ಸುಳ್ಯ:ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರ ಸಭೆ ಸುಳ್ಯ ಬಿಜೆಪಿ ಮಂಡಲ ಸಮಿತಿ ಕಚೇರಿಯಲ್ಲಿ ನಡೆಯಿತು. ಜೆಡಿಎಸ್ ಎನ್ಡಿಎ ಒಕ್ಕೂಟದ ಭಾಗವಾಗಿರುವ ಹಿನ್ನಲೆಯಲ್ಲಿ ಎರಡೂ ಪಕ್ಷಗಳ ಜಂಟಿ ಸಭೆ ನಡೆಯಿತು. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಎನ್ಡಿಎ ಅಭ್ಯರ್ಥಿ ಬ್ರಿಜೇಶ್ ಚೌಟ ಅವರ ಗೆಲುವಿಗಾಗಿ ಎರಡೂ ಪಕ್ಷಗಳ ಮುಖಂಡರು ಹಾಗೂ
ಕಾರ್ಯಕರ್ತರು ಒಟ್ಟಾಗಿ ದುಡಿಯಲು ನಿರ್ಧರಿಸಲಾಯಿತು.
ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ ‘ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಿಂದ ಜಿಲ್ಲೆಯಲ್ಲಿ ಎನ್ಡಿಎ ಶಕ್ತಿ ಇನ್ನಷ್ಟು ಹೆಚ್ಚಾಗಿದೆ. ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಅವರಿಗೆ ಸುಳ್ಯ ಕ್ಷೇತ್ತದಿಂ 70 ಸಾವಿರ ಬಹುಮತ ಪಡೆಯುವ ನಿಟ್ಟಿನಲ್ಲಿ ಕೆಲಸ ಕಾರ್ಯ ಮಾಡಬೇಕು. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ 4 ಲಕ್ಷ ಮತ ಬಹುಮತ ಗೆಲುವಿನ ನಿರೀಕ್ಷೆ ಇದೆ ಎಂದು ಹೇಳಿದರು.

ಜೆಡಿಎಸ್ ರಾಜ್ಯ ವಕ್ತಾರ ಎಂ.ಬಿ.ಸದಾಶಿವ ಮಾತನಾಡಿ’ ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಅಭಿವೃದ್ಧಿಯ ಹೊಸ ಶಕೆ ಆರಂಭ ಆಗಿದೆ ಎಂದರು. ರಾಜ್ಯದ 18 ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ನಿರ್ಣಾಯಕ ಶಕ್ತಿಯಾಗಿದೆ, ಬಿಜೆಪಿ, ಜೆಡಿಎಸ್ ಮೈತ್ರಿಯಿಂದ ರಾಜ್ಯ ರಾಜಕೀಯದಲ್ಲಿ ದೊಡ್ಡ ಬದಲಾವಣೆ ಸಾಧ್ಯವಾಗಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೂಡ ಒಟ್ಟಾದರೆ ಇಡೀ ದೇಶಕ್ಕೆ ಒಂದು ಉತ್ತಮ ಸಂದೇಶ ಹೋದಂತಾಗುತ್ತದೆ ಎಂದು ಹೇಳಿದರು. ಕಳೆದ 40 ವರ್ಷಗಳಿಂದ ಜಿಲ್ಲೆಯ ಜೆಡಿಎಸ್ ಕಾರ್ಯಕರ್ತರು ನಿಷ್ಠಾವಂತರಾಗಿ ಯಾವುದೇ ಆಮಿಷಕ್ಕೆ ಬಲಿಯಾಗದೆ, ಯಾವುದೇ ಆರ್ಥಿಕ ಸಂಪನ್ಮೂಲ ಇಲ್ಲದಿದ್ದರೂ ಪಕ್ಷಕ್ಕಾಗಿ ಕೆಲಸ ಮಾಡಿದ್ದಾರೆ. ಈ ಬಾರಿ ಡಿಎಸ್ ಬಿಜೆಪಿ ಜೊತೆ ಪ್ರಾಮಾಣಿಕವಾಗಿ ಕೆಲಸ ಮಾಡಲಿದೆ ಎಂದರು.
ಹಿಂದಿನಿಂದಲೂ ಕಾಂಗ್ರೆಸ್ ವಿರೋಧಿ ಅಲೆ ಸುಳ್ಯದಲ್ಲಿ ಇದೆ ಎಂದ ಅವರು
ಸಂಸದರಾಗಿ ನಳಿನ್ ಕುಮಾರ್ ಒಳ್ಳೆಯ ಕೆಲಸ ಮಾಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಸೇರಿ ಈ ಜಿಲ್ಲೆಗೆ ಅತೀ ಹೆಚ್ಚು, ಅನುದಾನ ತಂದಿದ್ದಾರೆ,
ಕೇಂದ್ರ ಸರಕಾರ ಜನರಿಗೆ ಕೊಟ್ಟ ಸಾಧನೆಯನ್ನು ಧೈರ್ಯದಿಂದ ಜನರಿಗೆ ತಿಳಿಸಿ ಮತ ಕೇಳಿ ಎಂದು ಕರೆ ನೀಡಿದರು.

ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಮಾತನಾಡಿ’ ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಕೆಲಸ ಮಾಡಿದರೆ ಉತ್ತಮ ಫಲಿತಾಂಶ ಬರಲು ಸಾಧ್ಯ, ಈ ನಿಟ್ಟಿನಲ್ಲಿ ಸುಳ್ಯ ಕ್ಷೇತ್ರದಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಲಿದೆ ಎಂದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಸುಕುಮಾರ್ ಕೋಡ್ತುಗುಳಿ ಮಾತನಾಡಿ ‘ಮೈತ್ರಿ ಅಭ್ಯರ್ಥಿ ಬ್ರಿಜೇಶ್ ಚೌಟ ಅವರನ್ನು ಗೆಲ್ಲಿಸಲು ಎಲ್ಲಾ ಪ್ರಯತ್ನ ನಡೆಸಲಾಗುವುದು. ಜೆಡಿಎಸ್ನ ಎಲ್ಲಾ ನಾಯಕರು, ಕಾರ್ಯಕರ್ತರು ಇದಕ್ಕಾಗಿ ಒಟ್ಟಾಗಿ ಕೆಲಸ ಮಾಡಲಿದೆ ಎಂದರು.

ಜೆಡಿಎಸ್ ಕಡಬ ತಾಲೂಕು ಅಧ್ಯಕ್ಷ ಸೈಯ್ಯದ್ ಮೀರಾ ಸಾಹೇಬ್, ಬಿಜೆಪಿ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ವಿನಯಕುಮಾರ್ ಕಂದಡ್ಕ ಮಾತನಾಡಿದರು.
ಎಸ್ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್.ಮನ್ಮಥ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜೆಡಿಎಸ್ ಪ್ರಧಾನ ಕಾರ್ಯದರ್ಶಿ ರಾಕೇಶ್ ಕುಂಠಿಕಾನ, ಮುಖಂಡರಾದ ಗೋಪಾಲಕೃಷ್ಣ ಪೂರ್ಲಮಕ್ಕಿ, ಮಹಾಲಕ್ಷ್ಮಿ ಕೊರಂಬಡ್ಕ, ಉದಯಕುಮಾರ್ ದೇರಪ್ಪಜ್ಜನಮನೆ, ರೋಹನ್ ಪೀಟರ್, ರಾಮಚಂದ್ರ ಬಳ್ಳಡ್ಕ, ಹರಿಪ್ರಸಾದ್ ಎನ್ಕಾಜೆ, ಡಾ.ತಿಲಕ್, ಚೋಮ ಎಂ.ಬಿ, ಹನೀಫ್ ಮೊಟ್ಟೆಂಗಾರ್, ಅಬ್ದುಲ್ ಖಾದರ್ ಕಡಬ, ಶಿವರಾಮ ಚಿಲ್ತಡ್ಕ, ಶಿವರಾಮ ಚಿಲ್ತಡ್ಕ,

ಬಿಜೆಪಿ ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಕುಸುಮಾಧರ ಎ.ಟಿ, ಬಿಜೆಪಿ ಮುಖಂಡರಾದ ಶಿವಾನಂದ ಕುಕ್ಕುಂಬಳ, ಐ.ಬಿ.ಚಂದ್ರಶೇಖರ, ವಸಂತ ನಡುಬೈಲು, ಅಶೋಕ್ ಅಡ್ಕಾರ್, ವೆಂಕಟ್ರಮಣ ಮುಳ್ಯ, ಸುಧಾಕರ ಕಾಮತ್, ಪ್ರಸಾದ್ ಕಾಟೂರು ಮತ್ತಿತರರು ಉಪಸ್ಥಿತರಿದ್ದರು.