*ಗಂಗಾಧರ ಕಲ್ಲಪಳ್ಳಿ.
ಸುಳ್ಯ:ತೆಂಗಿನಕಾಯಿಯ ದರ ದಿನೇ ದಿನೇ ಏರಿಕೆಯಾಗುತ್ತಿದ್ದು ದಾಖಲೆ ಬರೆದಿದೆ. ತೆಂಗಿನ ಕಾಯಿ ದರ ಸುಳ್ಯ, ಬೆಳ್ಳಾರೆ ಮತ್ತಿತರ ಪೇಟೆಗಳಲ್ಲಿ ಏರಿಕೆ ಕಂಡಿದ್ದು ರೀಟೇಲ್ನಲ್ಲಿ ಕೆ.ಜಿ.ಗೆ 80 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಹೋಲ್ ಸೇಲ್ ದರ ಕೆಜಿಗೆ ರೂ.76-77 ಇದೆ. ಒಂದು ಸಾಮಾನ್ಯ ತೆಂಗಿನ ಕಾಯಿ ಖರೀದಿಸಲು ರೂ. 40-50 ನೀಡಬೇಕಾಗುತ್ತದೆ. ಕಳೆದ ಕೆಲವು ಸಮಯದಿಂದ ಕೆಜಿಗೆ 60-65ರ ಆಸುಪಾಸಿನಲ್ಲಿದ್ದ ತೆಂಗಿನ ಕಾಯಿ ದರ ಇದೀಗ ವಾರದಿಂದೀಚೆಗೆ
80ಕ್ಕೇರಿದೆ. ಸಾಮಾನ್ಯವಾಗಿ 35-40ರ ರೇಂಜ್ನಲ್ಲಿದ್ದ ತೆಂಗಿನ ದರ ಕಳೆದ 6 ತಿಂಗಳಿನಿಂದ ಏರಿಕೆ ಕಂಡಿದೆ. ಉತ್ಪಾದನೆ ಕಡಿಮೆಯಾಗಿ ಬೇಡಿಕೆಗೆ ತಕ್ಕಂತೆ ತೆಂಗಿನ ಕಾಯಿ ಸರಬರಾಜು ಇಲ್ಲದೆ ಇರುವುದು ದರ ಏರಲು ಕಾರಣವಾಗಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ. ಹಿಂದೆಲ್ಲಾ ಗಾತ್ರ ಆಧರಿಸಿ ತೆಂಗಿನಕಾಯಿ ಮಾರಾಟ ಮಾಡಲಾಗುತ್ತಿತ್ತು. ಹೋಲ್ಸೇಲ್ನಲ್ಲಿ 100, 1,000 ಲೆಕ್ಕದಲ್ಲಿ ತೆಂಗಿನಕಾಯಿ ಮಾರಾಟ ನಡೆಯುತ್ತಿತ್ತು. ಆದರೆ, ಕಳೆದ ಕೆಲವು ವರ್ಷಗಳಿಂದ ಕೆಜಿ ಲೆಕ್ಕದಲ್ಲಿ ತೆಂಗಿನಕಾಯಿ ಮಾರಾಟ ನಡೆಯುತ್ತಿದೆ.

ಇತ್ತೀಚಿನ ವರ್ಷಗಳಲ್ಲೇ ತೆಂಗಿನಕಾಯಿಗೆ ದೊರೆಯುತ್ತಿರುವ ಉತ್ತಮ ಧಾರಣೆ ಇದಾಗಿದೆ. ಆದರೆ ತೆಂಗಿನ ಕಾಯಿ ಉತ್ಪಾದನೆ ವಿಪರೀತ ಇಳಿಕೆಯಾಗಿದ್ದು ದರ ಇದ್ದರೂ ಮಾರಾಟ ಮಾಡಲು ತೆಂಗಿನ ಕಾಯಿ ಇಲ್ಲದ ಸ್ಥಿತಿ ಕೃಷಿಕರದ್ದು.ಕಲ್ಪವೃಕ್ಷ ಎಂದೇ ಕರೆಯಲಾಗುವ ತೆಂಗಿನ ಮರದ ಎಳನೀರು, ತೆಂಗು ಕೊಬ್ಬರಿ, ತೆಂಗಿನ ಎಣ್ಣೆ ಮಾರುಕಟ್ಟೆಯಲ್ಲಿ ಉತ್ತಮ ಧಾರಣೆಯಿದೆ.ಆದರೆ ಉತ್ಪಾದನೆ ಕಡಿಮೆಯಾಗಿರುವುದು ಧಾರಣೆ ಏರಲು ಕಾರಣವಾಗಿದೆ. ತೆಂಗಿನ ಮರಗಳಿಗೆ ಬಾದಿಸಿದ ರೋಗಗಳು, ಮಂಗಗಳ ಕಾಟ, ಹೊಸತಾಗಿ ತೆಂಗಿನ ಕೃಷಿ ನಡೆಸದೇ ಇರುವುದು,
ಕೆಲವು ಕಡೆ ತೆಂಗು ಬೆಳೆಗಾರರು ಎಳನೀರು ಇಳಿಸಲು ಆದ್ಯತೆ ನೀಡಿರುವುದು ಮತ್ತಿತರ ಕಾರಣಗಳಿಂದ ತೆಂಗು ಉತ್ಪಾದನೆ ಕಡಿಮೆಯಾಗಿ
ದರ ಏರಿಕೆಯಾಗಲು ಕಾರಣವಾಗಿದೆ.
