ಚೆನ್ನೈ: ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ಸಿ.ಜೋಸೆಫ್ ವಿಜಯ್ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ.ಇಲ್ಲಿನ ಜವಾಹರಲಾಲ್ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ
ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಪ್ರಮಾಣವಚನ ಬೋಧಿಸಿದ್ದಾರೆ. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ತಮಿಳುನಾಡಿನಲ್ಲಿ ಸಾಂಪ್ರದಾಯಿಕ ದ್ರಾವಿಡ ಪಕ್ಷಗಳಾದ ಎಐಎಡಿಎಂಕೆ ಮತ್ತು ಡಿಎಂಕೆಗಳ ವಾಡಿಕೆಗಳನ್ನು ಮುರಿದು ವಿಜಯ್ ಅವರ ಟಿವಿಕೆ ಪಕ್ಷವು ಸರ್ಕಾರ ರಚಿಸಿದೆ. ಆ ಮೂಲಕ ದಾಖಲೆ ಬರೆದಿದ್ದು, ರಾಜ್ಯದಲ್ಲಿ ಅಧಿಕಾರಕ್ಕೇರಿರುವ ಮೊದಲ ದ್ರಾವಿಡಯೇತರ ಪಕ್ಷವೆನಿಸಿದೆ. ಅಲ್ಲದೆ ತಮಿಳುನಾಡಿನ ಚೊಚ್ಚಲ ಸಮ್ಮಿಶ್ರ ಸರ್ಕಾರ ಎನಿಸಿಕೊಂಡಿದೆ.ಮೇ 13ರಂದು ಅಥವಾ ಅದಕ್ಕೂ ಮುನ್ನ ವಿಜಯ್ ಅವರು ತಮಿಳುನಾಡಿನ ವಿಧಾನಸಭೆಯಲ್ಲಿ ಬಹುಮತವನ್ನು ಸಾಬೀತು ಮಾಡುವ ನಿರೀಕ್ಷೆ ಇದೆ.
ಒಂಬತ್ತು ಸಚಿವರು ವಿಜಯ್ ಜೊತೆ ಪ್ರಮಾಣ ವಚನ ಸ್ವೀಕರಿಸಿದರು. ನೂತನ ಸಚಿವರಾಗಿ ಎಸ್. ಕೀರ್ತನಾ ಎನ್. ಆನಂದ್, ಕೆ.ಜಿ ಅರುಣರಾಜ್, ಕೆ.ಎ.ಸೆಂಗೊಟ್ಟೈಯನ್, ಆಧವ್ ಅರ್ಜುನ ಮತ್ತು ಸಿ.ಟಿ.ಆರ್ ನಿರ್ಮಲ್ ಕುಮಾರ್, ಎ ರಾಜ್ಮೋಹನ್, ಕೆ.ಟಿ ಪ್ರಭು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.





























