ರಾಯ್ಪುರ: ಅನುಭವಿ ಭುವನೇಶ್ವರ್ ಕುಮಾರ್ ಅವರ ಅಮೋಘ ಬೌಲಿಂಗ್ ಪ್ರದರ್ಶನ, ಸಂದರ್ಭೋಚಿತ ಬ್ಯಾಟಿಂಗ್ ಮತ್ತು ಆಲ್ ರೌಂಡರ್ ಕ್ರುನಾಲ್ ಪಾಂಡ್ಯ ಅವರ ಆಕರ್ಷಕ ಅರ್ಧ ಶತಕದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂಬೈ ಇಂಡಿಯನ್ಸ್ ವಿರುದ್ಧ 2 ವಿಕೆಟ್ಗಳ ರೋಚಕ ಜಯ ದಾಖಲಿಸಿದೆ.ರಾಯ್ಪುರದಲ್ಲಿ ನಡೆದೆ ಪಂದ್ಯದಲ್ಲಿ ಮೊದಲು
ಬ್ಯಾಟ್ ಮಾಡಿದ ಮುಂಬೈ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ಗೆ 166 ರನ್ಗಳ ಸಾಧಾರಣ ಮೊತ್ತ ಗಳಿಸಿತು. ಗುರಿ ಬೆನ್ನಟ್ಟಿದ ಆರ್ಸಿಬಿ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 167ರನ್ ಗಳಿಸಿ ಗೆಲುವಿನ ನಗೆ ಬೀರಿತು. ಆರ್ಸಿಬಿ ಪರ ಕ್ರುನಾಲ್ ಪಾಂಡ್ಯ ಜವಾಬ್ದಾರಿಯುತ ಅರ್ಧ ಶತಕ ಬಾರಿಸಿದರು. ಕ್ರುನಾಲ್ ಪಾಂಡ್ಯ 46 ಎಸೆತಗಳಲ್ಲಿ 4 ಬೌಂಡರಿ ಹಾಗು 5 ಸಿಕ್ಸರ್ ನೆರವಿನಿಂದ 73 ರನ್ ಸಿಡಿಸಿದರು.ವಿರಾಟ್ ಕೊಹ್ಲಿ ಸತತ ಎರಡನೇ ಬಾರಿಗೆ ಸೊನ್ನೆ ಸುತ್ತಿದರೆ, ಜೋಸೆಫ್ ಬೆಥೆಲ್(27), ದೇವದತ್ತ ಪಡಿಕಲ್(12), ರಜತ್ ಪಾಟಿದಾರ್ (8), ಜಿತೇಶ್ ಶರ್ಮ (18), ಟಿಂ ಡೇವಿಡ್ (0) ರೊಮಾರಿಯೋ ಶೆಫರ್ಡ್(4) ನಿರಾಶಾದಾಯಕ ಪ್ರದರ್ಶನ ನೀಡಿದರು. ಕೊನೆಯ ಓವರ್ನಲ್ಲಿ ಆರ್ಸಿಬಿ ಗೆಲುವಿಗೆ 15 ರನ್ ಅಗತ್ಯವಿತ್ತು. ಭುವನೇಶ್ವರ್ ಕುಮಾರ್ ಅಗತ್ಯ ಸಿಕ್ಸರ್ ಎತ್ತಿ ಗೆಲುವಿನ ಸಮೀಪ ತಂದರು. ಕೊನೆಯ ಎಸೆತದಲ್ಲಿ ರಸಿಕ್ ಸಲಾಂ ಎರಡು ರನ್ ಬಾರಿಸಿ ತಂಡಕ್ಕೆ ರೋಚಕ ಜಯ ತಂದರು.