ಸುಳ್ಯ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಮಂಗಗಳ ಕಾಟ ವಿಪರೀತವಾಗಿದ್ದು ತೆಂಗಿನ ಕಾಯಿಯ ಇಳುವರಿ ತೀವ್ರ ಕುಂಠಿತವಾಗಿದೆ. ರೋಗಗಳ ಹಾವಳಿ, ದರ ಕುಸಿತ ಮತ್ತಿತರ ಕಾರಣಗಳಿಂದ ಬೆಳೆಗಾರರು ತೆಂಗು ಕೃಷಿಯಿಂದ ದೂರವಾಗಿ ತೆಂಗು ಬೆಳೆಯುವುದು ಕಡಿಮೆ ಮಾಡಿ ಪರ್ಯಾಯ ಬೆಳೆಯತ್ತ ಯೋಚನೆ ಮಾಡಿರುವುದು ಕೂಡ ಉತ್ಪಾದನೆ ಕಡಿಮೆಯಾಗಲು ಕಾರಣವಾಗಿದೆ. ಇದರಿಂದ ಬಂಪರ್ ಬೆಲೆ ಇದ್ದರೂ ಅದರ ಪ್ರಯೋಜನ ಕೃಷಿಕರಿಗೆ ದೊರೆಯುತ್ತಿಲ್ಲ. ಮಂಗಗಳು, ಆನೆಗಳು, ಹಂದಿಗಳು ಸೇರಿ ವನ್ಯ ಜೀವಿಗಳ ಹಾವಳಿ ಅಧಿಕವಾಗಿದ್ದು ಕೃಷಿಕ ಬೆಳೆದ ಬಹುತೇಕ ತೆಂಗಿನ ಕಾಯಿಗಳು ಪ್ರಾಣಿಗಳ ಪಾಲಾಗುತ್ತವೆ. ಗ್ರಾಮೀಣ ಭಾಗದಲ್ಲಿ ಕಾಡಾನೆ ದಾಳಿ ವಿಪರೀತವಾಗಿದ್ದು ತೆಂಗಿನ ಗಿಡ, ಮರಗಳನ್ನು ವ್ಯಾಪಕವಾಗು ನಾಶಪಡಿಸುತ್ತದೆ. ಮಂಗಗಳನ್ನು ಕಾಯಿ, ಎಳನೀರು, ಬೆಳೆದ ಕಾಯಿಗಳನ್ನು ನಾಶವಪಡಿಸುತ್ತದೆ. ಬೆಳೆದು ಬಿದ್ದರೆ ತೆಂಗಿನ ಕಾಯಿ ಹಂದಿಗಳ ಪಾಲಾಗುತ್ತದೆ. ರೋಗ, ಕೀಟ ಬಾದೆಯನ್ನು ಎದುರಿಸಿ ಒಂದಿಷ್ಟು ತೆಂಗಿನ ಫಸಲು ಬಂದರೂ ಅದು ವನ್ಯ ಜೀವಿಗಳ ಪಾಲಾಗುತ್ತದೆ. ಆದುದರಿಂದ ತೆಂಗಿನ ಇಳುವರಿ ಕೃಷಿಕರಿಗೆ ದೊರೆಯುವುದೇ ಅಪರೂಪವಾಗಿದೆ ಎನ್ನುತ್ತಾರೆ ಕೃಷಿಕರು.

ಸುಳ್ಯ ಹಾಗೂ ಇತರ ಮಾರುಕಟ್ಟೆಗಳಿಗೆ ಸ್ಥಳೀಯವಾಗಿಯೇ ತೆಂಗಿನ ಕಾಯಿ ಸರಬರಾಜಾಗುತ್ತದೆ. ಕೆಲವು ವರ್ಷಗಳ ಹಿಂದೆ ಮಾರುಕಟ್ಟೆಗೆ ಬರುತ್ತಿದ್ದ ತೆಂಗಿನ ಕಾಯಿಯ ಪ್ರಮಾಣದ ಅರ್ಧದಷ್ಟು ಮಾತ್ರ ಈಗ ಮಾರುಕಟ್ಟೆಗೆ ಬರುತಿದೆ ಎನ್ನುತ್ತಾರೆ ವ್ಯಾಪಾರಿಗಳು.
