*ಎಂ.ನಾ.ಚಂಬಲ್ತಿಮಾರ್
ಕನ್ನಡಿಗರಿಗೆ ಯುಗಾದಿ, ತುಳುವರಿಗೆ ಬಿಸುಪರ್ಬ, ಮಲಯಾಳಿಗರಿಗೆ ವಿಷು ಎಂದು ಸಂಭ್ರಮಿಸಿ, ಕೊಂಡಾಡುವ ಹೊಸ ವರ್ಷೋದಯದ, ರುತುಪಲ್ಲಟದ ಪರ್ವಕಾಲ ಮತ್ತೆ ಬಾಗಿಲಿಗೆ ಬಂದಿದೆ. ಇಂಥ ಸಂಭ್ರಮದ ಕಾಲವೊಂದನ್ನು ಕಾಲಕ್ಕೆ ಮೊದಲೇ ಸಾರುತ್ತಾ ಬರುವುದೇ ಬಂಗಾರದ ಬಣ್ಣದಲ್ಲಿ ನಳನಳಿಸುವ ಕೇರಳದ ರಾಜ್ಯ ಪುಷ್ಪವಾದ ‘ಕೊನ್ನ ಪೂ’ ಎಂಬ ಕನ್ನಡಿಗರ ಕಕ್ಕೆ ಹೂ.. ದೇವರ ನಿತ್ಯಪೂಜೆಯಲ್ಲೆಲ್ಲೂ ಜಾಗ ಪಡೆಯದ ಈ ಹಳದಿ ಸುಂದರಿ ವಿಷು ಬಂದರೆ ಸಾಕು ಇಡೀ ಸಂಭ್ರಮವೇ ತನ್ನದೆಂಬಂತೆ
ಊರಿಡೀ ಅರಳಿಕೊಳ್ಳುತ್ತಾ, ನಾಡಿಗೆ ಸೊಬಗಿನ ಕೊಡೆ ಹಿಡಿಯುತ್ತದೆ. ವರ್ಣಮಯ ಮೆರುಗು ನೀಡುತ್ತದೆ.
ಕೇರಳೀಯರಿಗೆ ‘ಕೊನ್ನಪೂ’ ಇಲ್ಲದೇ ವಿಷುವಿಲ್ಲ, ವಿಷುಕಣಿಯೂ ಇಲ್ಲ. ವಿಷು ನಮ್ಮ ನಾಡಿಗೆ ಹೊಸವರ್ಷದಾರಂಭದ ಸುದಿನ. ಆ ದಿನ ಬ್ರಾಹ್ಮೀ ಮುಹೂರ್ತದಲ್ಲಿ ಫಲಪುಷ್ಪಗಳಿಂದಾಲಂಕೃತ, ಸಂಪತ್ಸಮೃದ್ದಿಯ ಸಂಕೇತಗಳೊಂದಿಗೆ ಮಹಾವಿಷ್ಣು ದರ್ಶನ ಮಾಡಿ ಒಳಿತನ್ನೇ ಬಯಸಿ, ಹರಸಬೇಕೆಂಬುದೇ ವಾಡಿಕೆ. ಈ ಮೂಲಕವೇ ಹೊಸಬದುಕಿಗೆ ಕಾಲಿರಿಸುವುದು ನಂಬಿಕೆ. ಇದು ಶತಮಾನಗಳಿಂದ ಕೈ ದಾಟಿ ಬಂದ ಪರಂಪರೆ. ಇಂಥ ಕಣಿ ನೋಡುವ ಪರಂಪರೆಯಲ್ಲಿ ರಾಜಮಾನ್ಯತೆಯಿಂದ ಮೆರೆಯುವ ಪುಷ್ಪವೇ ಈ ಕಕ್ಕೆ ಹೂವು…
