ತಿರುವನಂತಪುರ:ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಭರ್ಜರಿ ಜಯ ಸಾಧಿಸಿ ಅಧಿಕಾರಕ್ಕೆ ಬಂದರೂ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಸಿಎಂ ಸ್ಥಾನಕ್ಕಾಗಿ ಸ್ಪರ್ಧೆ ತೀವ್ರಗೊಂಡಿದೆ.ಫಲಿತಾಂಶ ಘೋಷಣೆಯಾಗಿ ಮೂರು ದಿನ ಕಳೆದರೂ ಸಿಎಂ ಆಯ್ಕೆ ನಡೆದಿಲ್ಲ, ಪ್ರಮಾಣವಚನ ಕುರಿತ ರೂಪುರೇಷೆಯೂ ನಡೆದಿಲ್ಲ. ಸಿಎಂ ಸ್ಥಾನಕ್ಕೆ ಮುಖ್ಯವಾಗಿ
ವಿಪಕ್ಷ ನಾಯಕ ವಿ.ಡಿ. ಸತೀಶನ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮತ್ತು ಹಿರಿಯ ಮುಖಂಡ ರಮೇಶ್ ಚೆನ್ನಿತ್ತಲ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಈ ಮೂವರು ನಾಯಕರ ಬೆಂಬಲಿಗರು ತೀವ್ರ ಲಾಬಿ ಪ್ರಾರಂಭಿಸಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕವೂ, ಪ್ಲೆಕ್ಸ್ ಸ್ಥಾಪಿಸುವುದರ ಮೂಲಕವೂ ತಮ್ಮ ನಾಯಕರ ಪರವಾಗಿ ಅಭಿಯಾನ ನಡೆಸುತ್ತಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಹೆಸರನ್ನು ಇನ್ನೂ ಅಂತಿಮಗೊಳಿಸಿಲ್ಲ. ಪಕ್ಷದ ಹಿರಿಯ ಮುಖಂಡರಾದ ಮುಕುಲ್ ವಾಸ್ನಿಕ್ ಮತ್ತು ಅಜಯ್ ಮಾಕನ್ ಅವರನ್ನು ಕೇರಳದ ವೀಕ್ಷಕರನ್ನಾಗಿ ಹೈಕಮಾಂಡ್ ನೇಮಿಸಿದೆ. ಇವರು ಕೇರಳಕ್ಕೆ ಆಗಮಿಸಿದ್ದಾರೆ. ಇಂದು ನಡೆಯುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರ ಅಭಿಪ್ರಾಯ ಪಡೆಯುವರು. ಪ್ರತ್ಯೇಕ ಪ್ರತ್ಯೇಕ ಪ್ರತಿಯೊಬ್ಬ ಶಾಸಕರ ಅಭಿಪ್ರಾಯ ದಾಖಲಿಸಿ ಹೈಕಮಾಂಡ್ಗೆ ವರದಿ ಸಲ್ಲಿಸುವರು. ಬಳಿಕ ಹೈಕಮಾಂಡ್ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡುವರು.
2021ರ ಚುನಾವಣೆಯಲ್ಲಿ ಕಾಂಗ್ರೆಸ್ ಸೋತ ನಂತರ, ವಿ.ಡಿ ಸತೀಶನ್ ಅವರು ವಿರೋಧ ಪಕ್ಷದ ಮುಖಂಡರಾಗಿ, ಯುಡಿಎಫ್ನ ಮುಂಚೂಣಿಯಲ್ಲಿ ನಿಂತು, ಪಕ್ಷವನ್ನು ಮರಳಿ ಅಧಿಕಾರಕ್ಕೆ ತಂದಿದ್ದಾರೆ. ಕೇರಳದ ಮುಖ್ಯಮಂತ್ರಿ ಸ್ಥಾನಕ್ಕೆ ಅವರೇ ಅರ್ಹರು ಎಂದು ಅವರ ಬೆಂಬಲಿಗರು ವಾದಿಸುತ್ತಿದ್ದಾರೆ. ‘ಯುಡಿಎಫ್ ಮೈತ್ರಿಕೂಟದಲ್ಲಿರುವ ಮುಸ್ಲಿಂ ಲೀಗ್ ಹಾಗೂ ಇತರ ಪಕ್ಷಗಳ ಬೆಂಬಲವೂ ಸತೀಶನ್ ಅವರಿಗೆ ಇದೆ.’
ಮುಖ್ಯಮಂತ್ರಿ ಆಯ್ಕೆ ವಿಷಯದಲ್ಲಿ ಜನಪ್ರಿಯತೆ ಮತ್ತು ಜನಬೆಂಬಲ ಮಾತ್ರ ಮುಖ್ಯವಲ್ಲ, ಪಕ್ಷದ ಶಾಸಕರ ಬೆಂಬಲವೂ ನಿರ್ಣಾಯಕ’ ಎಂದು ವೇಣುಗೋಪಾಲ್ ಪರವಾಗಿ ಬೆಂಬಲಿಗರು ಧ್ವನಿ ಎತ್ತಿದ್ದಾರೆ. ರಾಹುಲ್ ಗಾಂಧಿ ಅವರ ಕಟ್ಟಾ ನಿಷ್ಠಾವಂತರಲ್ಲಿ ವೇಣುಗೋಪಾಲ್ ಕೂಡ ಒಬ್ಬರಾಗಿರುವುದರಿಂದ, ರಾಹುಲ್ ಅವರ ನಿರ್ಧಾರವೂ ಕೇರಳಂ ಮುಖ್ಯಮಂತ್ರಿ ಆಯ್ಕೆಯಲ್ಲಿ ಮಹತ್ತರ ಪಾತ್ರ ವಹಿಸಲಿದೆ ಎಂದೇ ಹೇಳಲಾಗುತ್ತಿದೆ.
ಹಿರಿಯ ಮುಖಂಡರಾದ ರಮೇಶ್ ಚೆನ್ನಿತಲ ಅವರಿಗೆ ಹಿರಿತನದ ಆಧಾರದಲ್ಲಿ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂಬುದು ಚೆನ್ನಿತಲ ಬೆಂಬಲಿಗರ ಒತ್ತಾಯ.
ಕೇರಳಂ ವಿಧಾನಸಭೆಗೆ ಏಪ್ರಿಲ್ 9ರಂದು ಮತದಾನ ನಡೆದು ಮೇ 4ರಂದು ಫಲಿತಾಂಶ ಪ್ರಕಟವಾಗಿತ್ತು. ಯುಡಿಎಫ್ 102 ಸ್ಥಾನಗಳಲ್ಲಿ ಗೆದ್ದು ದಶಕದ ಬಳಿಕ ಅಧಿಕಾರಕ್ಕೆ ಮರಳಿತ್ತು.