ಮನೆಗಳಲ್ಲಿ, ಹೋಟೆಲ್ಗಳಲ್ಲಿ ಚಟ್ನಿ, ಸಾಂಬರ್ ಸೇರಿದಂತೆ ಎಲ್ಲಾ ಪದಾರ್ಥಗಳ ತಯಾರಿಕೆಗೆ ತೆಂಗಿನಕಾಯಿ ಅಗತ್ಯವಾಗಿ ಬೇಕು. ಇಡ್ಲಿ, ದೋಸೆ, ಪಲಾವ್ ಸಹಿತ ಬೆಳಗಿನ ಉಪಾಹಾರದ ಜತೆಗೆ ಚಟ್ನಿ ತಯಾರಿಸಲು ಹಾಗೂ ಸಾಂಬಾರ್ ಪಲ್ಯಕ್ಕೆ ಟೆಂಗಿನಕಾಯಿ ಹೆಚ್ಚಾಗಿ ಬಳಸಬೇಕಿದೆ. ಹೀಗಿರುವಾಗ ದರ ಏರಿಕೆ ಗ್ರಾಹಕರಿಗೂ ಹೊಟೇಲ್ ಉದ್ಯಮಕ್ಕೂ ಬಿಸಿ ಮುಟ್ಟಿಸಿದೆ. ಕೆಲವೇ ತಿಂಗಳಲ್ಲಿ ತೆಂಗಿನಕಾಯಿ ದರ ಎರಡೂವರೆ ಪಟ್ಟು ಹೆಚ್ಚಾಗಿದೆ. ಅದರಲ್ಲೂ ಗುಣಮಟ್ಟದ
ತೆಂಗಿನಕಾಯಿಗಳು ಸಿಗುತ್ತಿಲ್ಲ ಎನ್ನುತ್ತಾರೆ ಹೊಟೇಲ್ ಮಾಲೀಕರು. ಪೂಜೆ ಮತ್ತಿತರ ಅಗತ್ಯತೆಗಳಿಗೂ ದರ ಏರಿಕೆಯ ಬಿಸಿ ಮುಟ್ಟಿದೆ. ತೆಂಗಿನ ಕಾಯಿ ಖರೀದಿಸುವವರ ಸಂಖ್ಯೆ ಕಡಿಮೆಯಾಗುತಿದೆ ಎನ್ನುತ್ತಾರೆ ವ್ಯಾಪಾರಿಗಳು, ದರ ಏರಿಕೆಯಿಂದ ದಿನ ನಿತ್ಯದ ಖರ್ಚು ಹೆಚ್ಚಿದೆ, ಎರಡೂ ತೆಂಗಿನ ಕಾಯಿ ಖರೀದಿಸಲು 100 ರೂ.ಗಿಂತಲೂ ಅಧಿಕ ನೀಡಬೇಕಾಗಿದೆ, ತೆಂಗಿನ ಎಣ್ಣೆಗೂ ದರ ಏರಿಕೆಯಾಗಿದೆ ಎನ್ನುತ್ತಾರೆ ಗ್ರಾಹಕರು.
“ಕಳೆದ ಕೆಲವು ದಿನಗಳಿಂದ ತೆಂಗಿನ ಕಾಯಿ ದರ ಕೆಜಿಗೆ ರೂ.80ಕ್ಕೆ ಏರಿದೆ. ಮಾರುಕಟ್ಟೆಗೆ ತೆಂಗಿನ ಕಾಯಿಗೆ ಬೇಡಿಕೆ ಹೆಚ್ಚಾಗಿರುವುದು ಮತ್ತು ಸರಬರಾಜು ಕಡಿಮೆಯಾಗಿರುವುದು ದರ ಏರಲು ಕಾರಣವಾಗಿದೆ. ಕೆಲವು ವರ್ಷಗಳ ಹಿಂದೆಗೆ ಹೋಲಿಸಿದರೆ ಮಾರುಕಟ್ಟೆಗೆ ತೆಂಗಿನ ಕಾಯಿ ಸರಬರಾಜು ಶೇ.50ರಷ್ಟು ಕಡಿಮೆಯಾಗಿದೆ.”
-ಸಿದ್ದಿಕ್ ಕೊಕ್ಕೊ.
ತೆಂಗಿನ ಕಾಯಿ ವ್ಯಾಪಾರಿ.