ಇದು ಮೂಲ ಭಾರತೀಯ ಪುಷ್ಪ. ಹಾಗೆಂದು ಇದು ಹೂವಿನ ಗಿಡವಲ್ಲ. ಕನ್ನಡದಲ್ಲಿ ಬ್ಯಾಟೆ ಮರ, ಕೊಂದೆಮರ ಅಂತಲೂ ಕರೆಯುವ ಇದು ಪುಟ್ಟ ಧಾರ್ಮಿಕ ವೃಕ್ಷ. ಇದರ ಮೂಲವೇ ಭಾರತ. ಇಂಗ್ಲೀಷಿನಲ್ಲಿ golden shower tree ಅಥವಾ cassia fistula ಎನ್ನಲಾಗುವ ಈ ವೃಕ್ಷ ವನ್ನು ಸಂಸ್ಕೃತದಲ್ಲಿ “ಕರ್ಣಿಕಾರ” ಎನ್ನುತ್ತಾರೆ. ಕೇವಲ 15ರಿಂದ 40 ಅಡಿ ಎತ್ತರಕ್ಕಷ್ಟೇ ಬೆಳೆಯುವ ಈ ವೃಕ್ಷವನ್ನು ಸಂಸ್ಕೃತ ಸಾಹಿತ್ಯದಲ್ಲಿ ‘ಅರ್ಕವಧಾ’ ಎನ್ನುತ್ತಾರೆ. ಅಂದರೆ ಎಂಥ ಭೀಕರ ಚರ್ಮರೋಗಕ್ಕೂ ಸಹಿತ ಕ್ಯಾನ್ಸರ್, ಹೃದಯ ಕಾಯಿಲೆಗಳಿಗೆ ಈ ಮರದ ಎಲೆ, ಬೇರು,ತೊಗಟೆ ಇತ್ಯಾದಿಗಳೆಲ್ಲವೂ ರಾಮಬಾಣ.!
ಆದ್ದರಿಂದಲೇ ಆಯುರ್ವೇದದಲ್ಲಿ ಇದನ್ನು ಸಸ್ಯಸಂಜೀವಿನಿಯಾಗಿ ಕಂಡಿದ್ದಾರೆ, ಮಹತ್ವದ ಸ್ಥಾನ ನೀಡಿದ್ದಾರೆ.
ಈ ಮರದ ಹೆಸರಲ್ಲೇ ಅದರ ವೈಶಿಷ್ಠ್ಯ ಅಡಗಿದೆ. ಮಲಯಾಳಿಗರು “ಕೊನ್ನ ಪೂ” ಅಂದರೆ, ಅದನ್ನೇ ಕನ್ನಡದಲ್ಲಿ ಕೊಂದಮರದ ಹೂ ಎನ್ನುತ್ತಾರೆ. ಆದರೆ ಬಂಗಾರವರ್ಣದ ಪುಷ್ಪವನ್ನರಳಿಸುವ ಈ ಮರ ಜೀವಸಂರಕ್ಷಿಸಿದ್ದಲ್ಲದೇ ಕೊಂದದ್ದು ಯಾರನ್ನು…??
ಈ ಕುರಿತು ಕೇರಳದಲ್ಲಿ ಜನಪದ ಕಥನವೊಂದು ಜನಪ್ರಿಯವಾಗಿದೆ. ತ್ರೇತಾಯುಗದಲ್ಲಿ ಸೀತಾನ್ವೇಷಣೆಗಾಗಿ ಶ್ರೀರಾಮಚಂದ್ರಮನು ಹೊರಟಿದ್ದ ಕಾಲ. ರುಷ್ಯಮೂಕ ಪರ್ವತ ಶ್ರೇಣಿಯಲ್ಲಿ ಸುಗ್ರೀವ ಸಖ್ಯವಾಗುತ್ತದೆ. ಆ ಬಳಿಕ ಸುಗ್ರೀವನಿಗಾಗಿ ವಾಲಿವಧೆ ನಡೆಯುತ್ತದೆ. ವಾಲಿಯ ವಧೆ ಶ್ರೀರಾಮನ ಮೂಲಕ ನಡೆದದ್ದು ಇದೇ ಕಕ್ಕೆ ಹೂ ಮರದ ಬುಡದಲ್ಲಂತೆ. ಆ ಬಳಿಕ ಅದನ್ನು ಜನರು ಕನ್ನಾಡಿನಲ್ಲಿ ಕೊಂದ ಮರ ಎಂದೂ, ಕೇರಳದಲ್ಲಿ ಕೊನ್ನಪೂ ಎಂದೂ ಕರೆಯಲಾರಂಭಿಸಿದರಂತೆ. ಇದರಿಂದ
