸಾಮಾಜಿಕ ನ್ಯಾಯದ ಹೊಸ ಶಕೆ ಈಗ ಪ್ರಾರಂಭವಾಗಿದೆ’ ಎಂದು ಚೊಚ್ಚಲ ಭಾಷಣದಲ್ಲೇ ತಿಳಿಸಿದ್ದಾರೆ.ಗೃಹ ಬಳಕೆದಾರರಿಗೆ 200 ಯುನಿಟ್ವರೆಗೆ ಉಚಿತ ವಿದ್ಯುತ್ ನೀಡುವ ಮೊದಲ ಕಡತಕ್ಕೆ ಸಿಎಂ ವಿಜಯ್ ಸಹಿ ಹಾಕಿದ್ದಾರೆ. ಈ ಸಂದರ್ಭದಲ್ಲಿ ಮಹಿಳೆಯರ ರಕ್ಷಣೆಗಾಗಿ ವಿಶೇಷ ಪಡೆ ರಚಿಸುವುದಾಗಿ ಘೋಷಿಸಿದ್ದಾರೆ.ನಾನು ಯಾವುದೇ ರಾಜಮನೆತನದಿಂದ ಬಂದವನಲ್ಲ. ಜನರೇ ನನ್ನನ್ನು ಆರಿಸಿದ್ದಾರೆ. ಸುಳ್ಳು ಭರವಸೆಗಳನ್ನು ನೀಡಿ ಮೋಸ ಮಾಡುವುದಿಲ್ಲ’ ಎಂದು ಭರವಸೆ ನೀಡಿದ್ದಾರೆ. ರಾಜ್ಯದ ಹಣಕಾಸಿನ ಕುರಿತಾಗಿ ಶ್ವೇತಪತ್ರ ಬಿಡುಗಡೆ ಮಾಡುವ ಬಗ್ಗೆಯೂ ವಿಜಯ್ ಪ್ರಸ್ತಾಪಿಸಿದ್ದು, ಇದರಿಂದ ಮುಂದಕ್ಕೆ ಪಾರದರ್ಶಕವಾಗಿರಲು ನೆರವಾಗಲಿದೆ ಎಂದಿದ್ದಾರೆ.ಸಿಎಂ ವಿಜಯ್ ಹೊರತಾಗಿ ಬೇರೆ ಯಾವುದೇ ಶಕ್ತಿ ಕೇಂದ್ರಗಳು ಇರುವುದಿಲ್ಲ, ಅವರೊಬ್ಬರೇ ಅಧಿಕಾರದ ಕೇಂದ್ರವಾಗಿರುತ್ತಾರೆ’ ಎಂದು ಪ್ರತಿಪಾದಿಸಿದ್ದಾರೆ.
‘ರಾಜ್ಯದಲ್ಲಿ ಡ್ರಗ್ಸ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿರುವ ವಿಜಯ್, ಜನರ ಒಂದು ಪೈಸೆಯನ್ನು ಮುಟ್ಟುವುದಿಲ್ಲ’ ಎಂದು ಭರವಸೆ ನೀಡಿದ್ದಾರೆ.ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತರಲು ಅಗತ್ಯ ಸಮಯ ನೀಡುವಂತೆ ರಾಜ್ಯದ ಜನತೆಯಲ್ಲಿ ವಿನಂತಿ ಮಾಡಿದ್ದಾರೆ.
ಸಮ್ಮಿಶ್ರ ಸರ್ಕಾರ ರಚಿಸಲು ಬೆಂಬಲ ನೀಡಿದ ಕಾಂಗ್ರೆಸ್, ಎಡ ಪಕ್ಷಗಳು ಹಾಗೂ ವಿಸಿಕೆಗೆ ವಿಜಯ್ ಧನ್ಯವಾದ ತಿಳಿಸಿದ್ದಾರೆ.











