ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ 14 ಅಂಶಗಳ ಒಪ್ಪಂದದ ಕರಡು ಪ್ರತಿಗೆ ಸಹಿ ಹಾಕಿದ್ದಾರೆ ಎಂದು ವರದಿಯಾಗಿದೆ. ಸೇನಾ ಕಾರ್ಯಾಚರಣೆ ಅಂತ್ಯ, ಹೊರ್ಮುಜ್ ಜಲಸಂಧಿಯನ್ನು ಸಂಚಾರಕ್ಕೆ ಮುಕ್ತಗೊಳಿಸುವುದು, ಆರ್ಥಿಕ ನಿರ್ಬಂಧನೆಗಳ
ತೆರವು, ಇರಾನ್ನ ಪರಮಾಣು ಯೋಜನೆ ಕುರಿತು ಮಾತುಕತೆಯ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು 60 ದಿನಗಳ ಪ್ರಕ್ರಿಯೆಯನ್ನು ಪ್ರಾರಂಭಿಸುವುದು ಈ ಒಪ್ಪಂದದ ಮುಖ್ಯ ಉದ್ದೇಶವಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ಯಾರಿಸ್ನಲ್ಲಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್ ಅವರನ್ನು ಭೇಟಿಯಾಗಿದ್ದಾಗ ಟ್ರಂಪ್ ಅವರು ಬುಧವಾರ ಒಪ್ಪಂದದ ಕರಡು ಪ್ರತಿಗೆ ಸಹಿ ಹಾಕಿದ್ದಾರೆ ಎಂದು ವರದಿಗಳು ಹೇಳಿವೆ. ಪೆಜೆಶ್ಕಿಯಾನ್ ಅವರೂ ಒಪ್ಪಂದಕ್ಕೆ ಸಹಿ ಮಾಡಿರುವುದರಿಂದ ಈ ಒಪ್ಪಂದವು ತಕ್ಷಣವೇ ಜಾರಿಗೆ ಬಂದಿದೆ.ಶಾಂತಿ ಒಪ್ಪಂದದ ಕರಡು ಅಂತಿಮಗೊಳಿಸಿ ಉಭಯ ದೇಶಗಳ ನಾಯಕರು ಸಹಿ ಮಾಡಿದ್ದಾರೆ ಎಂದು ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಕಾಯಿ ಖಚಿತಪಡಿಸಿದ್ದಾರೆ.
ಹೊರ್ಮುಜ್ ಜಲಸಂಧಿಯನ್ನು ಸಂಚಾರ ಮುಕ್ತಗೊಳಿಸುವುದಕ್ಕೆ ಸಂಬಂಧಿಸಿದಂತೆ ಒಮ್ಮತಕ್ಕೆ ಬರಲಾಗಿದೆ ಎಂದಿದ್ದಾರೆ.
ಈ 14 ಅಂಶಗಳ ಒಪ್ಪಂದವು ಲೆಬನಾನ್ ಸೇರಿದಂತೆ ಇತರ ಕಡೆಗಳಲ್ಲಿನ ಮಿಲಿಟರಿ ಕಾರ್ಯಾಚರಣೆಗಳನ್ನು ತಕ್ಷಣವೇ ಮತ್ತು ಶಾಶ್ವತವಾಗಿ ನಿಲ್ಲಿಸಲು ಸೂಚಿಸುತ್ತದೆ. ಉಭಯ ದೇಶಗಳ ಪರಸ್ಪರ ಒಪ್ಪಿಗೆಯೊಂದಿಗೆ ವಿಸ್ತರಿಸಬಹುದಾದ 60 ದಿನಗಳ ಒಳಗೆ ಅಂತಿಮ ಒಪ್ಪಂದವನ್ನು ತಲುಪಲು ಎರಡೂ ದೇಶಗಳು ಪ್ರತಿಜ್ಞೆ ಮಾಡಿವೆ.ಹಂತ ಹಂತವಾಗಿ ನಿರ್ಬಂಧಗಳ ಸಡಿಲಿಕೆ, ಮುಟ್ಟುಗೋಲು ಹಾಕಿಕೊಳ್ಳಲಾದ ಇರಾನ್ನ ಆಸ್ತಿ ಬಿಡುಗಡೆ, ಇರಾನ್ ತೈಲ ರಫ್ತುಗಳ ಮೇಲಿನ ಅಮೆರಿಕ ಹಣಕಾಸು ಇಲಾಖೆಯ ವಿನಾಯಿತಿಗಳು ಮತ್ತು ಇರಾನ್ಗಾಗಿ ಅಮೆರಿಕದ ಬೆಂಬಲದೊಂದಿಗೆ ಕನಿಷ್ಠ 300 ಶತಕೋಟಿ ಯುಎಸ್ ಡಾಲರ್ ಮೌಲ್ಯದ ಪುನರ್ನಿರ್ಮಾಣ ಮತ್ತು ಆರ್ಥಿಕ ಅಭಿವೃದ್ಧಿ ಕಾರ್ಯಕ್ರಮವನ್ನು ಒಪ್ಪಂದ ಒಳಗೊಂಡಿದೆ.ತಾವು ಯಾವುದೇ ಕಾರಣಕ್ಕೂ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದುವುದಿಲ್ಲ ಎಂದು ಇರಾನ್ ಪುನರುಚ್ಚರಿಸಿದೆ ಎಂದೂ ಮಾಧ್ಯಮಗಳು ವರದಿ ಮಾಡಿವೆ.








