ಸುಳ್ಯ: ಕೇಂದ್ರ ಸರ್ಕಾರದ ಮಿಷನ್ ಫಾರ್ ಇಂಟೆಗ್ರೇಟೆಡ್ ಡೆವಲಪ್ಮೆಂಟ್ ಆಫ್ ಹಾರ್ಟಿಕಲ್ಚರ್ ಯೋಜನೆಯಡಿ ಸೆಂಟ್ರಲ್ ಪ್ಲಾಂಟೇಶನ್ ಕ್ರಾಪ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್ (CPCRI) ನೇತೃತ್ವದಲ್ಲಿ ದಕ್ಷಿಣ ಕನ್ನಡದಲ್ಲಿ ವ್ಯಾಪಕವಾಗಿರುವ ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ಸುಳ್ಯದ ಗುತ್ತಿಗಾರಿನಲ್ಲಿ ಅಳವಡಿಸಿರುವ ವಿಶೇಷ ಪ್ರಾತಕ್ಷಿಕೆ ಕುರಿತಂತೆ ಇಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಅಡಿಕೆ ಬೆಳೆಗಾರರ ತೋಟಕ್ಕೆ ಭೇಟಿ ನೀಡಿ ಮಾಹಿತಿ ಪಡೆದದರು.ಗುತ್ತಿಗಾರು ಚನಿಲದಲ್ಲಿರುವ
ಸುಬ್ರಹ್ಮಣ್ಯ ಪ್ರಸಾದ್ ಹಾಗೂ ಸುತ್ತಲಿನ ಅಡಿಕೆ ಬೆಳೆಗಾರರ ತೋಟಕ್ಕೆ ಸಂಸದರು, ಸಿಪಿಸಿಆರ್ಐ ಕಾಸರಗೋಡು ನಿರ್ದೇಶಕರಾದ ಡಾ. ಬಾಲಚಂದ್ರ ಹೆಬ್ಬಾರ್ , ಕ್ಯಾಂಪ್ಕೋ ಅಧ್ಯಕ್ಷರಾದ ಸತೀಶ್ಚಂದ್ರ, ಹಾಗೂ ಕೃಷಿ ವಿಜ್ಞಾನಿಗಳು ಭೇಟಿ ನೀಡಿದರು. ಎಲೆಚುಕ್ಕೆ ರೋಗ ನಿಯಂತ್ರಣಕ್ಕೆ ಅಳವಡಿಸಿರುವ ಪೋಷಕಾಂಶ ಮತ್ತು ವೈಜ್ಞಾನಿಕ ವಿಧಾನ ಆಧಾರಿತ ಪ್ರಾತ್ಯಕ್ಷಿಕೆಗಳ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡರು.
ಗುತ್ತಿಗಾರು ಗ್ರಾಮದಲ್ಲಿ ಸುಬ್ರಹ್ಮಣ್ಯ ಪ್ರಸಾದ್ ಅವರ ಒಂದೂವರೆ ಎಕರೆ ಸೇರಿದಂತೆ ಸುತ್ತಲಿನ ಅಡಿಕೆ ಕೃಷಿಕರ ಒಟ್ಟು 6 ಎಕರೆಯಲ್ಲಿ ಪ್ರಾಯೋಗಿಕವಾಗಿ ಎಲೆಚುಕ್ಕಿ ರೋಗ ತಡೆಯಲು ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ(CPCRI)ಯ ವಿಟ್ಲ ಪ್ರಾಂತೀಯ ಕ್ಷೇತ್ರದ ಮಾರ್ಗದರ್ಶನದಲ್ಲಿ ಪೋಷಕಾಂಶ ಮತ್ತು ವೈಜ್ಞಾನಿಕ ವಿಧಾನಗಳ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ. ಕಳೆದ ಜೂನ್ನಿಂದ ಇವರೆಲ್ಲರ ತೋಟದಲ್ಲಿ ವೈಜ್ಞಾನಿಕ ಕ್ರಮಗಳನ್ನು ಕೈಗೊಂಡು ಅಡಿಕೆ ಬೆಳೆಗೆ ಬಾಧಿಸುವ ಎಲೆಚುಕ್ಕಿ ರೋಗದ ಬಗ್ಗೆ ಕಾಲ-ಕಾಲಕ್ಕೆ ಹೆಚ್ಚಿನ ನಿಗಾ, ಅಗತ್ಯ ಮಾಹಿತಿ ಸಂಗ್ರಹಿಸಿ ಪ್ರಾತ್ಯಕ್ಷೆಗಳ ಮೂಲಕ ಪೂರಕ ಅಧ್ಯಯನ ನಡೆಸಲಾಗುತ್ತಿದೆ. ಜತೆಗೆ

ಕೃಷಿಕರಿಗೂ ಈ ಎಲೆಚುಕ್ಕಿ ರೋಗ ತಡೆಯಲು ಅಡಿಕೆ ತೋಟದಲ್ಲಿ ಏನೆಲ್ಲ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆಂಬ ಬಗ್ಗೆ ಕಾಲ-ಕಾಲಕ್ಕೆ ಕೃಷಿ ವಿಜ್ಞಾನಿಗಳು ಭೇಟಿ ನೀಡಿ ಮಾರ್ಗದರ್ಶನ ನೀಡುತ್ತಿದ್ದಾರೆ.