ವ್ಯಥೆಗೊಂಡ ಮರವು ಶ್ರೀರಾಮ ಧ್ಯಾನದಲ್ಲಿ ತೊಡಗಿತು. ಒಂದು ದಿನ ದೇವರೇ ಪ್ರತ್ಯಕ್ಷರಾದರಂತೆ. ಮಾಡದ ತಪ್ಪಿಗೆ ಅಪವಾದ ಕೇಳುತ್ತಿರುವ ತನ್ನ ದುಗುಡವನ್ನು ಮರವೇ ಹೇಳಿಕೊಂಡಿತು. ಇದು ನಿನ್ನ ಪೂರ್ವ ಜನ್ಮ ಫಲ ಎಂದ ಶ್ರೀರಾಮನು ಶ್ರೀಕೃಷ್ಣಾವತಾರದಲ್ಲಿ ನಿನ್ನನ್ನೂ ಜನರು ಒಂದು ದಿನವಾದರೂ ನನ್ನ ಬಳಿಯಿರಿಸಿ ದರ್ಶನ ಭಾಗ್ಯ ಪಡೆವ ಅವಕಾಶ ನೀಡುತ್ತೇನೆ ಎಂದು ಅನುಗ್ರಹಿಸಿದರೆಂಬುದು ಐತಿಹ್ಯ ಕತೆ.
ಇಷ್ಟಕ್ಕೂ ಇದು ಪ್ರಾಚೀನ ವೃಕ್ಷಪುಷ್ಪ. 3ಸಾವಿರ ವರ್ಷಗಳ ಹಿಂದಿನ ಸಾಹಿತ್ಯ ಕೃತಿಗಳಲ್ಲಿ, ಸಂಗಂಕಾಲದ ಕೃತಿಗಳಲ್ಲಿ ಇದರ ಉಲ್ಲೇಖವಿದೆ.
ವರ್ಷಕ್ಕೊಮ್ಮೆ ವಿಷು ಬಂದರಷ್ಟೇ ಜನರು ಹುಡುಕಾಡುವ ಈ ಪುಷ್ಪವೃಕ್ಷವನ್ನು ಮತ್ತೆ ನಿರ್ದಾಕ್ಷಿಣ್ಯವಾಗಿ ಮರೆತೇ ಬಿಡುವುದು ವಾಡಿಕೆ.
ಮಳೆಗಾಲದಲ್ಲಿ ಮೈದುಂಬಿ ಎಲೆಬಿಟ್ಟು ಚಿಗುರುವ ಮರವು ಬೇಸಿಗೆಯಲ್ಲಿ ಎಲೆಕಳಚುತ್ತಾ ಬೆತ್ತಲಾಗುತ್ತದೆ. ಅಂತರ್ಜಲ ಮಟ್ಟ ಆರುತ್ತಲೇ ಇರುವಾಗ ಬೆತ್ತಲೆ ಮರವೇ ಮೈತುಂಬಾ ಹೂಬಿಟ್ಟು ಕಂಗೊಳಿಸುತ್ತದೆ. ಆದ್ದರಿಂದ ಇದನ್ನು ಅಂತರ್ಜಲ ಮಟ್ಟ ಕುಸಿತದ ಸಂಕೇತವಾಗಿಯೂ ಗುರುತಿಸುತ್ತಾರೆ.
ಹಿಂದೆಲ್ಲ ಎಪ್ರೀಲ್ ಬಂದಾಗಲಷ್ಟೇ ಈ ಮರ ಪುಷ್ಪಿಣಿಯಾಗುತಿತ್ತು.