ಇದಕ್ಕೂ ಮುನ್ನ ಟಾಸ್ ಗೆದ್ದ ಆರ್ಸಿಬಿ ನಾಯಕ ರಜತ್ ಪಾಟೀದಾರ್ ಬೌಲಿಂಗ್ ಆಯ್ದುಕೊಂಡರು.ನಾಯಕನ ನಿರ್ಧಾರ ಸಮರ್ಥಿಸಿಕೊಂಡ ಭುವಿ, ಮೊದಲ ಓವರ್ನಲ್ಲೇ ರಿಯಾನ್ ರಿಕ್ಕೆಲ್ಟನ್ (2) ವಿಕೆಟ್ ಉರುಳಿಸಿದರು.ಆರಂಭದಿಂದಲೇ ಬೀಸಾಟಕ್ಕೆ ಒತ್ತು ನೀಡಿದ ರೋಹಿತ್ ಶರ್ಮಾ (10 ಎಸೆತದಲ್ಲಿ 22 ರನ್), ನಾಯಕ ಸೂರ್ಯಕುಮಾರ್ ಯಾದವ್ (0) ಅವರಿಗೂ ಪೆವಿಲಿಯನ್ ಹಾದಿ ತೋರಿದರು. ಹೀಗಾಗಿ, ಮುಂಬೈ ಪಡೆ ಕೇವಲ 28 ರನ್ಗಳಿಗೆ ಪ್ರಮುಖ ಮೂರು ವಿಕೆಟ್ಗಳನ್ನು ಕಳೆದುಕೊಂಡಿತು. ಇದರಿಂದಾಗಿ, ರನ್ ಗಳಿಕೆಯ ವೇಗವೂ ತಗ್ಗಿತು.ಈ ಹಂತದಲ್ಲಿ ಜೊತೆಯಾದ ನಮನ್ ಧಿರ್ ಮತ್ತು ತಿಲಕ್ ವರ್ಮಾ, ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 82 ರನ್ ಕಲೆಹಾಕಿ ಜವಾಬ್ದಾರಿಯುತ ಇನಿಂಗ್ಸ್ ಕಟ್ಟಿದರು. 32 ಎಸೆತಗಳಲ್ಲಿ 47 ರನ್ ಗಳಿಸಿದ್ದ ನಮನ್ ಔಟಾದ ನಂತರ ಮತ್ತೆ ವಿಕೆಟ್ ಉರುಳಲಾರಂಭಿದವು. ಇದು, ಬೃಹತ್ ಮೊತ್ತ ಕಲೆಹಾಕುವ ಸೂರ್ಯ ಪಡೆಯ ಲೆಕ್ಕಾಚಾರಕ್ಕೆ ತಡೆಯೊಡ್ಡಿತು. ತಿಲಕ್ ವರ್ಮ
42 ಎಸೆತಗಳಲ್ಲಿ 57 ರನ್ ಸಿಡಿಸಿದರು. ಆರ್ಸಿಬಿ ಪರ ಭುವನೇಶ್ವರ್ ಕುಮಾರ್ 23 ರನ್ ನೀಡಿ ನಾಲ್ಕು ವಿಕೆಟ್ ಪಡೆದರೆ, ಜೋಶ್ ಹ್ಯಾಜಲ್ವುಡ್, ರಸೀಕ್ ಸಲಾಂ ದರ್, ರೊಮಾರಿರೊ ಶೆಫರ್ಡ್ ತಲಾ ಒಂದೊಂದು ವಿಕೆಟ್ ಉರುಳಿಸಿದರು.
ಟೂರ್ನಿಯಲ್ಲಿ 11ಪಂದ್ಯ ಆಡಿರುವ ರಜತ್ ಪಾಟೀದಾರ್ ಬಳಗ, ಏಳರಲ್ಲಿ ಗೆದ್ದು ನಾಲ್ಕನ್ನು ಸೋತು ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ.
ಇಷ್ಟೇ ಪಂದ್ಯಗಳನ್ನು ಆಡಿರುವ ಮುಂಬೈ, ಕೇವಲ ಮೂರನ್ನು ಗೆದ್ದು 6 ಪಾಯಿಂಟ್ಗಳೊಂದಿಗೆ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದು ಪ್ಲೇ ಆಫ್ ರೇಸ್ನಿಂದ ಹೊರ ಬಿದ್ದಿದೆ.











