ಹೋವ್(ಇಂಗ್ಲೆಂಡ್):ಭಾರತದ ಅಂಡರ್-19 ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 6 ವಿಕೆಟ್ಗಳಿಂದ ಸುಲಭ ಗೆಲುವು ಸಾಧಿಸಿದೆ. ವೈಭವ್ ಸೂರ್ಯವಂಶಿ ಅವರ 48 ರನ್ಗಳ ಸ್ಫೋಟಕ ಇನ್ನಿಂಗ್ಸ್ ಮತ್ತು ಕನಿಷ್ಕ್ ಚೌಹಾಣ್ ಅವರ 3 ವಿಕೆಟ್ಗಳ ಅದ್ಭುತ ಬೌಲಿಂಗ್ ಭಾರತದ ಗೆಲುವಿಗೆ ಕಾರಣವಾಯಿತು. ಇಂಗ್ಲೆಂಡ್ ಕೇವಲ
175 ರನ್ಗಳಿಗೆ ಆಲೌಟ್ ಆಯಿತು. ಈ ಗೆಲುವಿನೊಂದಿಗೆ ಭಾರತ 5 ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಆತಿಥೇಯ ಇಂಗ್ಲೆಂಡ್ ತಂಡವು ಕೇವಲ 175 ರನ್ಗಳಿಗೆ ಆಲೌಟ್ ಆಯಿತು. ಆತಿಥೇಯ ತಂಡದ ಪರ, ಇಂಗ್ಲೆಂಡ್ನ ಲೆಜೆಂಡರಿ ಆಲ್ರೌಂಡರ್ ಆಂಡ್ರ್ಯೂ ಫ್ಲಿಂಟಾಫ್ ಅವರ ಪುತ್ರ ರಾಕಿ ಫ್ಲಿಂಟಾಫ್ ಅತ್ಯಧಿಕ 56 ರನ್ಗಳ ಇನ್ನಿಂಗ್ಸ್ ಆಡಿದರು. ಅವರನ್ನು ಹೊರತುಪಡಿಸಿ, ಆರಂಭಿಕ ಆಟಗಾರ ಐಸಾಕ್ ಮೊಹಮ್ಮದ್ ಕೇವಲ 28 ಎಸೆತಗಳಲ್ಲಿ 42 ರನ್ ಗಳಿಸಿದರು. ಇತ್ತ ಟೀಂ ಇಂಡಿಯಾ ಪರ ಮಾರಕ ದಾಳಿ ನಡೆಸಿದ ಕನಿಷ್ಕ್ ಚೌಹಾಣ್ 10 ಓವರ್ ಬೌಲ್ ಮಾಡಿ ಕೇವಲ 20 ರನ್ಗಳನ್ನು ಬಿಟ್ಟುಕೊಟ್ಟು 3 ವಿಕೆಟ್ ಪಡೆದರು. ಕನಿಷ್ಕ್ ಹೊರತುಪಡಿಸಿ, ಮೊಹಮ್ಮದ್ ಅನ್ನನ್, ಆರ್ಎಸ್ ಅಂಬ್ರಿಶ್ ಮತ್ತು ಹೆನಿಲ್ ಪಟೇಲ್ ಕೂಡ ಪರಿಣಾಮಕಾರಿಯಾಗಿ ಬೌಲಿಂಗ್ ಮಾಡಿ ಮೂವರು ಬೌಲರ್ಗಳು ತಲಾ 2 ವಿಕೆಟ್ಗಳನ್ನು ಪಡೆದರು.
ಈ ಗುರಿ ಬೆನ್ನಟ್ಟಿದ ಭಾರತದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ವೈಭವ್ ಸೂರ್ಯವಂಶಿ ಮತ್ತು ಆಯುಷ್ ಮ್ಹಾತ್ರೆ ಪವರ್ ಪ್ಲೇ ಮುಗಿಯುವುದಕ್ಕೂ ಮುನ್ನವೇ ತಂಡದ ಗೆಲುವನ್ನು ಖಚಿತಪಡಿಸಿದರು. ಅದರಲ್ಲೂ ಆರಂಭದಿಂದಲೇ ಸ್ಫೋಟಕ ಬ್ಯಾಟಿಂಗ್ ನಡೆಸಿದ ವೈಭವ್ ಸಿಕ್ಸರ್ಗಳ ಸುನಾಮಿ ಎಬ್ಬಿಸಿದರು. ಆದಾಗ್ಯೂ ಅರ್ಧಶತಕದಂಚಿನಲ್ಲಿ ಎಡವಿದ ವೈಭವ್ ಕೇವಲ 19 ಎಸೆತಗಳಲ್ಲಿ 48 ರನ್ ಗಳಿಸಿ ಔಟಾದರು. ಈ ಇನ್ನಿಂಗ್ಸ್ನಲ್ಲಿ, ಅವರು 5 ಸಿಕ್ಸರ್ ಮತ್ತು 3 ಬೌಂಡರಿಗಳನ್ನು ಬಾರಿಸಿದರು. ಅಂದರೆ ಅವರು ಸಿಕ್ಸರ್ಗಳು ಮತ್ತು ಬೌಂಡರಿಗಳಿಂದಲೇ 42 ರನ್ ಗಳಿಸಿದರು. ಅವರ ಆಕ್ರಮಣಕಾರಿ ಶೈಲಿಯಿಂದಾಗಿ ಭಾರತ ತಂಡ ಕೇವಲ 8 ನೇ ಓವರ್ನಲ್ಲಿ 71 ರನ್ ಗಳಿಸಿತ್ತು. ಉಪ ನಾಯಕ ಅಭಿಗ್ಯಾನ್ ಕುಂಡು ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿ ಕೇವಲ 34 ಎಸೆತಗಳಲ್ಲಿ 45 ರನ್ ಬಾರಿಸಿ 24 ನೇ ಓವರ್ನಲ್ಲಿಯೇ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.