ಚೆನ್ನೈ:ಯುವ ಆಟಗಾರ ಉರ್ವಿಲ್ ಪಟೇಲ್ ಸಿಡಿಸಿದ ಸ್ಫೋಟಕ ಅರ್ಧಶತಕದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಲಖನೌ ಸೂಪರ್ ಜೈಂಟ್ಸ್ ವಿರುದ್ಧ 5 ವಿಕೆಟ್ ಅಂತರದ ಜಯ ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಲಖನೌ, ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ಗೆ 203 ರನ್ ಕಲೆಹಾಕಿತ್ತು. ಈ ಗುರಿ ಬೆನ್ನತ್ತಿದ ಚೆನ್ನೈ
19.2 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 208 ರನ್ ಕಲೆಹಾಕಿತು.ಇದರೊಂದಿಗೆ, ಅಡಿರುವ 11 ಪಂದ್ಯಗಳಲ್ಲಿ 6ನೇ ಜಯ ಸಾಧಿಸಿ ಪಾಯಿಂಟ್ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿತು. ಆದರೆ, ಇಷ್ಟೇ ಪಂದ್ಯಗಳಲ್ಲಿ 8ನೇ ಸೋಲು ಅನುಭವಿಸಿದ ಲಖನೌ, ಪ್ಲೇ ಆಫ್ ರೇಸ್ನಿಂದ ಹೊರಬಿದ್ದಿತು. ಚೆನ್ನೈಗೆ ಸಂಜು ಸ್ಯಾಮ್ಸನ್ (28) ಹಾಗೂ ನಾಯಕ ಋತುರಾಜ್ ಗಾಯಕವಾಡ್ (42) ಉತ್ತಮ ಆರಂಭ ನೀಡಿದರು.ನಂತರ ಕ್ರೀಸ್ಗೆ ಇಳಿದ ಉರ್ವಿಲ್, ಅಕ್ಷರಶಃ ಅಬ್ಬರಿಸಿದರು. ತಾವೆದುರಿಸಿದ ಮೊದಲ 8 ಎಸೆತಗಳಲ್ಲಿ 6 ಸಿಕ್ಸ್ ಹಾಗೂ ಒಂದು ಬೌಂಡರಿ ಬಾರಿಸಿದ ಅವರು, 13ನೇ ಎಸೆತದಲ್ಲೇ ಅರ್ಧಶತಕದ ಗಡಿ ದಾಟಿದರು. ಇದರೊಂದಿಗೆ ಅವರು, ಐಪಿಎಲ್ನಲ್ಲಿ ವೇಗದ ಅರ್ಧಶತಕ ಸಿಡಿಸಿದ ಬ್ಯಾಟರ್ ಎನಿಸಿಕೊಂಡರು. ರಾಜಸ್ಥಾನ ರಾಯಲ್ಸ್ ಆಟವಾರ ಯಶಸ್ವಿ ಜೈಸ್ವಾಲ್ ಅವರೂ 2023ರಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಇಷ್ಟೇ ಎಸೆತಗಳಲ್ಲಿ 50 ರನ್ಗಳ ಗಡಿ ದಾಟಿದ್ದರು.ಒಟ್ಟು 23 ಎಸೆತಗಳನ್ನು ಎದುರಿಸಿದ ಉರ್ವಿಲ್, 282ರ ಸ್ಟ್ರೈಕ್ರೇಟ್ನಲ್ಲಿ 65 ರನ್ ಗಳಿಸಿದ್ದಾಗ ಔಟಾದರು.ಶಿವಂ ದುಬೆ (15) ಮತ್ತು ಪ್ರಶಾಂತ್ ವೀರ್ (18) ಗೆಲುವಿನ ಲೆಕ್ಕಾಚಾರ ಪೂರ್ಣಗೊಳಿಸಿದರು.
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಲಖನೌಗೆ ಆರಂಭಿಕ ಜೋಶ್ ಇಂಗ್ಲಿಸ್ ಹಾಗೂ ಮಿಚೇಲ್ ಮಾರ್ಷ್ ಬಿರುಸಿನ ಆರಂಭ ಒದಗಿಸಿದ್ದರು. ಇಂಗ್ಲಿಸ್ 33 ಎಸೆತಗಳಲ್ಲಿ 10 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ 85 ರನ್ ಗಳಿಸಿದರು.ಶಹಬಾಜ್ ಅಹಮದ್ 25 ಎಸೆತಗಳಲ್ಲಿ ತಲಾ ಮೂರು ಬೌಂಡರಿ ಮತ್ತು ಸಿಕ್ಸರ್ ಸಹಿತ 43 ರನ್ ಕಲೆಹಾಕಿದರು.ಚೆನ್ನೈ ಪರ ಉತ್ತಮ ಬೌಲಿಂಗ್ ಮಾಡಿದ ಜೆಮೀ ಓವರ್ಟನ್ ಮೂರು ವಿಕೆಟ್ ಪಡೆದರು.