ಆದರೀಗ ಫೆಬ್ರವರಿ ತಿಂಗಳಲ್ಲೇ ಹೂ ಬಿಡಲಾರಂಭಿಸುತ್ತದೆ. ಭೂಮಿಯ ತಾಪ ಏರುವುದೇ ಇದಕ್ಕೆ ಕಾರಣ. ಒಟ್ಟಂದದಲ್ಲಿ ವಿಷು ಸನಿಹ ಬಂದಾಗ ಕೇರಳದುದ್ದಗಲ ನಾಡಿಗೇ ಹಳದಿ ಕೊಡೆಯನು ತೊಡಿಸಿದಂತೆ ಅರಳಿ ಕಂಗೊಳಿಸುವ ಈ ಅಪೂರ್ವ ವೃಕ್ಷ ಸನಾತನ ಭಾರತೀಯ ಆಯುರ್ವೇದ ಔಷಧಿಯ ಅಪೂರ್ವ ಮೂಲಿಕೆ. ಆರಾಧನೆ, ಆಚರಣೆಗಳ ಮರೆಯಲ್ಲಿ ಇದನ್ನು ಸಂರಕ್ಷಿಸಿ ಕೈದಾಟಿಸಬೇಕಾಗಿದೆ. ಇದು ವಿಷುವಿನ ಹೆಸರಲ್ಲಿ ಕೊನ್ನ ಪೂ ವಿಗಾಗಿ ಓಡುವವರೆಲ್ಲರೂ ಜತನದಿಂದ ಮಾಡಬೇಕಾದ ಕಾಯಕ.
ಮೊದಲೊಂದಿಪೆ ನಿನಗೇ…
ಕೊಂದ ಹೂ, ಕೊನ್ನಪೂ ಎಂದರೆ ಒಂದೇ ಅರ್ಥ. ಹೂವು ಯಾರನ್ನಾದರೂ ಕೊಲ್ಲಬಹುದೇ? ಇಲ್ಲ..ಕಾಯಬಹುದು ಅಷ್ಟೆ. ಇಷ್ಟಕ್ಕೂ ಪುಷ್ಪಗಳೆಲ್ಲವೂ ಸೌಂದರ್ವತಿಯರೇ ಹೌದು. ಅದರಲ್ಲೂ ಒಮ್ಮೆ ಅರಳಿದರೆ ದಿವಸಗಟ್ಟಲೆ ಮರದಲ್ಲಿದ್ದರೂ ಬಾಡದೇ ನಿತ್ಯವಸಂತಿಯಾಗಿ ನೇತಾಡುವ ಈ ಕಕ್ಕೆ ಹೂವಿಗೆ ಅದೆಂಥದೋ ಆಕರ್ಷಣೆಯ
ಬಂಗಾರದ ಸುವರ್ಣ. ಅದು ಪರಿಮಳಿಸುವುದಿಲ್ಲ, ಆದರೆ ಆಕರ್ಷಿಸುತ್ತದೆ. ಬಂಗಾರ ಎಂದರೆ ಸಮೃದ್ದಿ, ಸಿರಿವಂತಿಕೆಯ ಸಂಕೇತ. ಆದ್ದರಿಂದಲೇ ವರ್ಷಾರಂಭದಲ್ಲೇ ದೇವರೊಂದಿಗೆ ಈ ಹೂವಿಗೂ ಮೊದಲೊಂದಿಪೆ ನಿನಗೇ…ಎನ್ನುತ್ತೇವೆ. ಎಲ್ಲದರಲ್ಲೂ, ಎಲ್ಲೆಡೆಯೂ ಭಗವಂತನನ್ನು ಕಾಣುವವರಿಂದಲೇ ಇಂಥ ನಮಿಸುವ ಸಂಸ್ಕಾರ ನಿರೀಕ್ಷಿಸಬಹುದು.
ಎಂ.ನಾ.ಚಂಬಲ್ತಿಮಾರ್.
(ಎಂ.ನಾ.ಚಂಬಲ್ತಿಮಾರ್ ಹಿರಿಯ ಪತ್ರಕರ್ತರು ಹಾಗೂ ಅಂಕಣಕಾರರು. ಕಣಿಪುರ ಯಕ್ಷಗಾನ ಪತ್ರಿಕೆಯ ಸಂಪಾದಕರು)