ಈ ಸಂದರ್ಭದಲ್ಲಿ ಸಿಪಿಸಿಆರ್ಐ ವಿಟ್ಲದ ರಾಜೇಶ್, ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷರಾದ ವೆಂಕಟ್ ವಳಲಂಬೆ, ಮುಖಂಡರಾದ ವೆಂಕಟ್ ದಂಬೆಕೋಡಿ, ಕೇಶವ ಭಟ್ ಮುಳಿಯ, ಗುತ್ತಿಗಾರು ಸಹಕಾರಿ ಸಂಘದ ಅಧ್ಯಕ್ಷರಾದ ಜಯಪ್ರಕಾಶ್ ಮೊಗ್ರ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು, ಕೃಷಿ ವಿಜ್ಞಾನಿಗಳು, ಅಡಿಕೆ ಬೆಳೆಗಾರರು ಮತ್ತು ಸ್ಥಳೀಯರು ಜೊತೆಗಿದ್ದರು.
ಅಟೋಮ್ಯಾಟಿಕ್ ವೆದರ್ ಸ್ಟೇಷನ್ :
ಎಲೆ ಚುಕ್ಕಿ ರೋಗವು ಸಾಮಾನ್ಯವಾಗಿ ಮಳೆ ಜಾಸ್ತಿಯಾಗಿ ಅದರ ತೇವಾಂಶದಿಂದ ಗಾಳಿ ಮೂಲಕ ಅಡಿಕೆ ಮರಗಳಿಗೆ ವೇಗವಾಗಿ ಹರಡುತ್ತದೆ. ಮಳೆ ಜಾಸ್ತಿ ಸೇರಿದಂತೆ ಹವಾಮಾನ ಬದಲಾವಣೆ ಕೂಡ ಎಲೆಚುಕ್ಕಿ ರೋಗ ವ್ಯಾಪಕಕ್ಕೆ ಒಂದು ಕಾರಣವಾಗಿದೆ. ಈ ಹಿನ್ನಲೆಯಲ್ಲಿ ಸುಬ್ರಹ್ಮಣ್ಯ ಪ್ರಸಾದ್ ಅವರ ಅಡಿಕೆ ತೋಟದಲ್ಲಿ ಅಧ್ಯಯನದ ದೃಷ್ಟಿಯಿಂದ ಅಟೋಮ್ಯೆಟಿಕ್ ವೆದರ್ ಸ್ಟೇಷನ್ ಕೂಡ ಅಳವಡಿಸಲಾಗಿದೆ. ಇದರಿಂದ ಎಷ್ಟು ಪ್ರಯಾಣದ ಮಳೆಯಾಗಿದೆ, ತೇವಾಂಶ, ತಾಪಮಾನ ಸೇರಿದಂತೆ ಹವಾಮಾನ ಬದಲಾವಣೆಯಿಂದ ಈ ಎಲೆಚುಕ್ಕಿ ರೋಗ ಯಾವ ರೀತಿ ಹರಡುತ್ತದೆ ಎಂಬುದರ ಅಧ್ಯಯನ ಕೂಡ ಇದರಿಂದ ಸಾಧ್ಯವಾಗಲಿದೆ.













